ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಉಗ್ರರ ಜತೆ ನಡೆದ ಭೀಕರ ಚಕಮಕಿಯಲ್ಲಿ ಓರ್ವ ಕ್ಯಾಪ್ಟನ್ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.
ಜಮ್ಮು: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಉಗ್ರರ ಜತೆ ನಡೆದ ಭೀಕರ ಚಕಮಕಿಯಲ್ಲಿ ಓರ್ವ ಕ್ಯಾಪ್ಟನ್ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಮೃತ ಯೋಧರನ್ನು ಕ್ಯಾಪ್ಟನ್ ಬ್ರಿಜೇಶ್ ಥಾಪಾ, ನಾಯಕ್ ಡಿ. ರಾಜೇಶ್, ಸಿಪಾಯ್ ಬ್ರಿಜೇಂದ್ರ ಮತ್ತು ಸಿಪಾಯ್ ಅಜಯ್ ಎಂದು ಗುರುತಿಸಲಾಗಿದೆ.ಇದು ಕಳೆದ ಮೂರು ವಾರದಲ್ಲಿ ದೋಡಾ ಜಿಲ್ಲೆಯಲ್ಲಿ ನಡೆದ ಮೂರನೇ ಉಗ್ರ ದಾಳಿಯಾಗಿದೆ. ಜೊತೆಗೆ ಕಠುವಾ ಜಿಲ್ಲೆಯಲ್ಲಿ ಸೇನಾ ವಾಹನದ ಮೇಲೆ ಉಗ್ರರು ದಾಳಿ ನಡೆಸಿ ಐವರು ಯೋಧರನ್ನು ಬಲಿ ಪಡೆದ ವಾರದೊಳಗೇ ಮತ್ತೆ ನಾಲ್ವರು ವೀರ ಯೋಧರು ಹುತಾತ್ಮರಾದ ಕಹಿ ಸುದ್ದಿ ಕಣಿವೆ ರಾಜ್ಯದಿಂದ ಬಂದಿದೆ. ಏನಾಯ್ತು?:
ಅರಣ್ಯದಲ್ಲಿ ಉಗ್ರರು ಅವಿತಿರುವ ಖಚಿತ ಸುಳಿವಿನ ಮೇರೆಗೆ ಸೋಮವಾರ ಸಂಜೆ ದೋಡಾದಿಂದ 55 ಕಿ.ಮೀ ದೂರದ ದೇಸಾ ಅರಣ್ಯ ಪ್ರದೇಶದ ಧರಿ ಗೋಟೆ ಉರಾರ್‌ಬಾಗಿ ಎಂಬಲ್ಲಿ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪಡೆದ ವಿಶೇಷ ತಂಡ ಜಂಟಿ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಕೆಲ ಹೊತ್ತಿನ ಗುಂಡಿನ ಚಕಮಕಿ ನಡೆದು, ಉಗ್ರರು ಪರಾರಿಯಾಗಲು ಯತ್ನಿಸಿದರು.ಈ ವೇಳೆ ದುರ್ಗಮ ಪ್ರದೇಶವಾಗಿರುವ ಹೊರತಾಗಿಯೂ ಉಗ್ರರನ್ನು ಸೆರೆಹಿಡಿಯಲು ಯೋಧರ ತಂಡ ಅವರು ಪರಾರಿಗೆ ಯತ್ನಿಸಿದ ಪ್ರದೇಶದ ಕಡೆ ಧಾವಿಸಿತ್ತು. ಈ ವೇಳೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದಾಗ ಐವರು ಯೋಧರು ತೀವ್ರವಾಗಿ ಗಾಯಗೊಂಡರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಿಸದೇ ನಾಲ್ವರು ಯೋಧರು ಸಾವನ್ನಪ್ಪಿದ್ದಾರೆ.ಈ ನಡುವೆ ಉಗ್ರರು ಅವಿತಿದ್ದ ಪ್ರದೇಶಕ್ಕೆ ಸೇನೆ ಹೆಚ್ಚಿನ ತುಕಡಿ ರವಾನಿಸಲಾಗಿದ್ದು, ಉಗ್ರರ ಪತ್ತೆಗೆ ಭಾರೀ ಕಾರ್ಯಾಚರಣೆ ನಡೆಸಲಾಗುತ್ತಿದೆ. ಜೊತೆಗೆ ಸೇನೆ ಪ್ಯಾರಾ ಕಮಾಂಡೋ ಪಡೆ ಮತ್ತು ಡ್ರೋನ್‌ಗಳನ್ನು ಕೂಡಾ ಪತ್ತೆ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ. ಮಂಗಳವಾರ ಉಗ್ರರ ಯಾವುದೇ ಸುಳಿವು ಅಥವಾ ಉಗ್ರರ ಕಡೆಯಿಂದ ಗುಂಡಿನ ದಾಳಿ ನಡೆದಿಲ್ಲ ಎಂದು ಸೇನಾಪಡೆ ಮೂಲಗಳು ತಿಳಿಸಿವೆ. ದಾಳಿಕೋರ ಉಗ್ರರು ಪಾಕಿಸ್ತಾನದಿಂದ ಕೆಲ ತಿಂಗಳ ಹಿಂದೆಯೇ ಗಡಿ ದಾಟಿ ಬಂದಿದ್ದು ಅರಣ್ಯ ಪ್ರದೇಶದಲ್ಲಿ ಅಡಗಿದ್ದರು ಎಂಬ ಮಾಹಿತಿ ಸೇನೆಗೆ ಲಭ್ಯವಾಗಿದೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.