ಕನ್ನಡಾಭಿಮಾನಕ್ಕೆ ಕರ್ನಾಟಕದ ಸಂಸ್ಕೃತಿಗಳ ಕನಿಷ್ಠ ಅರಿವಾದರೂ ಇರಲೇಬೇಕು. ಸಾಂಸ್ಕೃತಿಕ ಪ್ರಜ್ಞೆ ಇಲ್ಲದೆ ಕನ್ನಡ ಪ್ರಜ್ಞೆ ಬೆಳೆಯುವುದಿಲ್ಲ. ಇಂದು ಕನ್ನಡಾಭಿಮಾನವನ್ನು ಗಟ್ಟಿಗೊಳಿಸಲು ಮತ್ತು ಅರ್ಥಪೂರ್ಣವಾಗಿಸಲು ನಾಡಿನ ಸಂಸ್ಕೃತಿಯ ನೆಲೆಗಳನ್ನು ಅಂತರಂಗಕ್ಕೆ ತರುವ ಕೆಲಸವಾಗಬೇಕು ಎಂದು ತುಮಕೂರು ವಿಶ್ವವಿದ್ಯಾಲಯ ಪರಿಕ್ಷಾಂಗ ಕುಲಸಚಿವ ಡಾ. ಮೋಹನ್ ಎಚ್.ಎಸ್. ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ತುಮಕೂರು
ಕನ್ನಡಾಭಿಮಾನಕ್ಕೆ ಕರ್ನಾಟಕದ ಸಂಸ್ಕೃತಿಗಳ ಕನಿಷ್ಠ ಅರಿವಾದರೂ ಇರಲೇಬೇಕು. ಸಾಂಸ್ಕೃತಿಕ ಪ್ರಜ್ಞೆ ಇಲ್ಲದೆ ಕನ್ನಡ ಪ್ರಜ್ಞೆ ಬೆಳೆಯುವುದಿಲ್ಲ. ಇಂದು ಕನ್ನಡಾಭಿಮಾನವನ್ನು ಗಟ್ಟಿಗೊಳಿಸಲು ಮತ್ತು ಅರ್ಥಪೂರ್ಣವಾಗಿಸಲು ನಾಡಿನ ಸಂಸ್ಕೃತಿಯ ನೆಲೆಗಳನ್ನು ಅಂತರಂಗಕ್ಕೆ ತರುವ ಕೆಲಸವಾಗಬೇಕು ಎಂದು ತುಮಕೂರು ವಿಶ್ವವಿದ್ಯಾಲಯ ಪರಿಕ್ಷಾಂಗ ಕುಲಸಚಿವ ಡಾ. ಮೋಹನ್ ಎಚ್.ಎಸ್. ಅಭಿಪ್ರಾಯಪಟ್ಟರು.ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿ, ಆದಿಕವಿ ಪಂಪನಿಂದ ಆಧುನಿಕ ಕವಿ ಕುವೆಂಪುವರಿಗೆ ಸಹಸ್ರಾರುಜನ ಕನ್ನಡ ಪ್ರಜ್ಞೆ ಮತ್ತು ಸಂಸ್ಕೃತಿಯನ್ನು ಕಟ್ಟಿ ಬೆಳೆಸಿದ್ದಾರೆ. ಸಾವಿರಾರು ಸಾಹಿತ್ಯ ಕೃತಿಗಳು ರಚನೆಯಾಗಿವೆ. ಏಳು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಆದರೆ ಸ್ವಾತಂತ್ರೋತ್ಸವ ನಂತರದ ಕಾಲ ಘಟ್ಟದಲ್ಲಿ ಕೆಲಸ ಮಾಡಿದ ಕನ್ನಡ ಚಿಂತನಕರು ಮತ್ತು ಕನ್ನಡ ಚಳವಳಿಗಾರರನ್ನು ಇಂದು ನೆನೆಯಬೇಕು. ಅವರು ಮಾಡಿದ ಕೆಲಸವನ್ನು ನೆನೆಯುತ್ತಲೇ ಮುಂದಿನ ಸಂದರ್ಭಕ್ಕೆ ತಕ್ಕುದಾದ ದೂರಗಾಮಿನಿಯಾದ ಕನ್ನಡಾಭಿಮಾನದತ್ತ ಸಾಗಬೇಕು ಎಂದು ಹೇಳಿದರು. ಮುಖ್ಯಅತಿಥಿಯಾಗಿದ್ದ ಇತಿಹಾಸ ಸಂಶೋಧಕ ಡಾ. ಡಿ.