ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಇನ್ನೂ 3 ತಿಂಗಳು ಬಾಕಿ : 3 ರಾಜ್ಯಗಳಲ್ಲಿ ಕಮಲಾಗೆ ಮುನ್ನಡೆ- ಸಮೀಕ್ಷೆ

KannadaprabhaNewsNetwork |  
Published : Aug 12, 2024, 01:01 AM ISTUpdated : Aug 12, 2024, 05:20 AM IST
ಅಮೆರಿಕ ಚುನಾವಣೆ | Kannada Prabha

ಸಾರಾಂಶ

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಇನ್ನೂ 3 ತಿಂಗಳು ಬಾಕಿ ಉಳಿದಿದಿರುವಾಗ ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್ ವಿರುದ್ಧ ಡೆಮಾಕ್ರೆಟಿಕ್‌ ಹುರಿಯಾಳು ಕಮಲಾ ಹ್ಯಾರಿಸ್‌ ನಿರ್ಣಾಯಕ ಮೂರು ರಾಜ್ಯಗಳಲ್ಲಿ ಗೆಲುವು ಸಿಗಬಹುದು ಎಂದು ಸಮೀಕ್ಷೆಯೊಂದು ಹೇಳಿದೆ.

ವಾಷಿಂಗ್ಟನ್‌: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಇನ್ನೂ 3 ತಿಂಗಳು ಬಾಕಿ ಉಳಿದಿದಿರುವಾಗ ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್ ವಿರುದ್ಧ ಡೆಮಾಕ್ರೆಟಿಕ್‌ ಹುರಿಯಾಳು ಕಮಲಾ ಹ್ಯಾರಿಸ್‌ ನಿರ್ಣಾಯಕ ಮೂರು ರಾಜ್ಯಗಳಲ್ಲಿ ಗೆಲುವು ಸಿಗಬಹುದು ಎಂದು ಸಮೀಕ್ಷೆಯೊಂದು ಹೇಳಿದೆ.

ಅಮೆರಿಕದ ಮೂರು ನಿರ್ಣಾಯಕ ರಾಜ್ಯಗಳಾಗಿರುವ ವಿಸ್ಕಾನ್ಸಿನ್‌, ಪೆನ್ಸಿಲ್ವೆನೀಯಾ, ಮಿಚಿಗನ್‌ನಲ್ಲಿ ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಮುನ್ನಡೆ ಸಾಧಿಸಬಹುದು, ಟ್ರಂಪ್‌ಗೆ ಜಯದ ಹಾದಿ ಕಷ್ಟವಾಗಬಹುದು ಎಂದು ಅಮೆರಿಕದ ನ್ಯೂಯಾರ್ಕ್‌ ಟೈಮ್ಸ್‌ ಮತ್ತು ಸಿಯೆನಾ ಕಾಲೇಜು ಆ. 5- 9 ರವರೆಗೆ ನಡೆಸಿದ ಸಮೀಕ್ಷೆ ಹೇಳಿದೆ.ಸಮೀಕ್ಷೆಯ ಪ್ರಕಾರ, ಈ ರಾಜ್ಯಗಳಲ್ಲಿ ಕಮಲಾ ಹ್ಯಾರಿಸ್‌ ಶೇ. 50 ರಷ್ಟು ಮತಗಳನ್ನು ಪಡೆಯುವ ಸಾಧ್ಯತೆಗಳಿವೆ. ಆದರೆ ಟ್ರಂಪ್‌ಗೆ ಶೇ. 46ರಷ್ಟು ಮತ ಪ್ರಮಾಣ ದೊರೆತಿದೆ.

ಈ ಸಮೀಕ್ಷೆಗೆ 1,973 ಮತದಾರರ ಅಭಿಪ್ರಾಯವನ್ನು ಪರಿಗಣನೆಗೆ ತೆಗದುಕೊಳ್ಳಲಾಗಿತ್ತು.

ಗಡಿ ನುಸುಳಲು ಯತ್ನ: 11 ಬಾಂಗ್ಲನ್ನರು ಬಿಎಸ್ಎಫ್‌ ವಶಕ್ಕೆ

ನವದೆಹಲಿ: ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆ ಮುಂದುವರೆದಿರುವ ನಡುವೆಯೇ ಭಾರತಕ್ಕೆ ಅಕ್ರಮವಾಗಿ ನುಸುಳಲು ಯತ್ನಿಸಿದ ಬಾಂಗ್ಲಾದೇಶದ 11 ನಾಗರಿಕರನ್ನು ಬಿಎಸ್‌ಎಫ್‌ ವಶಕ್ಕೆ ಪಡೆದಿದೆ.ಪಶ್ಚಿಮ ಬಂಗಾಳ, ತ್ರಿಪುರಾ, ಮೇಘಾಲಯ ಗಡಿ ಪ್ರದೇಶದಲ್ಲಿ ಒಳನುಸುಳುವ ವೇಳೆ 11 ಜನರನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ಕಾನೂನು ಕ್ರಮಕ್ಕಾಗಿ ವಶಕ್ಕೆ ಪಡೆದ ವ್ಯಕ್ತಿಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ಬಿಎಸ್‌ಎಫ್‌ ಮಾಹಿತಿ ನೀಡಿದೆ.

