ನವದೆಹಲಿ: ಭಾರತದ ಮೊದಲ ಪ್ರಾದೇಶಿಕ ಕ್ಷಿಪ್ರ ಸಾರಿಗೆ ಜಾಲವಾದ ನಮೋ ಭಾರತ್ ವಿಸ್ತರಣೆಗೆ ಕರ್ನಾಟಕ ಸೇರಿ ಹಲವು ರಾಜ್ಯಗಳು ತೀವ್ರ ಆಸಕ್ತಿ ತೋರಿಸಿವೆ. ಹೊಸ ಸೆಮಿ ಹೈಸ್ಪೀಡ್ ನಮೋ ಭಾರತ್ ಕಾರಿಡಾರ್‌ಗಳ ಕುರಿತು ವಿಸ್ತೃತ ಅಧ್ಯಯನ ನಡೆಸುವಂತೆ ರಾಷ್ಟ್ರೀಯ ರಾಜಧಾನಿ ಪ್ರಾದೇಶಿಕ ಸಾರಿಗೆ ಕಾರ್ಪೊರೇಷನ್(ಎನ್‌ಸಿಆರ್‌ಟಿಸಿ)ಗೆ ಮನವಿ ಮಾಡಿವೆ.
ರಾಜ್ಯಾದ್ಯಂತ ಹಾಗೂ ತಮಿಳುನಾಡಿನ ಗಡಿಭಾಗದ ನಗರಗಳ ಜತೆಗೆ ಪ್ರಾದೇಶಿಕ ಸಾರಿಗೆ ಸಂಪರ್ಕವನ್ನು ಬಲಪಡಿಸುವ ಉದ್ದೇಶದಿಂದ ಬೆಂಗಳೂರಿನಿಂದ ನಾಲ್ಕು ಸೆಮಿ ಹೈಸ್ಪೀಡ್ ನಮೋ ಭಾರತ್ ಕಾರಿಡಾರ್‌ಗಳನ್ನು ನಿರ್ಮಾಣ ಸಂಬಂಧ ಅಧ್ಯಯನಕ್ಕೆ ಕರ್ನಾಟಕ ಸರ್ಕಾರವು ಎನ್‌ಸಿಆರ್‌ಟಿಸಿಗೆ ಮನವಿ ಮಾಡಿದೆ.
ಬೆಂಗಳೂರು - ಹೊಸಕೋಟೆ - ಕೋಲಾರ(65 ಕಿ.ಮೀ.), ಬೆಂಗಳೂರು - ಮೈಸೂರು(145 ಕಿ.ಮೀ.), ಬೆಂಗಳೂರು - ತುಮಕೂರು(60 ಕಿ.ಮೀ.) ಮತ್ತು ಬೆಂಗಳೂರು - ಹೊಸೂರು - ಕೃಷ್ಣಗಿರಿ - ಧರ್ಮಪುರಿ(138 ಕಿ.ಮೀ.) ನಡುವೆ ಈ ಕಾರಿಡಾರ್ ನಿರ್ಮಿಸಲು ಉದ್ದೇಶಿಸಲಾಗಿದೆ.
ಲಖನೌ ಮತ್ತು ಕಾನ್ಪುರದ ನಡುವಿನ ಕಾರಿಡಾರ್ ಕುರಿತು ಎನ್‌ಸಿಆರ್‌ಟಿಸಿ ಸಿದ್ಧಪಡಿಸಿದ ಡಿಪಿಆರ್‌ಗೆ ಈಗಾಗಲೇ ಉತ್ತರಪ್ರದೇಶ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರಿಡಾರ್‌ನಿಂದಾಗಿ ಎರಡೂ ನಗರಗಳ ನಡುವಿನ ಸಂಚಾರದ ಅವಧಿ ಹಾಲಿ ಇರುವ 90 ನಿಮಿಷದಿಂದ 50 ನಿಮಿಷಕ್ಕೆ ಇಳಿಕೆಯಾಗಲಿದೆ ಎಂದು ಹೇಳಲಾಗಿದೆ.
ಏನಿದು ನಮೋ ಭಾರತ್ ರೈಲು
ಇಂದು ಮೆಟ್ರೋ ರೀತಿಯದ್ದೇ ಸೆಮಿ ಹೈಸ್ಪೀಡ್ ರೈಲು ಸೇವೆ. ಪ್ರಮುಖ ನಗರಗಳ ಸಂಪರ್ಕ ಇದರ ಉದ್ದೇಶ. ಗರಿಷ್ಠ ವೇಗ 180 ಕಿ.ಮೀ. ಪೂರ್ಣ ಎಲೆಕ್ಟ್ರಿಕ್. ಅತ್ಯಾಧುನಿಕ ವಿನ್ಯಾಸ. ಸಿಸಿಟೀವಿ, ಡಿಕ್ಕಿ ತಡೆಯುವ ವ್ಯವಸ್ಥೆ, ಸ್ವಯಂಚಾಲಿತ ಬಾಗಿಲು, ಹವಾನಿಯಂತ್ರಿತ, ಅಗ್ನಿಪತ್ತೆ ವ್ಯವಸ್ಥೆ, ಆರಾಮದಾಯಕ ಆಸನ, ಮೊಬೈಲ್ ಚಾರ್ಜಿಂಗ್, ಸ್ವಯಂಚಾಲಿತ ನಿರ್ವಹಣೆ ಇದರ ಹೆಗ್ಗಳಿಕೆ. ಫ್ರಾನ್ಸ್ ಮೂಲದ ಆ್ಯಸ್ಟನ್ ಕಂಪನಿ ಇದರ ವಿನ್ಯಾಸ ಮಾಡಿದೆ. ಪ್ರತಿ ಬೋಗಿಯಲ್ಲಿ 100 ಜನ ಕೂರಬಹುದು, 200 ಜನರು ನಿಲ್ಲಬಹುದು. ಮೊದಲ ರೈಲು ದೆಹಲಿ ಮತ್ತು ಮೇರಠ್ ನಡುವೆ 2023ರಲ್ಲಿ ಸಂಚಾರ ಆರಂಭಿಸಿದೆ
ಯಾವ್ಯಾವ ಮಾರ್ಗ
1. ಬೆಂಗಳೂರು - ಹೊಸಕೋಟೆ - ಕೋಲಾರ (65 ಕಿ.ಮೀ.)
2. ಬೆಂಗಳೂರು - ಮೈಸೂರು (145 ಕಿ.ಮೀ.)
3. ಬೆಂಗಳೂರು - ತುಮಕೂರು (60 ಕಿ.ಮೀ.)
4. ಬೆಂಗಳೂರು - ಹೊಸೂರು - ಕೃಷ್ಣಗಿರಿ - ಧರ್ಮಪುರಿ (138 ಕಿ.ಮೀ.)