ಜೆಇಇ ಅಡ್ವಾನ್ಸ್ಡ್‌ಫಲಿತಾಂಶ : ರಜಿತ್ ಗುಪ್ತಾ ದೇಶಕ್ಕೆ ಪ್ರಥಮ

KannadaprabhaNewsNetwork |  
Published : Jun 03, 2025, 12:03 AM ISTUpdated : Jun 03, 2025, 04:28 AM IST
ರಜಿತ್‌ ಗುಪ್ತಾ  | Kannada Prabha

ಸಾರಾಂಶ

ದೇಶದ ಪ್ರತಿಷ್ಠಿತ ಎಂಜಿನಿಯರ್‌ ಕಾಲೇಜುಗಳ ಪ್ರವೇಶಾತಿಗಾಗಿ ನಡೆದ ಜೆಇಇ ಅಡ್ವಾನ್ಸ್ಡ್‌ ಪರೀಕ್ಷಾ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ದೆಹಲಿ ವಲಯದ ರಜಿತ್‌ ಗುಪ್ತಾ ದೇಶಕ್ಕೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

 ನವದೆಹಲಿ: ದೇಶದ ಪ್ರತಿಷ್ಠಿತ ಎಂಜಿನಿಯರ್‌ ಕಾಲೇಜುಗಳ ಪ್ರವೇಶಾತಿಗಾಗಿ ನಡೆದ ಜೆಇಇ ಅಡ್ವಾನ್ಸ್ಡ್‌ ಪರೀಕ್ಷಾ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ದೆಹಲಿ ವಲಯದ ರಜಿತ್‌ ಗುಪ್ತಾ ದೇಶಕ್ಕೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

ಐಐಟಿ ಪ್ರವೇಶಕ್ಕೆ ಇಚ್ಛಿಸುವ ಜೆಇಇ ಮೇನ್ಸ್‌ ಪಾಸಾದವರಿಗೆ ಜೆಇಇ ಅಡ್ವಾನ್ಸ್ಡ್‌ ಪರೀಕ್ಷೆ ನಡೆಸಲಾಗುತ್ತದೆ. ಮೇ 18 ರಂದು ನಡೆದ ಈ ಪರೀಕ್ಷೆಯನ್ನು 1, 80,422 ವಿದ್ಯಾರ್ಥಿಗಳು ಬರೆದಿದ್ದರು. ಈ ಪೈಕಿ 9404 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 54,378 ಮಂದಿ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.

ದೆಹಲಿ ವಲಯದ ರಾಜಸ್ಥಾನದ ಕೋಟಾದ ರಜಿತ್ ಗುಪ್ತಾ 360 ಕ್ಕೆ 332 ಅಂಕ ಪಡೆದು ಮೊದಲ ಸ್ಥಾನ ಪಡೆದಿದ್ದಾರೆ. ಮಹಿಳಾ ವಿಭಾಗದಲ್ಲಿ ಐಐಟಿ ಖರಗ್‌ಪುರ ವಲಯದ ದೇವದತ್ತ ಮಾಝಿ 312 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. 116 ವಿದೇಶಿ ವಿದ್ಯಾರ್ಥಿಗಳು ಕೂಡ ಪರೀಕ್ಷೆ ಬರೆದಿದ್ದು 13 ಮಂದಿ ತೇರ್ಗಡೆ ಹೊಂದಿದ್ದಾರೆ.

ಜೂ.15ರಂದು ನಿಗದಿ ಆಗಿದ್ದ ನೀಟ್‌ ಪಿಜಿ ಪರೀಕ್ಷೆ ಮುಂದೂಡಿಕೆ

ನವದೆಹಲಿ: ರಾಷ್ಟ್ರೀಯ ಅರ್ಹತಾ-ಪ್ರವೇಶ ಪರೀಕ್ಷೆ (ನೀಟ್‌) ಪಿಜಿ 2025 ಅನ್ನು ಒಂದೇ ಪಾಳಿಯಲ್ಲಿ ಪರೀಕ್ಷೆ ನಡೆಸುವಂತೆ ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿದ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಲಾಗಿದೆ. ’ಜೂನ್ 15 ರಂದು ಪರೀಕ್ಷೆ ನಡೆಯಬೇಕಿತ್ತು ಆದರೆ ಈಗ ಮುಂದೂಡಲಾಗಿದೆ. ಪರಿಷ್ಕೃತ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು’ ಎಂದು ಮಂಡಳಿ ತಿಳಿಸಿದೆ.

 ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಹೆಚ್ಚಿನ ಪರೀಕ್ಷಾ ಕೇಂದ್ರಗಳು ಮತ್ತು ಅಗತ್ಯವಿರುವ ಮೂಲಸೌಕರ್ಯಗಳನ್ನು ವ್ಯವಸ್ಥೆ ಮಾಡುವುದಾಗಿ ಮಂಡಳಿ ಹೇಳಿದೆ. ಜೂ.15ರಂದು 2 ಪಾಳಿಯಲ್ಲಿ ಪರೀಕ್ಷೆ ನಡೆಸುವ ಮಂಡಳಿ ನಿರ್ಧಾರವನ್ನು ಕೋರ್ಟು ಇತ್ತೀಚೆಗೆ ತಿರಸ್ಕರಿಸಿತ್ತು.

ಇಂಡಿಗೋ ವಿಮಾನಕ್ಕೆ ಹಕ್ಕಿ ಡಿಕ್ಕಿ: ರಾಂಚೀಲಿ ತುರ್ತು ಭೂಸ್ಪರ್ಶ

ರಾಂಚಿ: ಪಟನಾದಿಂದ ಕೋಲ್ಕತಾಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಜಾರ್ಖಂಡ್‌ ರಾಜಧಾನಿ ರಾಂಚಿ ಸಮೀಪ ರಣಹದ್ದು ಡಿಕ್ಕಿ ಹೊಡೆದಿದೆ. ಪರಿಣಾಮ ವಿಮಾನವನ್ನು ರಾಂಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಿಲ್ಲ. ವಿಮಾನಕ್ಕೆ ಕೊಂಚ ಹಾನಿಯಾಗಿದೆ.ವಿಮಾನವು ಮಧ್ಯಾಹ್ನ 1 ಗಂಟೆ ಸುಮಾರಿಗೆ ಪಟನಾದಿಂದ ಹೊರಟು ಕೋಲ್ಕತಾಗೆ ಹೊರಟ ವಿಮಾನಕ್ಕೆ 4000 ಅಡಿ ಎತ್ತರದಲ್ಲಿ ರಣಹದ್ದು ಡಿಕ್ಕಿ ಹೊಡೆದಿದೆ. ಈ ವೇಳೆ ರಾಂಚಿಯಲ್ಲಿ ವಿಮಾನವನ್ನು ತುರ್ತು ಭುಸ್ಪರ್ಶ ಮಾಡಿ ಅನಾಹುತ ತಪ್ಪಿಸಲಾಗಿದೆ. ವಿಮಾನದಲ್ಲಿ 175 ಪ್ರಯಾಣಿಕರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೋವಾ ಕಾಂಗ್ರೆಸ್ ಬ್ಯಾನರ್‌ನಲ್ಲಿ ಖರ್ಗೆ ಫೋಟೋ ಕಣ್ಮರೆ!

ಪಣಜಿ: ಕಳೆದ ವಾರ ಗೋವಾ ರಾಜ್ಯೋತ್ಸವದ ಸಂದರ್ಭದಲ್ಲಿ ಹಾಕಲಾದ ಬ್ಯಾನರ್‌ನಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಭಾವಚಿತ್ರವನ್ನು ಹಾಕದ ಕಾರಣ ಗೋವಾ ಕಾಂಗ್ರೆಸ್ ವಿರುದ್ಧ ಟೀಕೆ ವ್ಯಕ್ತವಾಗಿದೆ. ಇದು ದಲಿತ ನಾಯಕರಿಗೆ ಮಾಡಿದ ಅವಮಾನ ಎಂದು ಬಿಜೆಪಿ ಟೀಕಿಸಿದೆ.ಮೇ 30ರಂದು ರಾಜ್ಯೋತ್ಸವದ ನಿಮಿತ್ತ ದಕ್ಷಿಣ ಗೋವಾದ ನವೇಲಿಂನಲ್ಲಿ ಖರ್ಗೆ ಭಾಗವಹಿಸಬೇಕಿದ್ದ ಸಾರ್ವಜನಿಕ ಸಭೆಯನ್ನು ರದ್ದುಗೊಳಿಸಲಾಗಿತ್ತು. 

ಅಲ್ಲದೆ, ಹಿರಿಯ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಗೋವಾ ಕಾಂಗ್ರೆಸ್ ಮುಖ್ಯಸ್ಥ ಅಮಿತ್ ಪಾಟ್ಕರ್, ವಿಪಕ್ಷ ನಾಯಕ ಯೂರಿ ಅಲೆಮಾವೊ ಅವರ ಫೋಟೋಗಳಿದ್ದ ಬ್ಯಾನರ್‌ನಲ್ಲಿ ಖರ್ಗೆ ಫೋಟೋ ಮಾತ್ರ ಕಣ್ಮರೆಯಾಗಿತ್ತು. ಇದನ್ನು ಬಿಜೆಪಿ ಟೀಕಿಸಿದೆ. ಆದರೆ ಫೋಟೋವನ್ನು ಕಣ್ತಪ್ಪಿನಿಂದ ಕೈಬಿಡಲಾಗಿತ್ತು ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.

