ಸುಪ್ರೀಂ ಜಡ್ಜ್‌ಗಳಾಗಿ ಅಂಜಾರಿಯಾ ಸೇರಿ ಮೂವರ ನೇಮಕ

KannadaprabhaNewsNetwork |  
Published : May 30, 2025, 12:52 AM ISTUpdated : May 30, 2025, 04:29 AM IST
ನ್ಯಾ। ಎನ್‌.ವಿ.ಅಂಜಾರಿಯಾ | Kannada Prabha

ಸಾರಾಂಶ

ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎನ್‌.ವಿ.ಅಂಜಾರಿಯಾ, ಗುವಾಹಟಿ ಹೈಕೋರ್ಟ್‌ನ ಸಿಜೆ ವಿಜಯ್‌ ಬಿಷ್ಣೋಯ್‌, ಬಾಂಬೆ ಹೈಕೋರ್ಟ್‌ ಜಡ್ಜ್‌ ಎ.ಎಸ್‌.ಚಂದೂರ್ಕರ್‌ ಅವರನ್ನು ಸುಪ್ರೀಂಕೋರ್ಟ್‌ನ ನೂತನ ನ್ಯಾಯಾಧೀಶರನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಗುರುವಾರ ಅಧಿಸೂಚನೆ ಹೊರಡಿಸಿದೆ.

ನವದೆಹಲಿ: ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎನ್‌.ವಿ.ಅಂಜಾರಿಯಾ, ಗುವಾಹಟಿ ಹೈಕೋರ್ಟ್‌ನ ಸಿಜೆ ವಿಜಯ್‌ ಬಿಷ್ಣೋಯ್‌, ಬಾಂಬೆ ಹೈಕೋರ್ಟ್‌ ಜಡ್ಜ್‌ ಎ.ಎಸ್‌.ಚಂದೂರ್ಕರ್‌ ಅವರನ್ನು ಸುಪ್ರೀಂಕೋರ್ಟ್‌ನ ನೂತನ ನ್ಯಾಯಾಧೀಶರನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಗುರುವಾರ ಅಧಿಸೂಚನೆ ಹೊರಡಿಸಿದೆ.

 ಹಿಂದಿನ ಸಿಜೆಐ ಸಂಜೀವ್ ಖನ್ನಾ, ನ್ಯಾ। ಅಭಯ್‌ ಎಸ್‌. ಓಕಾ, ನ್ಯಾ। ಹೃಷಿಕೇಶ್‌ ರಾಯ್ ಇತ್ತೀಚೆಗೆ ನಿವೃತ್ತರಾಗಿದ್ದರು. ಈ ಹಿನ್ನೆಲೆಯಲ್ಲಿ ಖಾಲಿ ಹುದ್ದೆ ಭರ್ತಿ ಮಾಡಲಾಗಿದೆ. ಈ ಮೂವರೂ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸುಪ್ರೀಂಕೋರ್ಟ್‌ನ ಎಲ್ಲಾ 34 ಜಡ್ಜ್‌ ಹುದ್ದೆಗಳು ಭರ್ತಿಯಾದಂತೆ ಆಗಲಿದೆ. ಆದರೆ ಜೂ.9ರಂದು ನ್ಯಾ. ಬೇಲಾ ತ್ರಿವೇದಿ ನಿವೃತ್ತರಾಗಲಿದ್ದು, ಆಗ ಮತ್ತೆ ಒಂದು ಸ್ಥಾನ ಖಾಲಿಯಾಗಲಿದೆ.

ಸಾವರ್ಕರ್, ಗೋಡ್ಸೆ ರಕ್ತ ಸಂಬಂಧಿ: ಕೋರ್ಟ್‌ಗೆ ರಾಹುಲ್‌ ಅಫಿಡವಿಟ್

ನವದೆಹಲಿ: ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಅವರು ಮಹಾತ್ಮ ಗಾಂಧಿಯವರ ಹಂತಕ ನಾಥುರಾಮ್ ಗೋಡ್ಸೆಯ ರಕ್ತಸಂಬಂಧಿ ಎಂದು ಲೋಕಸಭೆಯ ವಿಪಕ್ಷ ನಾಯಕ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ. ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ತಮ್ಮ ಮೇಲೆ ಹೂಡಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧ ಪುಣೆ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ರಾಹುಲ್ ಇದನ್ನು ಉಲ್ಲೇಖಿಸಿದ್ದಾರೆ.

