ಗಾಯಾಳು ಬದುಕಿಸಲು ₹8 ಲಕ್ಷ ಸಾಲ ಮಾಡಿ ಏರ್‌ ಆ್ಯಂಬುಲೆನ್ಸ್‌ ಬಾಡಿಗೆ ಪಡೆದಿದ್ರು! 7 ಮಂದಿ ಸಾವು

KannadaprabhaNewsNetwork |  
Published : Feb 25, 2026, 03:15 AM ISTUpdated : Feb 25, 2026, 05:10 AM IST
air ambulance

ಸಾರಾಂಶ

ಜಾರ್ಖಂಡದ ಛತ್ರಾ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಗಾಯಾಳುವೊಬ್ಬರನ್ನು ರಾಂಚಿಯಿಂದ ದೆಹಲಿಗೆ ಸಾಗಿಸುತ್ತಿದ್ದ ಏರ್‌ ಆ್ಯಂಬುಲೆನ್ಸ್‌ ಪತನವಾಗಿ, ಅದರಲ್ಲಿದ್ದ ಎಲ್ಲಾ 7 ಮಂದಿ ಸಾವನ್ನಪ್ಪಿದ್ದಾರೆ. ಈ ನಡುವೆ ಗಾಯಾಳುವನ್ನು ಬದುಕಿಸಲು ಕುಟುಂಬ 8 ಲಕ್ಷ ರು. ಸಾಲ ಮಾಡಿತ್ತು ಎಂದು ತಿಳಿದುಬಂದಿದೆ. 

ರಾಂಚಿ: ಜಾರ್ಖಂಡದ ಛತ್ರಾ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಗಾಯಾಳುವೊಬ್ಬರನ್ನು ರಾಂಚಿಯಿಂದ ದೆಹಲಿಗೆ ಸಾಗಿಸುತ್ತಿದ್ದ ಏರ್‌ ಆ್ಯಂಬುಲೆನ್ಸ್‌ ಪತನವಾಗಿ, ಅದರಲ್ಲಿದ್ದ ಎಲ್ಲಾ 7 ಮಂದಿ ಸಾವನ್ನಪ್ಪಿದ್ದಾರೆ. 

ಈ ನಡುವೆ ಗಾಯಾಳುವನ್ನು ಬದುಕಿಸಲು ಕುಟುಂಬ 8 ಲಕ್ಷ ರು. ಸಾಲ ಮಾಡಿತ್ತು ಎಂದು ತಿಳಿದುಬಂದಿದೆ. ದೆಹಲಿಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆ ಕೊಡಿಸುವ ಭರವಸೆಯಲ್ಲಿದ್ದಾಗಲೇ ಆತನ ಜೊತೆ ಪತ್ನಿ, ಓರ್ವ ಸಂಬಂಧಿ, ಇಬ್ಬರು ಪೈಲಟ್‌ಗಳು, ಓರ್ವ ವೈದ್ಯ ಮತ್ತು ವೈದ್ಯಕೀಯ ಸಿಬ್ಬಂದಿಯೂ ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಈ ದುರದೃಷ್ಟಕರ ಘಟನೆಗೆ ಕುಟುಂಬಸ್ಥರು ಕಣ್ಣೀರಾಗಿದ್ದಾರೆ.

ಆಗಿದ್ದೇನು?: 