ಎನ್ ಯೋಗೀಶ್ವರಪ್ಪ, ಕನ್ನಡ ಸಂಸ್ಕೃತದ ದಟ್ಟ ಪ್ರಭಾವಕ್ಕೆ ಒಳಗಾದ ಭಾಷೆ. ಅದನ್ನು ಅರಗಿಸಿಕೊಂಡು ದಟ್ಟವಾಗಿ ಬೆಳೆದುನಿಂತಿದೆ. ದೇಶವನ್ನಾಳಲು ಬಂದ ಆಕ್ರಮಣಕಾರರ ಭಾಷೆಯನ್ನು ಸಹ ತಿರಸ್ಕರಿಸದೆ ಅದನ್ನೂ ಅರಗಿಸಿಕೊಂಡು ಬೆಳೆದಿದ್ದು ಕನ್ನಡ ಭಾಷೆಯ ಬಹುದೊಡ್ಡ ಇತಿಹಾಸವಾಗಿದೆ. ಆದರೆ ಇಂದಿನ ಜಾಗತಿಕರಣ ಉದಾರೀಕರಣದ ಕಾಲಘಟ್ಟದಲ್ಲಿ ಇಂಗ್ಲಿಷ್ ಭಾಷೆ ಅಧಿಪತ್ಯಸಾದಿಸಿದ್ದು, ಅದು ಉದ್ಯೋಗ ಭಾಷೆಯಾಗಿ ಕನ್ನಡಿಗರ ಅವಕಾಶಗಳನ್ನು ಕಿತ್ತುಕೊಳ್ಳುತ್ತಿದೆ. ಈ ಸನ್ನಿವೇಶದಲ್ಲಿ ನಾವು ಕನ್ನಡವನ್ನು ಆಧುನಿಕ ಕಾಲಕ್ಕೆ ತಕ್ಕಂತೆ ಸಜ್ಜುಗೊಳಿಸಬೇಕಾಗಿದೆ ಎಂದು ಹೇಳಿದರು. ಕೇವಲ ಕಂಠದಲ್ಲಿಯೇ ಹುಟ್ಟಿ ಅಲ್ಲಿಯೇ ಅಂತ್ಯವಾಗುವ ಕೂಗಿನಿಂದ ಕನ್ನಡವನ್ನು ಬೆಳೆಸಲು ಸಾಧ್ಯವಿಲ್ಲ. ಒಂದು ಕಾಲಕ್ಕೆ ಇಂತಹ ಕೂಗು ಬೇಕಾಗಿತ್ತು, ಆದರೆ ಇಂದು ನಮಗೆ ಅಂತರಂಗ - ಬಹಿರಂಗಗಳೊಂದಾದ ಕನ್ನಡತನಬೇಕು. ಆಗ ನಾವು ಆಡುವ ಕನ್ನಡ ಪರ ಮಾತುಗಳಿಗೆ ಅರ್ಥ ಬರುತ್ತದೆ. ಅದು ಜೀವದನಿಯಾಗುತ್ತದೆ. ಆದ್ದರಿಂದ ಕನ್ನಡ ನಮ್ಮ ಕರುಳಿನ ಭಾಷೆ ಆಗಬೇಕೆ ಹೊರತು ಕೊರಳಿನ ಭಾಷೆಯಾಗಬಾರದು ಎಂದು ನುಡಿದರು.
ಪ್ರಾಂಶುಪಾಲರಾದ ಡಾ. ಜಿ.ಆರ್ ರೇವಣಸಿದ್ದಪ್ಪ ಮಾತನಾಡಿ ಕನ್ನಡಿಗರ ಹೋರಾಟದ ಫಲವಾಗಿ ಹರಿದು ಹಂಚಿ ಹೋಗಿದ್ದ ಕನ್ನಡ ಪ್ರದೇಶಗಳೆಲ್ಲವೂ ಏಕೀಕರಣವಾಗಿ ನಾವು ಇಂದು ಪ್ರತಿ ವರ್ಷವೂ ಹಬ್ಬವನ್ನು ಆಚರಿಸುತ್ತಿದ್ದೇವೆ. ಈ ಹಬ್ಬದ ಬಗ್ಗೆ ಎಲ್ಲರೂ ಹೆಚ್ಚು ಅಭಿಮಾನ ಇಟ್ಟುಕೊಳ್ಳಬೇಕು. ಆದರೆ ಇಂದು ನಮ್ಮ ಕನ್ನಡಿಗರು ಕೇವಲ ನವೆಮಬರ್ ತಿಂಗಳಿನಲ್ಲಿ ಅಭಿಮಾನವನ್ನು ತೋರಿಸುತ್ತಾರೆ. ಮರು ದಿನ ನಂತರ ಅದನ್ನು ಮರೆತು ಬಿಡುತ್ತಾರೆ ಎಂದು ವಿಷಾದಿಸಿದರು.
ಎನ್.ಎಸ್.ಎಸ್ ಅಧಿಕಾರಿ ಡಾ. ಚಂದ್ರಶೇಖರ್ ಕನ್ನಡ ಭಾಷಾಪ್ರಾಧ್ಯಾಪಕ ಡಾ. ಸೌಮ್ಯಶ್ರೀ.ಆರ್, ಡಾ. ಲಕ್ಷ್ಮೀನಾರಾಯಣ ಭಾವಚಿತ್ರ, ಇತರರು ಹಾಜರಿದ್ದರು.ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿನಿಯರು ಕನ್ನಡಪರ ಗೀತೆಯನ್ನು ಹಾಡಿದರು. ವೇದಿಕೆಯಲ್ಲಿ ಐಕ್ಯೂಎಸಿ ಸಂಚಾಲಕರಾದ ಎಚ್.ಜಿ ಸರ್ವಮಂಗಳ ಹಾಜರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ವೈ.ಎಂ ಪದ್ಮಜ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ರೇಖಾ ಎನ್ ವಂದಿಸಿದರು, ಶೀತಲ್ ನಿರೂಪಿಸಿದರು.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.