 ‘ದೂರುದಾರ ಸಾತ್ಯಕಿ ಸಾವರ್ಕರ್ ಗೋಡ್ಸೆ ವಂಶಕ್ಕೆ ಸೇರಿದವರು. ಸಾತ್ಯಕಿ ಅವರ ತಾಯಿ ಹಿಮಾನಿ, ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯ ಸಹೋದರ ಗೋಪಾಲ್ ಗೋಡ್ಸೆಯವರ ಮಗಳು. ಹಿಮಾನಿಯವರು ಹಿಂದುತ್ವದ ಕಾರ್ಯಕರ್ತೆ ಮತ್ತು ವಿನಾಯಕ ಸಾವರ್ಕರ್ ಸೋದರಳಿಯ ಅಶೋಕ್ ಸಾವರ್ಕರ್ ಅವರನ್ನು ವಿವಾಹವಾಗಿದ್ದರು’ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ. 2023ರಲ್ಲಿ ಲಂಡನ್‌ನ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ರಾಹುಲ್ ಗಾಂಧಿ, ಸಾವರ್ಕರ್ ಅವರು ತಾವು ಮುಸ್ಲಿಂ ವ್ಯಕ್ತಿಯೊಬ್ಬನನ್ನು ಹೊಡೆದು ಸಂತೋಷಪಟ್ಟಿರುವುದಾಗಿ ಪುಸ್ತಕವೊಂದರಲ್ಲಿ ಬರೆದುಕೊಂಡಿದ್ದಾರೆ ಎಂದಿದ್ದರು. ಈ ಹೇಳಿಕೆ ವಿರುದ್ಧ ಸಾತ್ಯಕಿ ಸಾವರ್ಕರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಅಂಬಾನಿ, ಅದಾನಿ, ರೋಶನಿ ದೇಶದ ಟಾಪ್‌ 3 ಸಿರಿವಂತರು

ನವದೆಹಲಿ: 2025ರ ಹುರೂನ್‌ ಶ್ರೀಮಂತರ ಪಟ್ಟಿ ಬಿಡುಗಡೆಯಾಗಿದ್ದು, ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಖೇಶ್ ಅಂಬಾನಿ 8.6 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಅದಾನಿ ಗ್ರೂಪ್‌ನ ಮುಖ್ಯಸ್ಥ ಗೌತಮ್ ಅದಾನಿ ₹8.4 ಲಕ್ಷ ಕೋಟಿ ಆಸ್ತಿಯೊಂದಿಗೆ 2ನೇ ಸ್ಥಾನ, ಎಚ್‌ಸಿಎಲ್‌ ಟೆಕ್ನಾಲಜೀಸ್‌ನ ಅಧ್ಯಕ್ಷೆ ರೋಶನಿ ನಾಡರ್ ₹3.5 ಲಕ್ಷ ಕೋಟಿಯೊಂದಿಗೆ 3ನೇ ಸ್ಥಾನದಲ್ಲಿದ್ದಾರೆ. ಈ ಮೂಲಕ ಶ್ರೀಮಂತ ಟಾಪ್-3 ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ದಿಲೀಪ್ ಸಾಂಘ್ವಿ (₹2.5 ಲಕ್ಷ ಕೋಟಿ), ಅಜೀಂ ಪ್ರೇಮ್‌ಜಿ (₹2.2 ಲಕ್ಷ ಕೋಟಿ), ಕುಮಾರ್ ಮಂಗಲಂ ಬಿರ್ಲಾ (₹2 ಲಕ್ಷ ಕೋಟಿ), ಸೈರಸ್ ಪೂನಾವಾಲಾ (₹2 ಲಕ್ಷ ಕೋಟಿ), ರಾಧಾಕಿಶನ್ ದಮಾನಿ (₹1.4 ಲಕ್ಷ ಕೋಟಿ ರು.), ರವಿ ಜೈಪುರಿಯಾ (₹1.4 ಲಕ್ಷ ಕೋಟಿ), ನೀರಜ್ ಬಜಾಜ್ (₹1.6 ಲಕ್ಷ ಕೋಟಿ) ಕ್ರಮವಾಗಿ 4ರಿಂದ 10ನೇ ಸ್ಥಾನ ಪಡೆದಿದ್ದಾರೆ.

