ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಮತ್ತೆ ದೆಹಲಿಗೆ ತೆರಳಲಿದ್ದು, ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಕಬ್ಬಿಗೆ ಬೆಂಬಲ ಬೆಲೆ, ಸಕ್ಕರೆಯ ಎಂಎಸ್‌ಪಿ ದರ ಹೆಚ್ಚಳ ಸೇರಿದಂತೆ ರೈತರ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಿದ್ದಾರೆ.
ಇದೇ ವೇಳೆ, ಜಿಎಸ್‌ಟಿಯಿಂದ ರಾಜ್ಯಕ್ಕೆ ಆಗುವ ಅನ್ಯಾಯ, ಕೇಂದ್ರದಿಂದ ಬಾಕಿ ಇರುವ ಅನುದಾನಗಳು, ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ 3ನೇ ಹಂತದ ನೀರಾವರಿ ಯೋಜನೆಗಳ ಬಗ್ಗೆಯೂ ರಾಜ್ಯದ ಪರ ಅಹವಾಲು ಸಲ್ಲಿಕೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚಿಸಲು ತುರ್ತಾಗಿ ಭೇಟಿಗೆ ಅವಕಾಶ ಕಲ್ಪಿಸುವಂತೆ ಸಿದ್ದರಾಮಯ್ಯ ಅವರು ನ.6ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಅವರಿಗೆ ಪತ್ರ ಬರೆದಿದ್ದರು. ಭೇಟಿಗೆ ಅವಕಾಶ ದೊರೆತಿರುವ ಹಿನ್ನೆಲೆಯಲ್ಲಿ ಶನಿವಾರ ಮಧ್ಯರಾತ್ರಿಯಷ್ಟೇ ದೆಹಲಿಯಿಂದ ವಾಪಸಾಗಿದ್ದ ಸಿದ್ದರಾಮಯ್ಯ ಸೋಮವಾರ ಬೆಳಗ್ಗೆ ಮತ್ತೆ ದೆಹಲಿಗೆ ತೆರಳುತ್ತಿದ್ದಾರೆ.
ಮಧ್ಯಾಹ್ನ 1.30 ಗಂಟೆಗೆ ದೆಹಲಿ ತಲುಪಲಿದ್ದು, ಸಂಜೆ 7 ಗಂಟೆಗೆ ಮರಳಲಿದ್ದಾರೆ. ಇದರ ನಡುವಿನ ನಿಗದಿತ ಅವಧಿಯಲ್ಲಿ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.
ಕೇಂದ್ರ ಸರ್ಕಾರವು ಶೇ.10.25 ರಷ್ಟು ರಿಕವರಿ ದರ (ಇಳುವರಿ) ಹೊಂದಿರುವ ಕಬ್ಬಿಗೆ ಕಟಾವು, ಸಾಗಣೆ ವೆಚ್ಚ ಸೇರಿಸಿ ಪ್ರತಿ ಟನ್‌ಗೆ 3,550 ರು. ನಿಗದಿ ಮಾಡಿದೆ. ಸಾಗಣೆ ಮತ್ತು ಕಟಾವು ವೆಚ್ಚ ಪ್ರತಿ ಟನ್‌ಗೆ 800 ರಿಂದ 900 ರು. ಹೋಗಿ ರೈತರಿಗೆ ಪ್ರತಿ ಟನ್‌ಗೆ 2,600 ರಿಂದ 3,000 ರು. ಮಾತ್ರ ಆಗಲಿದೆ. ಹೀಗಾಗಿ ಕಟಾವು, ಸಾಗಣೆ ವೆಚ್ಚ ಹೊರತುಪಡಿಸಿ ಪ್ರತಿ ಟನ್‌ಗೆ ಎಫ್‌ಆರ್‌ಪಿ 3,500 ರು. ನಿಗದಿ ಮಾಡುವಂತೆ ಒತ್ತಾಯಿಸಲಿದ್ದಾರೆ.
ಇದರ ಜತೆಗೆ ಕೇಂದ್ರ ಸರ್ಕಾರವು ಸಕ್ಕರೆ ರಫ್ತು ಹಿಂಪಡೆಯಬೇಕು. ರಾಜ್ಯದಲ್ಲಿ ಉತ್ಪಾದನೆಯಾಗುವ ಎಥನಾಲ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ತೈಲ ಕಂಪನಿಗಳು ಖರೀದಿಸುವಂತೆ ನಿರ್ದೇಶಿಸಬೇಕು.
ಸಕ್ಕರೆಗೆ ಪ್ರತಿ ಕೆಜಿಗೆ 2019ರಲ್ಲಿ ನಿಗದಿ ಮಾಡಿರುವ 31 ರು. ಎಂಎಸ್‌ಪಿ ದರ ಪರಿಷ್ಕರಣೆ ಮಾಡಬೇಕು ಎಂದು ಕೋರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಸ್ಟ್ ತಿಂಗಳಲ್ಲಿ ನಮ್ಮ ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ದೆಹಲಿಯ ಪ್ರಧಾನಮಂತ್ರಿಗಳ ಕಚೇರಿಯಲ್ಲಿ 2024ರ ನವೆಂಬರ್ ತಿಂಗಳಲ್ಲಿ ಭೇಟಿಯಾಗಿ ರಾಜ್ಯದ ಪರ ಅಹವಾಲುಗಳನ್ನು ಸಲ್ಲಿಸಿದ್ದರು.
-ಕಬ್ಬು ಬೆಂಬಲ ಬೆಲೆ ಹೆಚ್ಚಳ ಸೇರಿ ಹಲವು ಬೇಡಿಕೆ ಪಟ್ಟಿ ಮಂಡಿಸಲಿರುವ ಸಿದ್ದು
- ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡಾಗ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದ ಸಿಎಂ
- ಭೇಟಿಗೆ ಅವಕಾಶ ನೀಡುವಂತೆ ಮನವಿ. ಸೋಮವಾರ ಸಂಜೆ ಇಬ್ಬರ ಮಧ್ಯೆ ಮಾತುಕತೆ
- ಕಬ್ಬಿನ ಬೆಂಬಲ ಬೆಲೆ, ಸಕ್ಕರೆಯ ಎಂಎಸ್‌ಪಿ ದರ ಹೆಚ್ಚಳ ಕುರಿತು ಬೇಡಿಕೆ ಇಡುವ ಸಿಎಂ
- ಜಿಎಸ್‌ಟಿ, ಮೇಕೆದಾಟು, ಮಹದಾಯಿ, ಕೃಷ್ಣಾ 3ನೇ ಹಂತದ ಬಗ್ಗೆಯೂ ಚರ್ಚೆ ಸಂಭವ