ಯೋಧನ ಮೇಲೆ ಕಾವಾಡ್‌ ಯಾತ್ರಿ ಹಲ್ಲೆ : ಹಾಕಿ ಸ್ಟಿಕ್‌ ತ್ರಿಶೂಲ ಬಳಕೆ ನಿರ್ಬಂಧ

KannadaprabhaNewsNetwork |  
Published : Jul 21, 2025, 12:00 AM ISTUpdated : Jul 21, 2025, 05:20 AM IST
ಕಾವಾಡ್‌ ಯಾತ್ರಾರ್ಥಿ | Kannada Prabha

ಸಾರಾಂಶ

ರೈಲು ನಿಲ್ದಾಣದಲ್ಲಿ ಟಿಕೆಟ್‌ ವಿಚಾರಕ್ಕೆ ನಡೆದ ಗದ್ದಲ ವೇಳೆ ಕಾವಾಡ್‌ ಯಾತ್ರಾರ್ಥಿಗಳು ಸಿಆರ್‌ಪಿಎಫ್‌ ಯೋಧನ ಮೇಲೆ ಹಲ್ಲೆ ನಡೆಸಿದ ಘಟನೆ ಉತ್ತರಪ್ರದೇಶಧ ಮೀರ್‌ಪುರದಲ್ಲಿ.

ಲಖನೌ: ರೈಲು ನಿಲ್ದಾಣದಲ್ಲಿ ಟಿಕೆಟ್‌ ವಿಚಾರಕ್ಕೆ ನಡೆದ ಗದ್ದಲ ವೇಳೆ ಕಾವಾಡ್‌ ಯಾತ್ರಾರ್ಥಿಗಳು ಸಿಆರ್‌ಪಿಎಫ್‌ ಯೋಧನ ಮೇಲೆ ಹಲ್ಲೆ ನಡೆಸಿದ ಘಟನೆ ಉತ್ತರಪ್ರದೇಶಧ ಮೀರ್‌ಪುರದಲ್ಲಿ. ಘಟನೆ ಸಂಬಂಧ ಪೊಲೀಸರು ಮೂವರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದಾರೆ. ಈ ನಡುವೆ ರಾಜ್ಯದಲ್ಲಿ ಕಾವಾಡ್‌ ಯಾತ್ರಿಕರಿಂದ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಅವರು ಯಾತ್ರೆ ವೇಳೆ ಹಾಕಿ ಸ್ಟಿಕ್‌, ತ್ರಿಶೂಲ ಸೇರಿದಂತೆ ಇನ್ನಿತರ ಆಯುಧಗಳನ್ನು ಕೊಂಡೊಯ್ಯುವುದನ್ನು ಮತ್ತು ಶಬ್ಧ ಮಾಲಿನ್ಯಕ್ಕೆ ಕಾರಣವಾಗುವ ಸೈಲೆನ್ಸರ್‌ಗಳಿಲ್ಲದ ಬೈಕ್‌ಗಳ ಬಳಕೆ ನಿಷೇಧಿಸಿದೆ.

ಎಚ್‌ಆರ್‌ ಜತೆ ಸಿಕ್ಕಿಬಿದ್ದಿದ್ದ ಸಿಇಒ ಆ್ಯಂಡಿ ರಾಜೀನಾಮೆ

ವಾಷಿಂಗ್ಟನ್‌: ತನ್ನ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆಯನ್ನು ಅಪ್ಪಿಕೊಂಡ ಭಂಗಿಯಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸಿಕ್ಕಿಬಿದ್ದು ಭಾರೀ ಮುಜುಗರಕ್ಕೀಡಾಗಿದ್ದ ಆಸ್ಟ್ರಾನಮರ್‌ ಸಿಇಒ ಆ್ಯಂಡಿ ಬೈರನ್‌ ರಾಜೀನಾಮೆ ನೀಡಿದ್ದಾರೆ. ಬೈರನ್‌ಗೆ ರಜೆ ನೀಡಿ, ಅವರ ವಿರುದ್ಧ ತನಿಖೆ ಆರಂಭಿಸಿದ್ದ ಕಂಪನಿ ಈ ಕುರಿತು ಲಿಂಕ್ಡ್‌ಇನ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ಆಸ್ಟ್ರಾನಮರ್‌ ಸ್ಥಾಪನೆಯಾದಾಗಿನಿಂದ ಪಾಲಿಸಿಕೊಂಡು ಬಂದಿರುವ ಮೌಲ್ಯಗಳು ಮತ್ತು ಸಂಸ್ಕೃತಿಗೆ ಬದ್ಧವಾಗಿದೆ. 

