ನವದೆಹಲಿ: ಪಾನ್ ಮಸಾಲಾ ಉತ್ಪನ್ನಗಳ ಜಾಹೀರಾತು ನೀಡುವ ನಟರ ವಿರುದ್ಧ ಬಾಲಿವುಡ್ ನಟ ಜಾನ್ ಅಬ್ರಹಾಂ ಕಿಡಿಕಾರಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಜಾನ್, ‘ಸದೃಢತೆಯ ಪ್ರಜ್ಞೆಯಿಂದ ಆಕಾರವನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿರುವ ನೀವು ಸಾವನ್ನು ಮಾರಾಟ ಮಾಡುತ್ತಿದ್ದೀರಿ. ಅದರೊಡನೆ ಹೇಗೆ ಬದುಕುತ್ತೀರಿ’ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ‘ನಾವು ನುಡಿದಂತೆ ನಡೆದರೆ ಮಾದರಿಯಾಗುತ್ತೇವೆ. ಸಾರ್ವಜನಿಕವಾಗಿ ನಮ್ಮದಲ್ಲದ ವ್ಯಕ್ತಿತ್ವ ಪ್ರದರ್ಶಿಸಿದರೆ ಅದು ಮುಳುವಾಗುತ್ತದೆ. ಸದೃಢತೆಯ ಬಗ್ಗೆ ಮಾತನಾಡುವವರೇ ಪಾನ್ ಮಸಾಲಾ ಅನುಮೋದಿಸುತ್ತಾರೆ. ನಾನು ಯಾವ ನಟರನ್ನು ಅಗೌರವಿಸುತ್ತಿಲ್ಲ. ಆದರೆ ಆದರ್ಶ ಮುಖ್ಯ’ ಎಂದರು.
ದೇಶದ ಮೊದಲ ಬ್ರೈಲ್ ವಿವಿ ಒಡಿಶಾದಲ್ಲಿ ಆರಂಭ!
ಭುವನೇಶ್ವರ: ದೇಶದಲ್ಲಿ ಮೊದಲ ಬಾರಿಗೆ ಅಂಧ ವಿದ್ಯಾರ್ಥಿಗಳಿಗೆಂದೇ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯವು ಒಡಿಶಾದಲ್ಲಿ ಸ್ಥಾಪನೆಯಾಗಲಿದೆ. ಈ ವಿವಿಯವನ್ನು ಜಪಾನ್‌ನ ಸುಕುಬಾ ವಿಶ್ವ ವಿದ್ಯಾಲಯದ ಸಹಯೋಗದೊಂದಿಗೆ ಒಡಿಶಾ ಸರ್ಕಾರ ಸ್ಥಾಪಿಸಲಿದೆ. ಇದರಲ್ಲಿ ಅಂಧ ವಿದ್ಯಾರ್ಥಿಗಳಿಗೆಂದೇ ತಂತ್ರಜ್ಞಾನ, ಉನ್ನತ ವ್ಯಾಸಂಗ, ಅಲ್ಪಾವಧಿ ಕೋರ್ಸ್‌ಗಳಾದ ಆಕ್ಯುಪೆಂಚರ್, ಫಿಸಿಯೋ ತೆರಪಿಯಂಥ ಕೋರ್ಸ್‌ಗಳ ತರಬೇತಿ ನೀಡಲಾಗುತ್ತದೆ. ಜೊತೆಗೆ 9 ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಸಹಿತ ಅನುಕೂಲ ಮಾಡಿಕೊಡಲಾಗುತ್ತದೆ. ಈ ವಿವಿಗೆ 19ನೇ ಶತಮಾನದ ಅಂಧ ಕವಿ ಭೀಮಾ ಬೋಯ್ ಅವರ ಹೆಸರಿಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಕ್ಷಗಳಿಗೆ ಸರ್ಕಾರದಿಂದ ಧನಸಹಾಯ ಪ್ರಸ್ತಾವ ಇಲ್ಲ: ಕೇಂದ್ರದ ಸ್ಪಷ್ಟನೆ
ನವದೆಹಲಿ: ಚುನಾವಣಾ ಆಯೋಗದ ಮೂಲಕ ರಾಜಕೀಯ ಪಕ್ಷಗಳಿಗೆ ಧನಸಹಾಯ ನೀಡುವ ಯಾವುದೇ ಪ್ರಸ್ತಾವನೆಯು ಸರ್ಕಾರದ ಪರಿಗಣನೆಯಲ್ಲಿಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ಲೋಕಸಭೆಗೆ ತಿಳಿಸಿದೆ. ಇತ್ತೀಚೆಗೆ ಚುನಾವಣಾ ಆಯೋಗದ ಮುಖಾಂತರ ಕೇಂದ್ರ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಪ್ರತಿಯೊಂದು ರಾಜಕೀಯ ಪಕ್ಷಕ್ಕೆ ಅನುದಾನದ ರೂಪದಲ್ಲಿ ಹಣ ನೀಡುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆದರೆ ಈ ನಿಟ್ಟಿನಲ್ಲಿ ಇದರ ಬಗ್ಗೆ ಕಾನೂನು ರೂಪಿಸುವ ಯಾವುದೇ ಯೋಜನೆ ಇಲ್ಲವೆಂದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ. ಈ ಬಗ್ಗೆ ಕಾನೂನು ಮಂತ್ರಿ ಅರ್ಜುನ್ ರಾಮ್ ಮೇಘಾವಾಲ್ ಅವರು ಲೋಕಸಭೆಯಲ್ಲಿ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ.