ಸಂಜಯ್‌ ಸಾಹು (41) ಛಂದ್ವಾದಲ್ಲಿ ಪುಟ್ಟ ಹೋಟೆಲ್‌ ಒಂದನ್ನು ನಡೆಸುತ್ತಿದ್ದರು. ಕಳೆದ ಸೋಮವಾರ ಹೋಟೆಲ್‌ನಲ್ಲಿ ಶಾರ್ಟ್‌ ಸರ್ಕಿಟ್‌ ಉಂಟಾಗಿ ಅವರ ದೇಹ ಶೇ.65ರಷ್ಟು ಸುಟ್ಟು ಕರಕಲಾಗಿತ್ತು. ದೆಹಲಿಯ ಗಂಗಾ ರಾಂ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಿ ಜೀವ ಉಳಿಸುವ ಉದ್ದೇಶದಿಂದ ಕುಟುಂಬಸ್ಥರು 8 ಲಕ್ಷ ರು. ಸಾಲ ಮಾಡಿ ಏರ್‌ ಆ್ಯಂಬುಲೆನ್ಸ್‌ ಬಾಡಿಗೆ ಪಡೆದಿದ್ದರು. ಮನೆ ಮತ್ತು ಆಸ್ತಿಯನ್ನು ಮಾರಲೂ ಸಿದ್ಧರಾಗಿದ್ದರು. ಮಂಗಳವಾರ ಗಾಯಾಳುವಿನ ಪತ್ನಿ ಅರ್ಚನಾ, ಒಬ್ಬ ಸಂಬಂಧಿ, ಇಬ್ಬರು ಪೈಲಟ್‌ಗಳು, ಒಬ್ಬ ವೈದ್ಯ ಮತ್ತು ಒಬ್ಬ ವೈದ್ಯಕೀಯ ಸಿಬ್ಬಂದಯನ್ನು ಹೊತ್ತ ವಿಮಾನ ರಾಂಚಿಯಿಂದ ದೆಹಲಿಗೆ ಹೊರಟಿತ್ತು. ಆಸ್ಪತ್ರೆಗೆ ತೆರಳುವ ಮೊದಲೇ ದುರಂತ ಸಂಭವಿಸಿತು ಎಂದು ಮೃತರ ಸಹೋದರ ಅಜಯ್‌ ಕಣ್ಣಿರು ಸುರಿಸಿದ್ದಾರೆ. 

 7 ಮಂದಿ ದುರ್ಮರಣ: 

ದುರಂತದಲ್ಲಿ ಬಲಿಯಾದವರನ್ನು ಪೈಲಟ್-ಇನ್-ಕಮಾಂಡ್ ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್, ಸಹ ಪೈಲಟ್ ಕ್ಯಾಪ್ಟನ್ ಸವ್ರಜ್‌ದೀಪ್ ಸಿಂಗ್, ಗಾಯಾಳು ಸಂಜಯ್ ಕುಮಾರ್, ಪತ್ನಿ ಅರ್ಚನಾ ದೇವಿ, ಸಂಬಂಧಿಕ ಧುರು ಕುಮಾರ್, ವೈದ್ಯ ಡಾ. ವಿಕಾಸ್ ಕುಮಾರ್ ಗುಪ್ತಾ ಮತ್ತು ವೈದ್ಯಕೀಯ ಸಿಬ್ಬಂದಿ ಸಚಿನ್ ಕುಮಾರ್ ಮಿಶ್ರಾ ಎಂದು ಗುರುತಿಸಲಾಗಿದೆ.

ಖಾಸಗಿ ವಿಮಾನ ಕಂಪನಿಗಳ ನಿಯಮ ಬಿಗಿ

ನವದೆಹಲಿ: ಜಾರ್ಖಂಡ್‌ನ ರಾಂಚಿ ಮತ್ತು ಅಂಡಮಾನ್‌ ಕರಾವಳಿ ತೀರದಲ್ಲಿ ಒಂದರ ಹಿಂದೆ ಒಂದರಂತೆ ಬಾಡಿಗೆ ವಿಮಾನಗಳ ಅಪಘಾತ ಸಂಭವಿಸಿರುವ ಹೊತ್ತಿನಲ್ಲಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು(ಡಿಜಿಸಿಎ) ಖಾಸಗಿ ವಿಮಾನ ನಿರ್ವಾಹಕರಿಗೆ ಹೊಸ ಸುರಕ್ಷತಾ ನಿಯಮಗಳನ್ನು ಜಾರಿಗೆ ತಂದಿದೆ.ಈ ಬಗ್ಗೆ ಡಿಜಿಸಿಎ ಹೇಳಿಕೆ ಬಿಡುಗಡೆ ಮಾಡಿದ್ದು, ವೈಮಾನಿಕ ದುರ್ಘಟನೆಗಳು ಸಂಭವಿಸಿದಾಗ ಪೈಲಟ್‌ಗಳ ಮೇಲೆ ದೋಷ ಹೊರಿಸುವ ಬದಲು ನಿರ್ವಾಹಕರನ್ನು ಹೊಣೆಗಾರರನ್ನಾಗಿಸಲಾಗುವುದು. ವಿಮಾನದ ಆಯಸ್ಸು, ನಿರ್ವಹಣಾ ಇತಿಹಾಸದ ಜತೆ ಅವುಗಳಿಗೆ ಸುರಕ್ಷತಾ ರ್‍ಯಾಂಕ್‌ ಕೂಡ ನೀಡಲಾಗುವುದು. ನಿಯಮಗಳ ಪಾಲನೆಯಾಗದಿದ್ದಲ್ಲಿ ಪೈಲಟ್‌ಗಳ ವಿರುದ್ಧ 5 ವರ್ಷಗಳ ಕಾಲ ಪರವಾನಗಿ ರದ್ದತಿಯಂತಹ ಕ್ರಮವನ್ನೂ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

