ಅಯೋಧ್ಯೆ ಶ್ರೀ ರಾಮ ಮಂದಿರ ಪ್ರಾಣಪ್ರತಿಷ್ಠೆ: 22ಕ್ಕೆ ಹಲವು ಬಿಜೆಪಿ ರಾಜ್ಯಗಳಲ್ಲಿ ರಜೆ ಪ್ರಕಟ

KannadaprabhaNewsNetwork | Updated : Jan 20 2024, 09:53 AM IST

ಸಾರಾಂಶ

ಜ.22ರಂದು ಪ್ರಾಣಪ್ರತಿಷ್ಠಾಪನೆಯ ನಿಮಿತ್ತ ಕೇಂದ್ರ ಸರ್ಕಾರ ಮತ್ತು ಹಲವು ರಾಜ್ಯ ಸರ್ಕಾರಗಳು ಸರ್ಕಾರಿ ರಜೆ ಘೋಷಿಸಿದೆ. ಇದರ ಜೊತೆಗೆ ಹಣಕಾಸು ಸಂಸ್ಥೆಗಳಿಗೂ ಸಂಪೂರ್ಣ ದಿನ ರಜೆ ಘೋಷಿಸಲಾಗಿದೆ. ಅಲ್ಲದೆ ರಾಮಮಂದಿರಕ್ಕೆ ಸುಪ್ರೀಂ ಕೋರ್ಟ್‌ ನ್ಯಾಯಧೀಶರನ್ನು ಆಹ್ವಾನಿಸಲಾಗಿದೆ.

ಅಹ್ಮದಾಬಾದ್‌: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಬಳಿಕ ಜ.22ರಂದು ಅನೇಕ ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳು ರಜೆ ಘೋಷಿಸಿವೆ.

ಗೋವಾ ಹಾಗೂ ಮಹಾರಾಷ್ಟ್ರ ಪೂರ್ತಿ ದಿನ ರಜೆ ಘೋಷಿಸಿವೆ. ಇನ್ನು ಮಧ್ಯಪ್ರದೇಶ, ಗುಜರಾತ್‌, ಹರ್ಯಾಣ, ಉತ್ತರಾಖಂಡ ಹಾಗೂ ತ್ರಿಪುರಾ ರಾಜ್ಯ ಸರ್ಕಾರಗಳು ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ (ಮಧ್ಯಾಹ್ನ 2 ಗಂಟೆಯವರೆಗೆ) ಪ್ರಕಟಿಸಿವೆ.

ಸಿಪಿಎಂ ವಿರೋಧ: ಆದರೆ ಈ ರೀತಿ ಒಂದು ನಿರ್ದಿಷ್ಟ ಧರ್ಮದ ಸಮಾರಂಭಕ್ಕೆ ಸಾರ್ವಜನಿಕ ರಜೆ ಘೋಷಣೆ ಸಂವಿಧಾನಬಾಹಿರ ಎಂದು ಸಿಪಿಎಂ ವಿರೋಧ ವ್ಯಕ್ತಪಡಿಸಿದೆ.

ಮಂದಿರ ಉದ್ಘಾಟನೆ: ಹಣಕಾಸು ಪೇಟೆಗೂ ರಜೆ
ಜ.22ರಂದು ರಾಮಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ಕರೆನ್ಸಿ ಮಾರುಕಟ್ಟೆ ಸೇರಿದಂತೆ ಹಣದ ಮಾರುಕಟ್ಟೆಗೆ ರಜೆ ಘೋಷಿಸಲಾಗಿದೆ. ಸೋಮವಾರ ಹಣದ ಮಾರುಕಟ್ಟೆ ಕಾರ್ಯ ನಿರ್ವಹಿಸುವುದಿಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಶುಕ್ರವಾರ ತಿಳಿಸಿದೆ. 

ಕೇಂದ್ರ ಬ್ಯಾಂಕ್‌ನ ಅಡಿಯಲ್ಲಿರುವ ಎಲ್ಲಾ ಟ್ರೇಡಿಂಗ್‌ ಮಾರುಕಟ್ಟೆಗಳು ಸೋಮವಾರ ಕಾರ್ಯನಿರ್ವಹಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬಾಬ್ರಿ ತೀರ್ಪು ನೀಡಿದ್ದ 5 ಜಡ್ಜ್‌ಗಳಿಗೆ ಮಂದಿರ ಉದ್ಘಾಟನೆಗೆ ಆಹ್ವಾನ
ಬಾಬ್ರಿ ಮಸೀದಿ ಧ್ವಂಸ ಮಾಡಿದ ಜಾಗದಲ್ಲಿ ರಾಮಮಂದಿರ ಕಟ್ಟುವ ಕುರಿತು 2019ರಲ್ಲಿ ತೀರ್ಪು ನೀಡಿದ್ದ ಐವರು ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಿಗೆ ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣಪ್ರತಿಷ್ಠಾಪನೆಗೆ ಆಹ್ವಾನ ನೀಡಲಾಗಿದೆ.

ಅಂದಿನ ಬಾಬ್ರಿ ಪೀಠದಲ್ಲಿದ್ದ ಹಾಲಿ ಸಿಜೆಐ ನ್ಯಾ। ಡಿ. ವೈ. ಚಂದ್ರಚೂಡ್‌, ನ್ಯಾ। ಎಸ್‌.ಎ. ಬೊಬ್ಡೆ, ಅಂದಿನ ಮುಖ್ಯ ನ್ಯಾ। ನ್ಯಾ ರಂಜನ್‌ ಗೊಗೊಯ್‌, ನ್ಯಾ। ಅಬ್ದುಲ್‌ ನಜೀ಼ರ್‌ ಮತ್ತು ನ್ಯಾ। ಅಶೋಕ್‌ ಭೂಷಣ್ ಅವರಿಗೆ ಜ.22ರಂದು ಅಯೋಧ್ಯೆಯಲ್ಲಿ ಪಾಲ್ಗೊಳ್ಳುವ ರಾಮಮಂದಿರ ಪ್ರಾಣಪ್ರತಿಷ್ಠಾಪನೆಯಲ್ಲಿ ಅತಿಥಿಗಳಾಗಿ ಭಾಗವಹಿಸುವಂತೆ ಆಹ್ವಾನಿಸಲಾಗಿದೆ.

ಸುಪ್ರೀಂ ಕೋರ್ಟ್‌ನ ಪಂಚಸದಸ್ಯ ಪೀಠವು ನವೆಂಬರ್‌ 9, 2019ರಲ್ಲಿ ರಾಮಜನ್ಮಭೂಮಿಯಲ್ಲೇ ರಾಮಮಂದಿರ ಕಟ್ಟುವಂತೆ ಐತಿಹಾಸಿಕ ತೀರ್ಪು ನೀಡಿತ್ತು.

ಇವರ ಜೊತೆಗೆ ಮಾಜಿ ನ್ಯಾಯಾಧೀಶರು, ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಮಾಜಿ ಅಟಾರ್ನಿ ಜನರಲ್‌ ವೇಣುಗೋಪಾಲ್‌ ಅವರನ್ನೂ ಒಳಗೊಂಡಂತೆ ನ್ಯಾಯಾಂಗದ ವಿವಿಧ ಗಣ್ಯ ವ್ಯಕ್ತಿಗಳನ್ನೂ ಅಹ್ವಾನಿಸಲಾಗಿದೆ.

Share this article