ಬಲವಂತವಾಗಿ ರಷ್ಯಾ ಸೇನೆ ಸೇರಿದ 69 ಭಾರತೀಯರು ಮರಳುವುದು ಬಾಕಿ: ಕೇಂದ್ರ
ನವದೆಹಲಿ: ರಷ್ಯಾ ಸೇನೆಗೆ ಬಲವಂತವಾಗಿ ನೇಮಕಗೊಂಡಿದ್ದ 69 ಭಾರತೀಯರು ಭಾರತಕ್ಕೆ ಮರಳುವುದು ಬಾಕಿಯಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಶುಕ್ರವಾರ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ರಷ್ಯಾ ಸೇನೆಗೆ ಒಟ್ಟು 91 ಮಂದಿ ಭಾರತೀಯರು ಸೇರಿಕೊಂಡಿದ್ದರು. ಅದರಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. 14 ಮಂದಿ ಭಾರತಕ್ಕೆ ಮರಳಿದ್ದಾರೆ. ಆದರೆ ಇನ್ನು 69 ಮಂದಿ ಮರಳುವುದು ಬಾಕಿ ಎಂದು ಎಂದರು. ಭಾರತೀಯರನ್ನು ಕೂಡಲೇ ಬಿಡುಗಡೆ ಮಾಡುವಂತೆ ರಷ್ಯಾ ವಿದೇಶಾಂಗ ಸಚಿವರೊಂದಿಗೆ ಮಾತು ಕತೆ ನಡೆಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟೀನ್ ಅವರೊಂದಿಗೆ ಚರ್ಚಿಸಿದ್ದಾರೆ. ಭಾರತೀಯರನ್ನು ಶೀಘ್ರದಲ್ಲಿ ಬಿಡುಗಡೆ ಮಾಡಿವ ವಿಶ್ವಾಸವಿದೆ ಎಂದರು.
ನಾಳಿನ ನೀಟ್-ಪಿಜಿ ಪರೀಕ್ಷೆ ಮುಂದೂಡಿಕೆ ಇಲ್ಲ: ಸುಪ್ರೀಂ
ನವದೆಹಲಿ: ಆ.11ರಂದು ನಡೆಯಬೇಕಿದ್ದ ನೀಟ್- ಸ್ನಾತಕೋತ್ತರ ಪರೀಕ್ಷೆ ಮುಂದೂಡುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ವಜಾ ಮಾಡಿದೆ.ನೀಟ್ - ಪಿಜಿ ಒಂದು ಪರೀಕ್ಷೆ ಬೆಳಗ್ಗೆ, ಮತ್ತೊಂದು ಪರೀಕ್ಷೆ ಮಧ್ಯಾಹ್ನ ನಿಗದಿಪಡಿಲಾಗಿದೆ. ಹೀಗೆ ಪರೀಕ್ಷೆ ಬರೆಯಲು ನಿಗದಿಪಡಿಸಲಾಗಿರುವಬ ಕೇಂದ್ರಗಳಿಗೆ ತಲುಪಲು ಕಷ್ಟವಾಗುತ್ತಿದೆ. ಹೀಗಾಗಿ ಪರೀಕ್ಷೆ ಮುಂದೂಡಬೇಕು ಎಂದು ಕೋರಿ 5 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು.
‘ಈ ಪ್ರಪಂಚದಲ್ಲಿ ಯಾವುದೂ ಪರಿಪೂರ್ಣವಲ್ಲ. ಐದು ವಿದ್ಯಾರ್ಥಿಗಳ ಸಲುವಾಗಿ ಎರಡು ಲಕ್ಷ ಅಭ್ಯರ್ಥಿಗಳ ವೃತ್ತಿ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಲು ಸಾಧ್ಯವಿಲ್ಲ. ಈ ಅರ್ಜಿಗಳ ಹಿಂದೆ ಯಾರ ಕೈವಾಡವಿದೆ ಎಂಬುದು ತಿಳಿಯುತ್ತಿಲ್ಲ’ ಎಂದು ಮುಖ್ಯ ನ್ಯಾ। ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿದಾರರ ಮೇಲೆ ಆಕ್ರೋಶ ವ್ಯಕ್ತಪಡಿಸಿದೆ.