ಬೆಂಗಳೂರು : ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ (ಭಾಗ್ಯನಗರ) ಕ್ಷೇತ್ರದಿಂದ ಕಾಂಗ್ರೆಸ್‌ನ ಎಸ್.ಎನ್.ಸುಬ್ಬಾರೆಡ್ಡಿ ಆಯ್ಕೆಯನ್ನು ಅಸಿಂಧುಗೊಳಿಸಿ ಹೈಕೋರ್ಟ್ ಸೋಮವಾರ ಮಹತ್ವದ ಆದೇಶ ನೀಡಿದೆ.
ಸುಬ್ಬಾರೆಡ್ಡಿ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಮತ್ತು ತಮ್ಮನ್ನು ವಿಜೇತ ಅಭ್ಯರ್ಥಿಯೆಂದು ಘೋಷಿಸುವಂತೆ ಕೋರಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಸಿ.ಮುನಿರಾಜು ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ಪೀಠ ಈ ಆದೇಶ ನೀಡಿದೆ. ಚುನಾವಣಾ ಆಯೋಗ ಮತ್ತು ವಿಧಾನಸಭೆ ಕಾರ್ಯದರ್ಶಿಗೆ ರವಾನಿಸಲು ನ್ಯಾಯಪೀಠ ರಿಜಿಸ್ಟ್ರಾರ್‌ಗೆ ಸೂಚನೆ ನೀಡಿದೆ. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಇದೇ ವೇಳೆ ಮುನಿರಾಜು ಅವರನ್ನು ವಿಜೇತ ಅಭ್ಯರ್ಥಿಯಾಗಿ ಘೋಷಣೆ ಮಾಡಲು ನ್ಯಾಯಪೀಠ ನಿರಾಕರಿಸಿದೆ. ಮತ್ತೊಂದೆಡೆ ಆದೇಶ ಪ್ರಕಟವಾಗುತ್ತಿದ್ದ ಬೆನ್ನಲ್ಲೇ ಸುಬ್ಬಾರೆಡ್ಡಿ ಪರ ವಕೀಲರು, ನ್ಯಾಯಾಲಯದ ಈ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು. ಅಲ್ಲಿಯವರೆಗೆ ಈ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು. ಈ ಮನವಿಗೆ ಅರ್ಜಿದಾರರ ಪರ ವಕೀಲರು ಆಕ್ಷೇಪಿಸಿದರು. ಈ ಕುರಿತು ವಾದ-ಪ್ರತಿಪಾದ ಆಲಿಸಿದ ನ್ಯಾಯಪೀಠ, ತನ್ನ ಆದೇಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತು.
2023ರ ಮೇ 10ರಂದು ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಚುನಾವಣೆ ನಡೆದು ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟಗೊಂಡಿತ್ತು. ಬಾಗೇಪಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್.ಎನ್.ಸುಬ್ಬಾರೆಡ್ಡಿ ಅವರು 82,128 ಮತ ಪಡೆದು ಜಯಗಳಿಸಿದ್ದರು. ಸಮೀಪದ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ಅಭ್ಯರ್ಥಿ ಸಿ.ಮುನಿರಾಜು ಅವರು 62,949 ಮತ ಪಡೆದಿದ್ದರು. ಸುಬ್ಬಾರೆಡ್ಡಿ ಅವರ ಎದುರು ಮುನಿರಾಜು 19,179 ಮತಗಳ ಅಂತರದಿಂದ ಸೋಲನುಭವಿಸಿದ್ದರು.
ಇದರಿಂದ ಸುಬ್ಬಾರೆಡ್ಡಿಯ ಆಯ್ಕೆ ಪ್ರಶ್ನಿಸಿ ಸಿ.ಮುನಿರಾಜು ಅವರು 2023ರ ಜೂ.24ರಂದು ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಸುಬ್ಬಾರೆಡ್ಡಿ ಅವರು ನಾಮಪತ್ರದೊಂದಿಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತಮ್ಮ ಆಸ್ತಿ, ಹೊಣೆಗಾರಿಕೆ, ಹೂಡಿಕೆ ಸೇರಿ ಹಲವು ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಅನೇಕ ಸಂಗತಿಗಳನ್ನು ಮುಚ್ಚಿಟ್ಟು, ಅಪೂರ್ಣ ಮಾಹಿತಿ ಹಾಗೂ ತಪ್ಪು ಮಾಹಿತಿ ನೀಡಿದ್ದಾರೆ. ಇದು ಚುನಾವಣಾ ಅಕ್ರಮದ ವ್ಯಾಪ್ತಿಗೆ ಬರಲಿದೆ. ಆದ್ದರಿಂದ ಸುಬ್ಬಾರೆಡ್ಡಿ ಆಯ್ಕೆ ರದ್ದುಮಾಡಬೇಕು. ಎರಡನೇ ಅತಿ ಹೆಚ್ಚು ಮತ ಗಳಿಸಿರುವ ತಮ್ಮನ್ನು ವಿಜೇತ ಅಭ್ಯರ್ಥಿಯಾಗಿ ಘೋಷಣೆ ಮಾಡಬೇಕು ಎಂದು ಮುನಿರಾಜು ಕೋರಿದ್ದರು. ಈ ಮನವಿಗೆ ಆಕ್ಷೇಪಣೆ ಸಲ್ಲಿಸಿದ್ದ ಸುಬ್ಬಾರಡ್ಡಿ ಅವರು, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.
