;Resize=(412,232))
ನವದೆಹಲಿ : ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಏರಿರುವ ನರೇಂದ್ರ ಮೋದಿ ಜೂ.10ರಂದು ಹೊಸ ದಾಖಲೆ ನಿರ್ಮಿಸಲಿದ್ದಾರೆ. ಈವರೆಗೆ ಜವಹರಲಾಲ್ ನೆಹರೂ ಅವರ ಹೆಸರಲ್ಲಿರುವ ‘ದೇಶದ ಸುದೀರ್ಘಾವಧಿ ಪ್ರಧಾನಿ’ ಎಂಬ ದಾಖಲೆಯನ್ನು ಅಂದು ಮೋದಿ ಮುರಿಯಲಿದ್ದಾರೆ!
2014, ಮೇ 26ರಂದು ಪ್ರಧಾನಿ ಮೋದಿ ಅವರು ಮೊದಲ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದು, ಆ ಬಳಿಕ ಸತತ ಎರಡು ಚುನಾವಣೆಗಳಲ್ಲಿ ಗೆದ್ದು 10 ವರ್ಷದಿಂದ ಅಧಿಕಾರ ನಡೆಸುತ್ತಿದ್ದಾರೆ. ಜೂ.10ಕ್ಕೆ ಪ್ರಧಾನಿ ಹುದ್ದೆಯಲ್ಲಿ ಮೋದಿ ಅವರು 4,399 ದಿನಗಳನ್ನು ಪೂರ್ಣಗೊಳಿಸಲಿದ್ದಾರೆ.
ಭಾರತದ ಮೊದಲ ಪ್ರಧಾನಿಯೂ ಆಗಿದ್ದ ಜವಾಹರ ಲಾಲ್ ನೆಹರೂ ಅವರು 4,398 ದಿನಗಳ ಕಾಲ ದೇಶ ಆಳಿದ್ದರು. ಆ ಬಳಿಕ ದೇಶದಲ್ಲಿ ಅತೀ ಹೆಚ್ಚು ಕಾಲ (4077 ದಿನ-ಜ.24, 1966 ರಿಂದ ಮಾ.24,1977) ಪ್ರಧಾನಿ ಹುದ್ದೆಯಲ್ಲಿದ್ದ ಗೌರವ ಇಂದಿರಾ ಗಾಂಧಿ ಅವರಿಗೆ ಸಂದಿತ್ತು. ಇಂದಿರಾರ ಈ ದಾಖಲೆಯನ್ನು ಮೋದಿ ಕಳೆದ ವರ್ಷ ಜು.25, 2025ರಂದೇ ಮುರಿದಿದ್ದರು.
ನೆಹರೂ ಅವರು 1951-52ರಲ್ಲಿ ನಡೆದ ಚುನಾವಣೆಯಲ್ಲಿ ದೇಶದ ಮೊದಲ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ನಂತರ 1957 ಮತ್ತು 1962ರಲ್ಲಿ ಪುನರಾಯ್ಕೆ ಆಗಿದ್ದರು. ಹೀಗೆ ಸತತ ಮೂರು ವರ್ಷಗಳ ಕಾಲ ಪ್ರಧಾನಿಯಾಗಿ ಆಯ್ಕೆಯಾದ ಹೆಗ್ಗಳಿಗೆಯೂ ಅವರ ಹೆಸರಲ್ಲೇ ಇತ್ತು. ಈ ಸಾಧನೆಯನ್ನು ಮೋದಿ ಅವರು ಈಗಾಗಲೇ ಸರಿಗಟ್ಟಿದ್ದಾರೆ. ಅಲ್ಲದೆ ದೇಶವನ್ನು ಅತಿ ಸುದೀರ್ಘ ಕಾಲ ಆಳಿದ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಗೌರವಕ್ಕೂ ಮೋದಿ ಪಾತ್ರವಾಗಿದ್ದಾರೆ.