ಕಮಲಾ ಸೋಲು: ತಮಿಳ್ನಾಡಿನ ತವರೂರಲ್ಲಿ ನಿರಾಸೆ

KannadaprabhaNewsNetwork | Published : Nov 6, 2024 11:47 PM

ಸಾರಾಂಶ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಭಾರತೀಯ ಮೂಲದ ಡೆಮೊಕ್ರಟಿಕ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರೀಸ್‌ ಅವರು ಸೋತಿರುವ ಕಾರಣ ಅವರ ತಾಯಿಯ ಹುಟ್ಟೂರು ತಮಿಳುನಾಡಿನ ತುಳಸೇಂದ್ರಪುರಂನ ಜನರು ನಿರಾಸೆಗೊಳಗಾದರು.

ತಿರುವರೂರು: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಭಾರತೀಯ ಮೂಲದ ಡೆಮೊಕ್ರಟಿಕ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರೀಸ್‌ ಅವರು ಸೋತಿರುವ ಕಾರಣ ಅವರ ತಾಯಿಯ ಹುಟ್ಟೂರು ತಮಿಳುನಾಡಿನ ತುಳಸೇಂದ್ರಪುರಂನ ಜನರು ನಿರಾಸೆಗೊಳಗಾದರು. ಆದರೆ, ‘ಸೋಲು ಗೆಲುವು ಜೀವನದ ಭಾಗ. ಮುಂದೆ ಅವರು ಪುಟಿದೇಳುವರು ಎಂಬ ವಿಶ್ವಾಸವಿದೆ’ ಎಂದು ಸಮಾಧಾನಪಟ್ಟುಕೊಂಡರು.

ಅವರು ಬುಧವಾರ ಬೆಳಗ್ಗೆಯಿಂದಲೂ ಟಿವಿ ಚಾನೆಲ್‌, ವೆಬ್‌ಸೈಟ್‌ಗಳಲ್ಲಿ ಚುನಾವಣಾ ಫಲಿತಾಂಶಗಳನ್ನು ವೀಕ್ಷಿಸುತ್ತಿದ್ದರು. ಹಲವು ಮಂದಿ ಕಮಲಾ ಅವರ ಗೆಲುವಿಗಾಗಿ ಶ್ರೀ ಧರ್ಮಶಾಸ್ತ್ರ ಪೆರುಮಾಳ್‌ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದರು. ಆದರೆ ಟ್ರಂಪ್‌ ಮುನ್ನಡೆ ಸಾಧಿಸುತ್ತಿದ್ದಂತೆಯೇ ಜನ ನಿರಾಶರಾದರು.

ಈ ಬಗ್ಗೆ ಮಾತನಾಡಿದ ಸ್ಥಳೀಯ ಡಿಎಂಕೆ ಮುಖಂಡ ಜೆ. ಸುಧಾಕರ್‌, ‘ನಾವು ಕಮಲಾ ಅವರು ಗೆದ್ದು ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷರಾಗುತ್ತಾರೆ ಎಂದು ಸಂಭ್ರಮಿಸಲು ದೀಪಾವಳಿಗಿಂತಲೂ ಹೆಚ್ಚಿನ ತಯಾರಿ ಮಾಡಿಕೊಂಡಿದ್ದೆವು. ಸಿಹಿ ಹಾಗೂ ಪಟಾಕಿಗಳನ್ನು ಹಂಚಿ, ಊಟವನ್ನು ಸಿದ್ಧಪಡಿಸಿ ಇಟ್ಟಿದ್ದೆವು’ ಎಂದರು.

ಆದರೆ, ‘ಕಮಲಾ ಅವರು ಹೋರಾಟಗಾರ್ತಿಯಾಗಿದ್ದು, ಮತ್ತೆ ಅವರು ಗೆದ್ದು ಬರುತ್ತಾರೆ. ಅವರು ಮುಂದಿನ ಬಾರಿ ಗೆಲುವು ಸಾಧಿಸಿ ನಮ್ಮ ಊರಿಗೆ ಭೇಟಿ ನೀಡುತ್ತಾರೆ. ಆ ದಿನ ಬರುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

---

ಸೋಲಿನಿಂದ ನಿರಾಶೆ: ಕಮಲಾ ಭಾಷಣ ರದ್ದು

ವಾಷಿಂಗ್ಟನ್‌: ಅಮೆರಿಕ ಚುಣಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ವಿರುದ್ಧ ತೀವ್ರ ಹಿನ್ನಡೆ ಕಂಡ ಹಿನ್ನೆಲೆಯಲ್ಲಿ ಡೆಮಾಕ್ರೆಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರು ತಮ್ಮ ಭಾಷಣ ರದ್ದು ಮಾಡಿದ್ದಾರೆ.ಮತದಾನ ಮುಗಿಯುತ್ತಿದ್ದಂತೆಯೇ ಬುಧವಾರ ಬೆಳಗ್ಗೆ ಕಮಲಾ ಮಾತನಾಡಬೇಕಿತ್ತು. ಆದರೆ ಅವರು ಹಿನ್ನಡೆ ಸಾಧಿಸುವ ಸುಳಿವು ಸಿಕ್ಕ ಕಾರಣ ಭಾಷಣ ರದ್ದು ಮಾಡಿದರು. ಈ ಬಗ್ಗೆ ಅವರ ಪ್ರಚಾರ ಸಮಿತಿ ಮುಖ್ಯಸ್ಥರು ಪ್ರತಿಕ್ರಿಯಿಸಿ, ‘ನಾಳೆ ಕಮಲಾ ಮಾತನಾಡಲಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

Share this article