ಥಿಯೇಟರ್‌ಗೆ ಬೆಂಕಿ ಹಾಕಿದರೆ ಅಗ್ನಿಶಾಮಕ ಬಳಸಿ: ಸುಪ್ರೀಂ

KannadaprabhaNewsNetwork |  
Published : Jun 10, 2025, 11:55 PM IST
ಕಮಲ್‌ ಹಾಸನ್‌ | Kannada Prabha

ಸಾರಾಂಶ

ಕನ್ನಡ ಭಾಷೆ ಕುರಿತ ನಟ ಕಮಲ್‌ ಹಾಸನ್‌ ಅವರ ಹೇಳಿಕೆಯಿಂದ ವಿವಾದಕ್ಕೊಳಗಾಗಿರುವ ನಟ ಕಮಲ್‌ ಹಾಸನ್‌ ಅವರ ‘ಥಗ್‌ ಲೈಫ್‌’ ಸಿನಿಮಾವನ್ನು ಕರ್ನಾಟಕದ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡಬೇಕು ಹಾಗೂ ಚಿತ್ರ ಪ್ರದರ್ಶನದ ವೇಳೆ ರಕ್ಷಣೆ ನೀಡಬೇಕು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.

ಕಮಲ್ ಸಿನಿಮಾ ಬಿಡುಗಡೆ ಕೋರಿದ್ದವರಿಗೆ ಸಲಹೆಶುಕ್ರವಾರ ಪಿಐಎಲ್‌ ವಿಚಾರಣೆಗೆ ಸುಪ್ರೀಂ ಸಮ್ಮತಿ

-----

ಕರ್ನಾಟಕದಲ್ಲಿ ಚಿತ್ರ ಬಿಡುಗಡೆಗೆ ಅವಕಾಶ, ಚಿತ್ರಮಂದಿರಕ್ಕೆ ಭದ್ರತೆ ನೀಡುವಂತೆ ಕೋರಿ ಸುಪ್ರೀಂ ಅರ್ಜಿ ಸಲ್ಲಿಕೆ

ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುವುದಾಗಿ ಕನ್ನಡಪರ ಸಂಘಟನೆಗಳಿಂದ ಬೆದರಿಕೆ ಎಂದು ಅರ್ಜಿದಾರರ ಆರೋಪ

ಬೆಂಕಿ ಹಾಕಿದರೆ ಅಗ್ನಿಶಾಮಕ ಬಳಸಿ ಎಂದ ಕೋರ್ಟ್‌. ತುರ್ತು ವಿಚಾರಣೆ ನಡೆಸಲೂ ಸುಪ್ರೀಂಕೋರ್ಟ್‌ ನಕಾರ

ಬಳಿಕ ಅರ್ಜಿದಾರರ ವಾದ ಆಲಿಸಿ ಮುಂದಿನ ಶುಕ್ರವಾರ ಥಗ್‌ಲೈಫ್‌ ಚಿತ್ರದ ಕುರಿತು ಅರ್ಜಿ ವಿಚಾರಣೆಗೆ ಸಮ್ಮತಿ

ನವದೆಹಲಿ: ಕನ್ನಡ ಭಾಷೆ ಕುರಿತ ನಟ ಕಮಲ್‌ ಹಾಸನ್‌ ಅವರ ಹೇಳಿಕೆಯಿಂದ ವಿವಾದಕ್ಕೊಳಗಾಗಿರುವ ನಟ ಕಮಲ್‌ ಹಾಸನ್‌ ಅವರ ‘ಥಗ್‌ ಲೈಫ್‌’ ಸಿನಿಮಾವನ್ನು ಕರ್ನಾಟಕದ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡಬೇಕು ಹಾಗೂ ಚಿತ್ರ ಪ್ರದರ್ಶನದ ವೇಳೆ ರಕ್ಷಣೆ ನೀಡಬೇಕು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ. ಆದರೆ ಇದೇ ವೇಳೆ, ‘ಚಿತ್ರಮಂದಿರಕ್ಕೆ ಬೆಂಕಿ ಹಚ್ಚುವುದಾಗಿ ಕೆಲವು ಸಂಘಟನೆಗಳು ಬೆದರಿಕೆ ಹಾಕುತ್ತಿವೆ’ ಎಂದು ಅರ್ಜಿದಾರರ ಪರ ವಕೀಲರು ಹೇಳಿದಾಗ, ‘ಬೆಂಕಿ ನಂದಿಸುವ ಉಪಕರಣಗಳನ್ನು ಅಳವಡಿಸಿ’ ಎಂಬ ಸಲಹೆಯನ್ನೂ ಕೋರ್ಟ್‌ ನೀಡಿದೆ.