ನಮ್ಮ ನಾಯಕರು ನಡವಳಿಕೆ ಮತ್ತು ಹೊಣೆಗಾರಿಕೆಯಲ್ಲಿ ಕೆಲ ಮಾನದಂಡವನ್ನು ಹೊಂದಿಸುವ ನಿರೀಕ್ಷೆಯಿದೆ. ಆದರೆ ಇತ್ತೀಚೆಗೆ ಅದು ಆಗಿರಲಿಲ್ಲ’ ಎಂದು ಬರೆದುಕೊಂಡಿದೆ.ಕೋಲ್ಡ್‌ಪ್ಲೇ ಸಂಗೀತ ಕಾರ್ಯಕ್ರಮದಲ್ಲಿ ಅವರಿಬ್ಬರು ಅಪ್ಪಿಕೊಂಡಿದ್ದ ವೇಳೆ ಇದ್ದಕ್ಕಿದ್ದಂತೆ ಅತ್ತ ತಿರುಗಿದ್ದ ಕ್ಯಾಮೆರಾ ಆ ದೃಶ್ಯವನ್ನು ಸೆರೆಹಿಡಿದಿತ್ತು. ಆಗ ಕೂಡಲೇ ದೂರ ಸರಿದು ಇಬ್ಬರೂ ತಪ್ಪಿಸಿಕೊಳ್ಳಲು ಉತ್ನಿಸಿದ್ದರಾದರೂ, ಆ ವಿಡಿಯೋ ಭಾರೀ ವೈರಲ್‌ ಆಗಿತ್ತು. ಬೈರನ್‌ ಹೆಂಡತಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದೂ ಹೇಳಲಾಗಿತ್ತು.

ದುಷ್ಕರ್ಮಿಗಳು ಬೆಂಕಿ ಹಚ್ಚಿದ 15ರ ಬಾಲಕಿ ಒಡಿಶಾದಿಂದ ದೆಹಲಿ ಏಮ್ಸ್‌ಗೆ ಏರ್‌ಲಿಫ್ಟ್

ಭುವನೇಶ್ವರ: ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ ಭುವನೇಶ್ವರದ ಏಮ್ಸ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ 15 ವರ್ಷದ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಭಾನುವಾರ ದೆಹಲಿಯ ಏಮ್ಸ್ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಗಿದೆ. ಬಾಲಕಿಯ ದೇಹ ಸುಮಾರು ಶೇ.70ರಷ್ಟು ಸುಟ್ಟಿದ್ದು, ಸ್ಥಿತಿ ಗಂಭೀರವಾಗಿದೆ. ಶನಿವಾರ ಮೂವರು ದುಷ್ಕರ್ಮಿಗಳು ಬಾಲಕಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು.

ಸೇನೆಗೆ ನಾಳೆ 3 ಅಪಾಚೆ ಹೆಲಿಕಾಪ್ಟರ್‌ ಸೇರ್ಪಡೆ: ಪಾಕ್‌ ಗಡಿಗೆ ನಿಯೋಜನೆ

ಜೋಧಪುರ: ಅಮೆರಿಕ ನಿರ್ಮಿತ ಇನ್ನೂ 3 ಎಎಚ್‌-64ಇ ಅಪಾಚೆ ಹೆಲಿಕಾಪ್ಟರ್‌ಗಳು ಒಂದೆರೆಡು ದಿನದಲ್ಲಿ ಭಾರತಕ್ಕೆ ಆಗಮಿಸಲಿದ್ದು, ಅವುಗಳನ್ನು ಪಾಕಿಸ್ತಾನದೊಂದಿಗೆ ಗಡಿ ಹೊಂದಿರುವ ರಾಜಸ್ಥಾನದ ಜೋಧ್‌ಪುರದಲ್ಲಿ ನಿಯೋಜಿಸುವ ಸಾಧ್ಯತೆ ಇದೆ.ಜಗತ್ತಿನ ಅತ್ಯಾಧನಿಕ ಯುದ್ಧ ಹೆಲಿಕಾಪ್ಟರ್‌ಗಳಲ್ಲಿ ಒಂದಾಗಿರುವ ಅಪಾಚೆ ಸದ್ಯ ಅಮೆರಿಕ, ಇಸ್ರೇಲ್, ಈಜಿಪ್ಟ್ ಬಿಟ್ಟರೆ ಭಾರತದಲ್ಲಿ ಮಾತ್ರ ಇದೆ. 2015ರ ಒಪ್ಪಂದದಂತೆ ಈಗಾಗಲೇ 22 ಅಪಾಚೆ ಹೆಲಿಕಾಪ್ಟರ್‌ಗಳನ್ನು ಭಾರತೀಯ ವಾಯುಪಡೆಗೆ ನೀಡಲಾಗಿದೆ. 2020ರಲ್ಲಿ 5000 ಕೋಟಿ ರು. ವೆಚ್ಚದಲ್ಲಿ 6 ಹೆಲಿಕಾಪ್ಟರ್‌ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಅದರ ಭಾಗವಾಗಿ ಇದೀಗ3 ಕಾಪ್ಟರ್‌ ಆಗಮಿಸಲಿದೆ. ವಾಯುಪಡೆಯಲ್ಲಿದ್ದ ಅಪಾಚೆ ಇದೀಗ ಸೇನಾಪಡೆಗೂ ಸೇರ್ಪಡೆಯಾಗುತ್ತಿದೆ.