ಬಿಆರ್‌ಎಸ್‌ನಿಂದ ಕೆಸಿಆರ್‌ ಪುತ್ರಿ ಕವಿತಾ ವಜಾ ಸಂಭವ

ಹೈದರಾಬಾದ್: ತೆಲಂಗಾಣದ ಕೆಸಿಆರ್‌ ನೇತೃತ್ವದ ಬಿಆರ್‌ಎಸ್‌ ಪಕ್ಷದಲ್ಲಿ ಪುತ್ರಿ ಕೆ. ಕವಿತಾ ಹಾಗೂ ಪುತ್ರ ಕೆ.ಟಿ. ರಾಮರಾವ್‌ ಸಂಘರ್ಷ ತಾರಕಕ್ಕೇರಿದೆ. ಹೀಗಾಗಿ ಪುತ್ರಿ ನಡೆಗೆ ಬೇಸತ್ತಿರುವ ಕೆಸಿಆರ್‌, ಕವಿತಾರನ್ನು ವಜಾ ಮಾಡುವ ಸಂಭವವಿದೆ ಎಂದು ಮೂಲಗಳು ಹೇಳಿವೆ. ಬಿಆರ್‌ಎಸ್‌ಅನ್ನು ಬಿಜೆಪಿಯಲ್ಲಿ ವಿಲೀನ ಮಾಡಲು ರಾಮರಾವ್ ಸಂಚು ನಡೆಸಿದ್ದಾರೆ ಎಂದು ಇತ್ತೀಚೆಗೆ ಕವಿತಾ ಆರೋಪಿಸಿದ್ದರು. ಇದರಿಂದ ಕೆಸಿಆರ್‌ ಕ್ರುದ್ಧರಾಗಿದ್ದು. ಕವಿತಾರ ತಪ್ಪುಗಳನ್ನು ಪಟ್ಟಿ ಮಾಡುತ್ತಿದ್ದಾರೆ. ಶಿಶುಪಾಲನನ್ನು ಕೊಲ್ಲುವ ಮೊದಲು ಶ್ರೀಕೃಷ್ಣನು 100 ತಪ್ಪುಗಳನ್ನು ಪಟ್ಟಿ ಮಾಡಿದಂತೆ ಕವಿತಾರ ತಪ್ಪುಗಳ ಎಣಿಕೆ ಮಾಡುತ್ತಿದ್ದಾರೆ ಎಂದು ಅವು ಹೇಳಿವೆ.

ಮತ್ತೆ 203 ಜನರಿಗೆ ಕೋವಿಡ್, 4 ಬಲಿ: ಒಟ್ಟು ಕೇಸ್ 3,961ಕ್ಕೆ ಏರಿಕೆ

ನವದೆಹಲಿ: ದೇಶದಲ್ಲಿ ಸೋಮವಾರ 203 ಜನರಲ್ಲಿ ಕೊರೋನಾ ಸೋಂಕು ಕಂಡುಬಂದಿದ್ದು, ಹೊಸ ಅಲೆಯಲ್ಲಿ ಸೋಂಕಿತರ ಸಂಖ್ಯೆ 3,961ಕ್ಕೇರಿದೆ. ದೆಹಲಿ, ತಮಿಳುನಾಡು, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ತಲಾ ಒಬ್ಬೊಬ್ಬರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.ಕೇರಳದಲ್ಲಿ ಅತಿ ಹೆಚ್ಚು ಸೋಂಕಿತರಿದ್ದು, ಸಂಖ್ಯೆ 1435ಕ್ಕೆ ತಲುಪಿದೆ. ಮಹಾರಾಷ್ಟ್ರದಲ್ಲಿ 506, ದೆಹಲಿಯಲ್ಲಿ 483, ಗುಜರಾತ್‌ನಲ್ಲಿ 338, ಪಶ್ಚಿಮ ಬಂಗಾಳದಲ್ಲಿ 331, ಕರ್ನಾಟಕದಲ್ಲಿ 253 ಹಾಗೂ ಉತ್ತರ ಪ್ರದೇಶದಲ್ಲಿ 157 ಕೋವಿಡ್ ಪ್ರಕರಣಗಳು ದಾಖಲಾಗಿವೆ.

PREV
Read more Articles on

Recommended Stories

ಲಡ್ಕಿ ಬಹಿನ್‌’ ಯೋಜನೆಯಡಿ 14,000 ಪುರುಷರ ನೋಂದಣಿ!
ಉಗ್ರರಿಗೆ ಸುರಕ್ಷಿತ ನೆಲೆ ಇಲ್ಲ ಎಂಬುದು ಸಿಂದೂರದಿಂದ ಸಾಬೀತು: ಮೋದಿ