ಪ್ರಕರಣದ ಕುರಿತು ತುರ್ತು ವಿಚಾರಣೆ ನಡೆಸುವಂತೆ ಕೋರಿ ಬೆಂಗಳೂರಿನ ಎಂ.ಮಹೇಶ್‌ ರೆಡ್ಡಿ ಅವರು ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಮೂರ್ತಿ ಪ್ರಶಾಂತ್‌ ಕುಮಾರ್‌ ಮಿಶ್ರಾ ಮತ್ತು ನ್ಯಾಯಮೂರ್ತಿ ಮನಮೋಹನ್‌ ಅವರಿದ್ದ ಪೀಠವು ಪ್ರಕರಣದ ತುರ್ತು ವಿಚಾರಣೆಗೆ ನಿರಾರಿಸಿ, ಜೂ.13ರ ದಿನ ನಿಗದಿ ಮಾಡಿತು.

ಅಗ್ನಿನಂದಕ ಅಳವಡಿಸಿ ಎಂದ ಕೋರ್ಟ್‌:

ಅರ್ಜಿದಾರರ ಪರ ವಾದಿಸಿದ ವಕೀಲ ನವಪ್ರೀತ್‌ ಕೌರ್ ಅವರು, ‘ಕರ್ನಾಟಕದಲ್ಲಿ ಥಗ್‌ಲೈಫ್‌ ಸಿನಿಮಾ ಬಿಡುಗಡೆ ಮಾಡಿದರೆ ಚಿತ್ರಮಂದಿರಗಳಿಗೆ ಬೆಂಕಿ ಇಡಲಾಗುವುದು ಎಂದು ಕೆಲ ಸಂಘಟನೆಗಳು ಬಹಿರಂಗ ಎಚ್ಚರಿಕೆ ನೀಡಿವೆ. ಈ ಮೂಲಕ ಸಿನಿಮಾ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ಪರೋಕ್ಷವಾಗಿ ನಿಷೇಧ ಹೇರಲಾಗಿದೆ. ಹೀಗಾಗಿ ಚಿತ್ರಮಂದಿರಗಳಿಗೆ ರಕ್ಷಮೆ ನೀಡುವ ಮೂಲಕ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಆಗ ಒಂದು ಹಂತದಲ್ಲಿ ನ್ಯಾ। ಮಿಶ್ರಾ ಅವರು, ‘ಬೆಂಕಿ ನಂದಿಸುವ ಉಪಕರಣಗಳನ್ನು ಅಳವಡಿಸಿ’ ಎಂದು ಹೇಳಿದ್ದಲ್ಲದೆ, ‘ಪ್ರಕರಣಕ್ಕೆ ಸಂಬಂಧಿಸಿ ಚಿತ್ರಮಂದಿರಗಳ ಸಂಘವು ಹೈಕೋರ್ಟ್‌ ಮೊರೆ ಹೋಗಲಿ’ ಎಂದು ತಿಳಿಸಿದರು.

ಆಗ ನ್ಯಾಯವಾದಿ ಕೌರ್‌ ಅ‍ವರು, ‘ಸಿನಿಮಾ ನಿರ್ಮಾಪಕರು ಹೈಕೋರ್ಟ್‌ಗೂ ಮೊರೆ ಹೋಗಿದ್ದರು. ಆದರೆ ಅಲ್ಲಿ ಅವರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಬದಲಾಗಿ ಬೆದರಿಕೆ ಹಾಕುತ್ತಿರುವವರ ಜತೆಗೆ ರಾಜಿ ಮಾಡಿಕೊಳ್ಳುವಂತೆ ನಟನಿಗೆ ಸಲಹೆ ನೀಡಲಾಗಿದೆ’ ಎಂದು ತಿ‍ಳಿಸಿದರು.

ಆ ಬಳಿಕ ನ್ಯಾಯಾಲಯವು ಈ ಕುರಿತ ಅರ್ಜಿಯನ್ನು ಶುಕ್ರವಾರ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು.

ಏನಿದು ಪ್ರಕರಣ?:

ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿದೆ ಎಂದು ನಟ ಕಮಲ್‌ ಹಾಸನ್‌ ನೀಡಿದ್ದ ಹೇಳಿಕೆಯು ಕರ್ನಾಟಕದಲ್ಲಿ ತೀವ್ರ ವಿವಾದಕ್ಕೆ ಗುರಿಯಾಗಿದೆ. ಈ ಹೇಳಿಕೆಗಾಗಿ ಅವರು ಕ್ಷಮೆ ಕೋರಬೇಕು, ಇಲ್ಲದಿದ್ದರೆ ಥಗ್‌ ಲೈಫ್ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಬಹಿರಂಗ ಎಚ್ಚರಿಕೆ ನೀಡಿದ್ದವು. ಈ ಸಿನಿಮಾ ಜೂ.5ರಂದು ಬಿಡುಗಡೆಯಾಗಿದೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