ನವದೆಹಲಿ: ಕಾಶ್ಮೀರದ ಪಹಲ್ಗಾಂ ನರಮೇಧಕ್ಕೆ ಪ್ರತಿಯಾಗಿ ನಡೆಸಿದ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆ ವೇಳೆ ಭಾರತವು ಪಾಕಿಸ್ತಾನದ ಅಣ್ವಸ್ತ್ರ ಸಂಗ್ರಹ ಕೇಂದ್ರ ಎನ್ನಲಾದ ಕಿರಾನಾ ಬೆಟ್ಟಗಳ ಮೇಲೂ ದಾಳಿ ನಡೆಸಿದ್ದನ್ನು ಖಚಿತಪಡಿಸುವ ಹೊಸ ಉಪಗ್ರಹ ಚಿತ್ರಗಳು ಬಿಡುಗಡೆಯಾಗಿವೆ. ಆದರೆ ಭಾರತದ ದಾಳಿಯ ಉದ್ದೇಶವು ಈ ಅಣ್ವಸ್ತ್ರ ಸಂಗ್ರಹಾಗಾರ ನಾಶ ಮಾಡುವುದಾಗಿರಲಿಲ್ಲ. ಬದಲಾಗಿ ಮತ್ತೆ ಭಾರತವನ್ನು ಕೆಣಕಿದರೆ ಸುಮ್ಮನೆ ಬಿಡಲ್ಲ ಎಂಬ ಎಚ್ಚರಿಕೆ ಸಂದೇಶ ರವಾನಿಸುವುದಷ್ಟೇ ಆಗಿತ್ತು ಎಂದು ತಜ್ಞರೊಬ್ಬರು ಹೇಳಿದ್ದಾರೆ.
‘ಆಪರೇಷನ್ ಸಿಂದೂರ’ ಕಾರ್ಯಾಚರಣೆ ನಡೆದು ಎರಡು ತಿಂಗಳ ಬಳಿಕ ಜೂನ್‌ನಲ್ಲಿ ಗೂಗಲ್ ಅರ್ಥ್ ಉಪಗ್ರಹ ತೆಗೆದಿರುವ ಚಿತ್ರವನ್ನು ಆಧರಿಸಿ ಈ ವಿಶ್ಲೇಷಣೆ ಮಾಡಲಾಗಿದೆ.ಮೇ 10ರಂದು ಪಾಕಿಸ್ತಾನದ ಹಲವು ಪ್ರಮುಖ ಮಿಲಿಟರಿ ನೆಲೆಗಳ ಮೇಲೆ ಭಾರತ ವಾಯು ದಾಳಿ ನಡೆಸಿತ್ತು. ಇದರಲ್ಲಿ ಸರ್ಗೋದಾ ಜಿಲ್ಲೆಯ ಕಿರಾನಾ ಬೆಟ್ಟ ಪ್ರದೇಶ ಕೂಡ ಸೇರಿತ್ತು. ಈ ಬೆಟ್ಟ ಪ್ರದೇಶವು ಪಾಕಿಸ್ತಾನದ ಅಣ್ವಸ್ತ್ರಗಳ ಸಂಗ್ರಹಾಗಾರ ಎಂಬ ವಾದ ಕೇಳಿಬಂದಿತ್ತು. ಜೊತೆಗೆ ಅಮೆರಿಕ ಕೂಡ ತನ್ನ ಅಣ್ವಸ್ತ್ರಗಳನ್ನು ಅಲ್ಲಿ ಸಂಗ್ರಹಿಸಿಟ್ಟಿದೆ ಎಂದು ವರದಿಗಳು ಹೇಳಿದ್ದವು. ಆದರೆ ದಾಳಿಯ ಬಳಿಕ ಹಲವು ಸಂದರ್ಭಗಳಲ್ಲಿ ಪಾಕಿಸ್ತಾನದ ಅಣ್ವಸ್ತ್ರ ನೆಲೆಗಳ ಮೇಲಿನ ದಾಳಿಯನ್ನು ಭಾರತೀಯ ಸೇನೆ ತಳ್ಳಿಹಾಕಿತ್ತು.
ಇದೀಗ ಗೂಗಲ್ ಅರ್ಥ್‌ನ ಉಪಗ್ರಹ ಚಿತ್ರಗಳು ಬೇರೆಯದೇ ಕಥೆಯನ್ನು ಹೇಳಿವೆ. ಈ ಚಿತ್ರಗಳಲ್ಲಿ ಅಣ್ವಸ್ತ್ರ ಸಂಗ್ರಹಾಗಾರ ಇದೆ ಎನ್ನಲಾದ ಬೆಟ್ಟ ಪ್ರದೇಶವು ಹಾನಿಗೆ ಒಳಗಾಗಿದ್ದು ಉಪಗ್ರಹ ಚಿತ್ರಗಳಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.ಈ ಉಪಗ್ರಹ ಚಿತ್ರ ಆಧರಿಸಿ ವಿಶ್ಲೇಷಣೆ ಮಾಡಿರುವ ಭೂ ಗುಪ್ತಚರ ಸಂಶೋಧಕ ಮತ್ತು ಉಪಗ್ರಹ ಚಿತ್ರಗಳ ತಜ್ಞ ಸೈಮನ್, ಕಿರಾನಾ ಹಿಲ್ಸ್ ಮೇಲಿನ ಭಾರತದ ಕ್ಷಿಪಣಿ ದಾಳಿಯನ್ನು ಖಚಿತಪಡಿಸಿದ್ದಾರೆ. ಮೇ 10ರಂದು ಭಾರತದ ವಾಯುದಾಳಿಯಿಂದ ಹಾನಿಗೀಡಾದ ಸರ್ಗೋದಾ ಏರ್‌ಬೇಸ್‌ನ ಚಿತ್ರ ಹಾಗೂ ಜೂನ್ ತಿಂಗಳಲ್ಲಿ ರಿಪೇರಿ ಮಾಡಲಾದ ಏರ್‌ಬೇಸ್‌ನ ಚಿತ್ರವನ್ನು ಕೂಡ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಅವರು ಈ ವಿಶ್ಲೇಷಣೆ ಮಾಡಿದ್ದಾರೆ.
ಇದೇ ವೇಳೆ, ಭಾರತದ ದಾಳಿಯ ಉದ್ದೇಶವು ಈ ಅಣ್ವಸ್ತ್ರ ಸಂಗ್ರಹಾಗಾರ ನಾಶ ಮಾಡುವುದಾಗಿರಲಿಲ್ಲ. ಬದಲಾಗಿ ಮತ್ತೆ ಭಾರತವನ್ನು ಕೆಣಕಿದರೆ ಸುಮ್ಮನೆ ಬಿಡಲ್ಲ ಎಂಬ ಎಚ್ಚರಿಕೆ ಸಂದೇಶ ರವಾನಿಸುವುದಷ್ಟೇ ಆಗಿತ್ತು. ದಾಳಿಯ ತೀವ್ರತೆಯು ಇಂಥದ್ದೊಂದು ಸುಳಿವು ನೀಡಿದೆ ಎಂದು ಸೈಮನ್ ವಿಶ್ಲೇಷಿಸಿದ್ದಾರೆ.