ನನಗೆ ಮಾಡಲು ಬೇರೆ ಕೆಲಸಗಳೂ ಇವೆ: ಕೈಗೆ ತರೂರ್‌ ತಿರುಗೇಟು

ನವದೆಹಲಿ: ಕೇಂದ್ರ ಸರ್ಕಾರ ಹಾಗೂ ಅದರ ಕ್ರಮಗಳನ್ನು ಶ್ಲಾಘಿಸಿ ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾರುವ ಕಾಂಗ್ರೆಸ್‌ ಸಂಸದ ಶಶಿ ತರೂರ್‌, ‘ನಾನು ಮಾತಾಡಿದ್ದು ಇತ್ತೀಚೆಗೆ ಪಾಕ್‌ ಮೇಲೆ ನಡೆಸಲಾದ ದಾಳಿಯ ಬಗ್ಗೆ. ಸ್ಪಷ್ಟನೆ ನೀಡುವುದು ಬಿಟ್ಟು ನನಗೆ ಮಾಡಲು ಇನ್ನೂ ಬೇರೆ ಮುಖ್ಯ ಕೆಲಸಗಳಿವೆ’ ಎಂದಿದ್ದಾರೆ. 

ಪಾಕ್‌ ಬಣ್ಣ ಬಯಲಿಗೆ ವಿದೇಶಗಳಿಗೆ ತೆರಳಿರುವ ಸರ್ವಪಕ್ಷ ನಿಯೋಗಗಳಲ್ಲಿ ಒಂದರ ನೇತೃತ್ವ ವಹಿಸಿರುವ ತರೂರ್‌, ‘ಮೊದಲ ಬಾರಿ ಭಾರತ ಎಲ್‌ಒಸಿ ದಾಟಿ ಪಾಕಿಸ್ತಾನದ ಮೇಲೆ ದಾಳಿ ಮಾಡಿದೆ’ ಎಂದಿದ್ದರು. 

ಇದರಿಂದ ಕೆರಳಿದ ಕಾಂಗ್ರೆಸ್‌, ಅವರನ್ನು ಬಿಜೆಪಿಯ ಸೂಪರ್‌ ವಕ್ತಾರ ಎಂದಿತ್ತು. ಅತ್ತ 2018ರಲ್ಲಿ ಪ್ರಕಟವಾದ ತರೂರ್‌ ರಚಿತ ‘ಪಾರಾಡಾಕ್ಸಿಕಲ್‌ ಪಿಎಂ’ ಪುಸ್ತಕದಲ್ಲಿ ‘ಮಿಲಿಟರಿ ಕಾರ್ಯಾಚರಣೆಗಳ ನಾಚಿಕೆಯಿಲ್ಲದ ಶೋಷಣೆ’ ಎಂದು ಬಿಜೆಪಿ ಸರ್ಕಾರವನ್ನು ಟೀಕಿಸಿದ್ದನ್ನು ಉಲ್ಲೇಖಿಸಿರುವ ಕಾಂಗ್ರೆಸ್‌ ನಾಯಕ ಪವನ್‌ ಖೇರಾ, ‘ನಾನು ಇದನ್ನು ಒಪ್ಪುತ್ತೇನೆ’ ಎಂದು ತಿರುಗೇಟು ನೀಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