ಬಾಂಗ್ಲಾ ಸಿಜೆ ಆಗಿ ರೆಫಾತ್‌ ಅಹ್ಮದ್‌ ಅಧಿಕಾರ ಸ್ವೀಕಾರ

ಢಾಕಾ: ಪ್ರತಿಭಟನೆಗೆ ಬೆಚ್ಚಿ ನಿರ್ಗಮಿತ ಪ್ರಧಾನಿ ಶೇಖ್ ಹಸೀನಾ ಆಪ್ತರಾದ ಬಾಂಗ್ಲಾದೇಶ ಮುಖ್ಯ ನ್ಯಾಯಾಧೀಶ ನ್ಯಾ। ಒಬೈದುಲ್ ಹಸನ್ ರಾಜೀನಾಮೆ ಕೊಟ್ಟ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶರಾಗಿ ಸಯ್ಯದ್‌ ರೆಫಾತ್‌ ಅಹ್ಮದ್‌ ಅಧಿಕಾರ ಸ್ವೀಕರಿಸಿದ್ದಾರೆ.ತಾರತಮ್ಯ ವಿರೋಧಿ ವಿದ್ಯಾರ್ಥಿ ಸಂಘಟನೆಗಳ ಭಾರೀ ಪ್ರತಿಭಟನೆಯ ಬಳಿಕ ಹಸನ್‌ ಮತ್ತು ಐವರು ನ್ಯಾಯಮೂರ್ತಿಗಳು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದರು. ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ರೆಫಾತ್ ಆಯ್ಕೆಯಾಗಿದ್ದು, ಬಾಂಗ್ಲಾ ದೇಶದ 25ನೇ ಸಿಜೆ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ರೆಫಾತ್ ಅಹ್ಮದ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು. ಬಾಂಗ್ಲಾದ ಅಧ್ಯಕ್ಷ ಮೊಹಮ್ಮದ್‌ ಶಹಾಬುದ್ದೀನ್ ಪ್ರಮಾಣವಚನ ಬೋಧಿಸಿದರು.

ಬಾಂಗ್ಲನ್ನರ ನೆಪದ ಮುಸ್ಲಿಮರ ಮೇಲಿನ ದಾಳಿ ತಡೆಯಿರಿ: ಅಖಿಲೇಶ್‌

ಲಖನೌ: ಬಾಂಗ್ಲಾ ವಲಸಿಗರು ಎಂದು ಗಾಜಿಯಾಬಾದ್‌ನ ಕೆಲ ಭಾರತೀಯ ಮುಸ್ಲಿಮರ ಗುಡಿಸಲುಗಳನ್ನು ಹಿಂದೂ ಸಂಘಟನೆಗಳು ನಾಶಪಡಿಸಿದ ಬಗ್ಗೆ ಕೋರ್ಟು ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಬೇಕು ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಆಗ್ರಹಿಸಿದ್ದಾರೆ.ಟ್ವೀಟ್‌ ಮಾಡಿರುವ ಅವರು, ‘ಕಾನೂನನ್ನು ಕೈಗೆತ್ತಿಕೊಳ್ಳುವ ಹಕ್ಕು ಸ್ವತಃ ಸರ್ಕಾರಗಳಿಗೇ ಇಲ್ಲ. ಹೀಗಿರುವಾಗ ಅದರ ಬೆಂಗಲಿಗರಿಗೆ ಇಂತಹ ಕೃತ್ಯವೆಸಗಲು ಯಾವುದೇ ಹಕ್ಕಿಲ್ಲ. ಇಂತಹ ಪ್ರಕರಣಗಳು ರಾಜ್ಯದ ಹೆಸರು ಕೆಡಿಸುತ್ತಿದ್ದು, ಈ ಸಂಬಂಧ ಕೋರ್ಟ್‌ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಜೊತೆಗೆ ‘ಜಾಗ ಖಾಲಿ ಮಾಡಿಸುವ ಸಲುವಾಗಿ ಹೀಗೆ ಮಾಡಲಾಗುತ್ತಿದೆಯೇ?’ ಎಂದು ಪರೋಕ್ಷವಾಗಿ ಬಿಜೆಪಿಯ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.

ಮಾಜಿ ಕೇಂದ್ರ ಸಚಿವ ನಟವರ್‌ ಸಿಂಗ್‌ ನಿಧನ

ನವದೆಹಲಿ: ಮಾಜಿ ವಿದೇಶಾಂಗ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ನಟವರ್ ಸಿಂಗ್ (95) ಅವರುಶನಿವಾರ ತಡರಾತ್ರಿ ನಿಧನರಾದರು.ನಟವರ್ ಸಿಂಗ್ ಅವರು ದೀರ್ಘಕಾಲದಿಂದ ಅನಾರೋ ಗ್ಯದಿಂದ ಬಳಲುತ್ತಿದ್ದರು ಮತ್ತು ಗುರುಗ್ರಾಮದ

ಮೇದಾಂತ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದರು.

ರಾಜಸ್ಥಾನ ಮೂಲದವರಾದ ನಟವರ್‌ ಸಿಂಗ್‌ ಅವರು ವಿದೇಶಾಂಗ ಅಧಿಕಾರಿಯಾಗಿದ್ದರು. ಬಳಿಕ ಮನಮೋಹನ ಸಿಂಗ್‌ ಸರ್ಕಾರದಲ್ಲಿ ವಿದೇಶಾಂಗ ಮಂತ್ರಿ ಆಗಿದ್ದರು. ಆಹಾರಕ್ಕಾಗಿ ತೈಲ ಹಗರಣದಲ್ಲಿ ಹೆಸರು ಕೇಳಿಬಂದ ಕಾರಣ ರಾಜೀನಾಮೆ ನೀಡಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇಸ್ರೋ ಹೊಸ ಮೈಲುಗಲ್ಲು-6100 ಕೆಜಿ ತೂಕದ ಉಪಗ್ರಹ 15 ನಿಮಿಷದಲ್ಲಿ ಕಕ್ಷೆಗೆ
ಶತ್ರು- ಮಿತ್ರರಿಗೆ ಮಹಾ ಸಹೋದರರ ಸವಾಲ್‌!