ಜು.23ರಿಂದ 26ರವರೆಗೆ ಪ್ರಧಾನಿ ಮೋದಿ ಬ್ರಿಟನ್‌ ಮಾಲ್ಡೀವ್ಸ್‌ ದೇಶ ಭೇಟಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜು.23ರಿಂದ ಜು.26ರವರೆಗೆ ಬ್ರಿಟನ್‌ ಮತ್ತು ಮಾಲ್ಡೀವ್ಸ್‌ ದೇಶಗಳಿಗೆ ಭೇಟಿ ನೀಡಲಿದ್ದಾರೆ. ಜು.23-24ರವರೆಗೆ ಬ್ರಿಟನ್‌ಗೆ ತೆರಳಲಿರುವ ಪ್ರಧಾನಿ ಅಲ್ಲಿನ ಪ್ರಧಾನಿ ಕೀರ್‌ ಸ್ಟಾರ್ಮರ್‌ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಇದೇ ವೇಳೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಅಂಕಿತ ಹಾಕಲಿದ್ದಾರೆ. ಜೊತೆಗೆ ಬ್ರಿಟನ್‌ ದೊರೆ ಕಿಂಗ್‌ ಚಾರ್ಲ್ಸ್‌ 3 ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಇದು ಮೋದಿ ಅವರ ನಾಲ್ಕನೇ ಬ್ರಿಟನ್‌ ಪ್ರವಾಸವಾಗಲಿದೆ.

 ಬ್ರಿಟನ್‌ ಬಳಿಕ ಮಾಲ್ಡೀವ್ಸ್‌ಗೆ ತೆರಳಲಿರುವ ಮೋದಿ ಅಲ್ಲಿನ ಸ್ವಾತಂತ್ರ್ಯ ದಿನಕ್ಕೆ ಮುಖ್ಯ ಅತಿಥಿಯಾಗಲಿದ್ದಾರೆ. ಪಾಕಿಸ್ತಾನವು ಚೀನಾ ಮತ್ತು ಬಾಂಗ್ಲಾದೇಶದೊಂದಿಗೆ ಸಾರ್ಕ್‌ ಒಕ್ಕೂಟಕ್ಕೆ ಬದಲಿಯಾಗಿ ಒಕ್ಕೂಟ ರಚನೆ ನಡೆಸುವ ಷಡ್ಯಂತ್ರ ನಡೆಸುತ್ತಿರುವ ಹೊತ್ತಿನಲ್ಲೇ ಮೋದಿ ಅವರ ಮಾಲ್ಡೀವ್ಸ್‌ ಭೇಟಿಯು ಪ್ರಾಮುಖ್ಯತೆ ಹೊಂದಿದೆ. ಇದೇ ವೇಳೆ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

PREV
Read more Articles on

Latest Stories

ಅನಿಲ್ ಅಂಬಾನಿ ‘ವಂಚಕ’: ಸಿಬಿಐಗೆ ದೂರು ಸಲ್ಲಿಕೆಗೆ ಸ್ಟೇಟ್‌ ಬ್ಯಾಂಕ್ ಸಿದ್ಧತೆ
ನ್ಯಾ। ವರ್ಮಾ ವಾಗ್ದಂಡನೆ ಪ್ರಕ್ರಿಯೆ ಆರಂಭ
ಬೆಟ್ಟಿಂಗ್‌ ಆ್ಯಪ್‌ ಅಕ್ರಮ:ಪ್ರಕಾಶ್‌ ರಾಜ್‌ ಸೇರಿ 4ಜನಕ್ಕೆ ಇ.ಡಿ. ಸಮನ್ಸ್‌