ಸಮುದ್ರದಲ್ಲಿ ಕಾಪ್ಟರ್ ಪತನ: 7 ಜನರ ಪವಾಡ ಸದೃಶ ರಕ್ಷಣೆ 

 ಶ್ರೀವಿಜಯಪುರಂ : ಜಾರ್ಖಂಡ್‌ನ ರಾಂಚಿಯಲ್ಲಿ ಏರ್‌ ಆ್ಯಂಬುಲೆನ್ಸ್‌ ಪತನ ಬೆನ್ನಲ್ಲೇ ಅಂಡಮಾನ್‌ ಕರಾವಳಿ ತೀರದಲ್ಲಿ ಮತ್ತೊಂದು ಅವಘಡ ಸಂಭವಿಸಿದೆ, ಇಬ್ಬರು ಸಿಬ್ಬಂದಿ ಸೇರಿದಂತೆ 7 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್‌ ಸಮುದ್ರದಲ್ಲಿ ಪತನಗೊಂಡಿದೆ. ಅದೃಷ್ಟವಶಾತ್‌ ಎಲ್ಲರನ್ನೂ ರಕ್ಷಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಂಗಳವಾರ ಬೆಳಿಗ್ಗೆ ಉತ್ತರ ಮತ್ತು ಮಧ್ಯ ಅಂಡಮಾನ್‌ ಜಿಲ್ಲೆಯ ಪೋರ್ಟ್‌ಬ್ಲೇರ್‌ನಿಂದ ರಂಗತ್‌ಗೆ ತೆರಳುತ್ತಿದ್ದ ನೋಯ್ಡಾ ಮೂಲದ ಪವನ್‌ ಹನ್ಸ್‌ ಹೆಲಿಕಾಪ್ಟರ್‌ ಮಾಯಾಬಂದರ್‌ನಲ್ಲಿ ರನ್‌ವೇಗೆ ಕೇವಲ 300 ಮೀ. ದೂರವಿರುವಾಗ ಸಮುದ್ರದಲ್ಲಿ ಪತನಗೊಂಡಿದೆ, ಈ ವೇಳೆ 5 ಪ್ರಯಾಣಿಕರು, ಇಬ್ಬರು ಸಿಬ್ಬಂದಿಯಿದ್ದರು. ತಕ್ಷಣವೇ ಸಮುದ್ರಕ್ಕಿಳಿದ ರಕ್ಷಣಾ ಸಿಬ್ಬಂದಿ, ಎಲ್ಲರನ್ನೂ ಸಮುದ್ರದ ಮಧ್ಯದಿಂದಲೇ ರಕ್ಷಿಸಿದ್ದಾರೆ. 

ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.ಈ ಬಗ್ಗೆ ನಾಗರಿಕ ವಿಮಾನಯಾನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ‘ಹೆಲಿಕಾಪ್ಟರ್‌ ಸಮುದ್ರದ ಮಧ್ಯದಲ್ಲಿ ಪತನಗೊಂಡಿದೆ. ತಾಂತ್ರಿಕ ದೋಷ ಅನಾಹುತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ವೇಳೆ ಪೈಲಟ್‌ ಸಮುದ್ರದಲ್ಲಿ ಕ್ರ್ಯಾಶ್‌ ಲ್ಯಾಂಡಿಂಗ್‌ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ಕೈಗೊಳ್ಳಲಾಗಿದೆ’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಅಮೆರಿಕದಲ್ಲಿ ಭಾರೀ ಹಿಮಪಾತ: 11,000 ವಿಮಾನಗಳು ಸ್ಥಗಿತ
ಇರಾನ್‌ ಮೇಲೆ ಯುದ್ಧಕ್ಕೆ ಹೊರಟ 5000ಅಮೆರಿಕ ಯೋಧರಿಗೆ ಟಾಯ್ಲೆಟ್‌ ಪ್ರಾಬ್ಲಂ