ಇದೀಗ ಹೈಕೋರ್ಟ್ ಮುನಿರಾಜು ಅವರ ಈ ಅರ್ಜಿಯನ್ನು ಭಾಗಶಃ ಪುರಸ್ಕರಿಸಿ, ಸುಬ್ಬಾರೆಡ್ಡಿ ಅವರ ಆಯ್ಕೆ ಅಸಿಂಧುಗೊಳಿಸಿದೆ. ಆದರೆ, ಮುನಿರಾಜು ಅವರನ್ನು ವಿಜೇತ ಅಭ್ಯರ್ಥಿಯಾಗಿ ಘೋಷಿಸಲು ನಿರಾಕರಿಸಿದೆ.
ಬಾಗೇಪಲ್ಲಿ ಕ್ಷೇತ್ರದಿಂದ 2013ರಲ್ಲಿ ಮೊದಲ ಬಾರಿ ಪಕ್ಷೇತರರಾಗಿ ಗೆದ್ದಿದ್ದ ಸುಬ್ಬಾರೆಡ್ಡಿ ಅವರು, ನಂತರ ಎರಡು ಬಾರಿ ಕಾಂಗ್ರೆಸ್‌ನಿಂದ ಹೀಗೆ ಸತತ ಮೂರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
- ಚುನಾವಣಾ ಆಯೋಗಕ್ಕೆ ಆಸ್ತಿವಿವರ ಬಗ್ಗೆ ತಪ್ಪು ಮಾಹಿತಿ
- ಈ ಕುರಿತು ದಾವೆ ಹೂಡಿದ್ದ ಬಿಜೆಪಿ ಅಭ್ಯರ್ಥಿ ಮುನಿರಾಜು
- ಮುನಿರಾಜು ಅರ್ಜಿ ಭಾಗಶಃ ಮಾನ್ಯ, ರೆಡ್ಡಿ ಆಯ್ಕೆ ಅಸಿಂಧು
- ಆದ್ರೆ ಮುನಿರಾಜು ವಿಜೇತನೆಂದು ಘೋಷಿಸದ ಹೈಕೋರ್ಟ್
- ಕ್ಷೇತ್ರ ಈಗ ಖಾಲಿ. ಚುನಾವಣಾ ಆಯೋಗ ಅಂಗಳದಲ್ಲಿ ಚೆಂಡು
- ರೆಡ್ಡಿ ಮೇಲ್ಮನವಿ ಅರ್ಜಿ ಸಂಭವ. ಅಲ್ಲಿ ತಡೆ ಸಿಕ್ಕರಷ್ಟೇ ಬಚಾವ್
ಮೇಲ್ಮನವಿ ಸಲ್ಲಿಸುವೆ
ಹೈಕೋರ್ಟ್ ದ್ವಿಸದಸ್ಯ ಪೀಠ ಅಥವಾ ಸುಪ್ರೀಂಕೋರ್ಟ್ ಮೊರೆ ಹೋಗಿ ನ್ಯಾಯ ಪಡೆಯುತ್ತೇನೆ. ಈ ಕುರಿತು ವಕೀಲರೊಂದಿಗೆ ಸಮಾಲೋಚನೆ ಮಾಡುತ್ತಿದ್ದೇನೆ.- ಸುಬ್ಬಾರೆಡ್ಡಿ, ಬಾಗೇಪಲ್ಲಿ ಶಾಸಕ--ಸತ್ಯಕ್ಕೆ ಸಂದ ಜಯಸತ್ಯಕ್ಕೆ, ನ್ಯಾಯಕ್ಕೆ ಜಯವಿದೆ ಎಂಬುದನ್ನು ಹೈಕೋರ್ಟ್ ತೀರ್ಪು ಸಾಬೀತುಪಡಿಸಿದೆ. ಹೈಕೋರ್ಟ್ ದ್ವಿಸದಸ್ಯ ಪೀಠ ಅಥವಾ ಸುಪ್ರೀಂಕೋರ್ಟ್‌ಗೆ ಹೋದರೂ ಸಹ ನಾನು ನ್ಯಾಯ ಪಡೆವೆ.
- ಮುನಿರಾಜು, ಪರಾಜಿತ ಬಿಜೆಪಿ ಅಭ್ಯರ್ಥಿ