ಪಿಟಿಐ ಹೈದರಾಬಾದ್
ಕದ್ದಾಲಿಕೆ ಹಗರಣದಲ್ಲಿ ಬಂಧಿತರಾಗಿರುವ ರಾವ್ ತಪ್ಪೊಪ್ಪಿಗೆ ಹೇಳಿಕೆ ನೀಡಿ, ಕೆಸಿಆರ್ ಅವರನ್ನು ‘ಪೆದ್ದಾಯಣ’ (ಹಿರಿಯಣ್ಣ/ ಬಿಗ್ ಬಾಸ್) ಎಂದು ಉಲ್ಲೇಖಿಸಿದ್ದಾರೆ. ‘ಪೆದ್ದಾಯಣ (ಕೆಸಿಆರ್) ಅವರು ಸಿಎಂ ಆಗಿದ್ದಾಗ, ಅವರ ಬಿಆರ್‌ಎಸ್ ಶಾಸಕರ ಖರೀದಿಗೆ ಬಿಜೆಪಿ ಯತ್ನಿಸುತ್ತಿದೆ ಎಂದು ಎಸ್‌ಐಟಿ ಪ್ರಕರಣ ದಾಖಲಿಸಿತ್ತು. ಖರೀದಿಯು ಬಿಜೆಪಿ ರಾಷ್ಟ್ರೀಯ ಮುಖಂಡ ಬಿ.ಎಲ್. ಸಂತೋಷ್ ಅಣತಿಯ ಮೇಲೆ ನಡೆದಿತ್ತು ಎಂಬ ಆರೋಪ ಕೇಳಿಬಂದಿತ್ತು. ಇದೇ ವೇಳೆ ಕೆಸಿಆರ್ ಪುತ್ರಿ ಕೆ. ಕವಿತಾ ಅವರ ಮೇಲೆ ಇ.ಡಿ. ಅಕ್ರಮ ಹಣ ವರ್ಗಾವಣೆ ಆರೋಪ ಹೊರಿಸಿತ್ತು. ಈ ಸಂದರ್ಭವನ್ನು ಬಳಸಿಕೊಂಡ ಕೆಸಿಆರ್, ‘ಸಂತೋಷ್ ಅವರನ್ನು ಬಂಧಿಸಬೇಕು. ಅವರನ್ನು ಬಂಧಿಸಿದರೆ ಬಿಜೆಪಿ ರಾಷ್ಟ್ರೀಯ ನಾಯಕತ್ವವು ತಮ್ಮೆದುರು ಮಂಡಿಯೂರಿ, ‘ಕೇಸಿನಿಂದ ಸಂತೋಷ್‌ರನ್ನು ಬಿಡುಗಡೆ ಮಾಡಿ’ ಎಂದು ರಾಜಿ ಸಂಧಾನಕ್ಕೆ ಬರಲಿದೆ’ ಎಂದು ಭಾವಿಸಿದ್ದರು. ಹಾಗೆ ಸಂಧಾನಕ್ಕೆ ಬಂದಾಗ, ‘ಕವಿತಾ ಮೇಲಿನ ಕೇಸು ಬಿಡಿ. ನಾವೂ ಸಂತೋಷ್ ಮೇಲಿನ ಪ್ರಕರಣ ಕೈಬಿಡುತ್ತೇವೆ’ ಎಂದು ಹೇಳಲು ಕೆಸಿಆರ್ ಇಚ್ಛಿಸಿದ್ದರು’ ಎಂದು ರಾಧಾಕೃಷ್ಣ ರಾವ್ ಹೇಳಿದ್ದಾರೆ.
‘ಆದರೆ ಶಾಸಕರ ಖರೀದಿ ಹಗರಣದ ತನಿಖೆಯಲ್ಲಿ ಕೆಲವು ಪೊಲೀಸರು ಲೋಪ ಎಸಗಿದರು. ಒಬ್ಬ ಮಹತ್ವದ ವ್ಯಕ್ತಿ ಪೊಲೀಸರ ಕೈಗೆ ಸಿಗದೇ ಪರಾರಿಯಾದ. ಹೀಗಾಗಿ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತು. ಯಾರನ್ನೂ ಬಂಧಿಸಬೇಡಿ ಎಂದು ಹೈಕೋರ್ಟ್ ಆದೇಶಿಸಿತು. ತೆಲಂಗಾಣ ಎಸ್‌ಐಟಿ ನಡೆಸುತ್ತಿದ್ದ ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಬೇಕು ಎಂದು ಹೈಕೋರ್ಟ್ ಆದೇಶಿಸಿತು. ಆಗ ಕೆಸಿಆರ್ ಲೆಕ್ಕಾಚಾರ ಎಲ್ಲ ಉಲ್ಟಾ ಆಯಿತು. ಆಗ ಸಿಟ್ಟಿನಿಂದ ನಮ್ಮ ಮೇಲೆ ಕೆಸಿಆರ್ ಕೂಗಾಡಿದರು’ ಎಂದು ರಾಧಾಕೃಷ್ಣ ಹೇಳಿದ್ದಾರೆ.‘2020ರಲ್ಲಿ ನಿವೃತ್ತಿ ನಂತರವೂ ಕೆಸಿಆರ್ ನನ್ನ ಸೇವೆ ವಿಸ್ತರಣೆ ಮಾಡಿ ಹೈದರಾಬಾದ್ ಪೊಲೀಸ್‌ನ 2 ಮಹತ್ವದ ಹುದ್ದೆಗಳಿಗೆ ನನ್ನನ್ನು ನಿಯೋಜಿಸಿದ್ದರು. ಅವರ ಮೇಲಿನ ಋಣದಿಂದ ಇಷ್ಟು ದಿನ ಈ ವಿವರಗಳನ್ನು ಬಹಿರಂಗಪಡಿಸದೇ ಸುಮ್ಮನಿದ್ದೆ’ ಎಂದೂ ರಾಧಾಕೃಷ್ಣ ರಾವ್ ಹೇಳಿದ್ದಾರೆ.