ರಾಷ್ಟ್ರಪತಿಗಳ ವಿರುದ್ಧವೇ ಸುಪ್ರೀಂನಲ್ಲಿ ಕೇರಳ ದಾವೆ

KannadaprabhaNewsNetwork |  
Published : Mar 24, 2024, 01:32 AM ISTUpdated : Mar 24, 2024, 08:03 AM IST
ಕೇರಳ ವಿಧಾನಸಭೆ | Kannada Prabha

ಸಾರಾಂಶ

ಅಸಾಮಾನ್ಯ ಕ್ರಮವೊಂದರಲ್ಲಿ ಕೇರಳ ಸರ್ಕಾರವು, ‘ರಾಜ್ಯದ ವಿಧಾನಸಭೆ ಅಂಗೀಕರಿಸಿದ 4 ವಿಧೇಯಕಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಒಪ್ಪಿಗೆ ನೀಡದೇ ತಡೆಹಿಡಿದಿದ್ದಾರೆ’ ಎಂದು ಆರೋಪಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಪಿಟಿಐ ನವದೆಹಲಿ

ಅಸಾಮಾನ್ಯ ಕ್ರಮವೊಂದರಲ್ಲಿ ಕೇರಳ ಸರ್ಕಾರವು, ‘ರಾಜ್ಯದ ವಿಧಾನಸಭೆ ಅಂಗೀಕರಿಸಿದ 4 ವಿಧೇಯಕಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಒಪ್ಪಿಗೆ ನೀಡದೇ ತಡೆಹಿಡಿದಿದ್ದಾರೆ’ ಎಂದು ಆರೋಪಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಈ ಮೂರೂ ಸಂವಿಧಾನದ ಅಂಗಗಳಿಗೆ ಮುಖ್ಯಸ್ಥರಾಗಿರುವ ರಾಷ್ಟ್ರಪತಿಗಳ ವಿರುದ್ಧವೇ ಕೇರಳ ಸರ್ಕಾರ ಸುಪ್ರೀಂಕೋರ್ಟ್‌ಗೆ ಹೋಗಿರುವುದು ದೇಶದ ಇತಿಹಾಸದಲ್ಲಿ ಅತ್ಯಂತ ಅಪರೂಪದ ಹೋರಾಟ ಎನ್ನಿಸಿಕೊಳ್ಳುವ ಸಾಧ್ಯತೆಯಿದೆ.

ವಿಶ್ವವಿದ್ಯಾಲಯ ಕಾನೂನುಗಳು (ತಿದ್ದುಪಡಿ) ಮಸೂದೆ- 2021, ಕೇರಳ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ- 2022, ವಿಶ್ವವಿದ್ಯಾಲಯ ಕಾನೂನುಗಳು (ತಿದ್ದುಪಡಿ) ಮಸೂದೆ-2022 ಮತ್ತು ವಿಶ್ವವಿದ್ಯಾನಿಲಯ ಕಾನೂನುಗಳು (ತಿದ್ದುಪಡಿ) ಮಸೂದೆ-2022- ಇವುಗಳನ್ನು ಯಾವುದೇ ಕಾರಣವಿಲ್ಲದೇ ರಾಷ್ಟ್ರಪತಿ ತಡೆ ಹಿಡಿದಿದ್ದಾರೆ. ಇದು ಅಸಂವಿಧಾನಿಕ ಎಂದು ಕೇರಳ ಸರ್ಕಾರ ಹೇಳಿದೆ. 

ಇದಲ್ಲದೆ, ರಾಷ್ಟ್ರಪತಿಗಳ ಒಪ್ಪಿಗೆ ಬಾಕಿ ಇರುವ 4 ವಿಧೇಯಕ ಸೇರಿ 7 ಮಸೂದೆಗಳನ್ನು ರಾಜ್ಯಪಾಲರು ಅನಿರ್ದಿಷ್ಟ ಅವಧಿಗೆ ಬಾಕಿ ಇರಿಸಿಕೊಂಡಿದ್ದನ್ನು ಕಾನೂನುಬಾಹಿರ ಎಂದು ಪರಿಗಣಿಸುವಂತೆಯೂ ಅರ್ಜಿಯಲ್ಲಿ ಸರ್ಕಾರ ಕೋರಿದೆ. 

ಅಲ್ಲದೆ ಎಲ್ಲಾ 7 ಮಸೂದೆಗಳು ಕೇವಲ ಕೇರಳಕ್ಕೆ ಸಂಬಂಧಿಸಿದವು. ಇದರಲ್ಲಿ ಕೇಂದ್ರ ಮತ್ತು ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳು ಕೂಡಾ ಇಲ್ಲ. 

ಈ ಎಲ್ಲಾ ಮಸೂದೆಗಳನ್ನು ಸ್ವತಃ ರಾಜ್ಯಪಾಲರೇ ನಿರ್ವಹಿಸಬಹುದಾಗಿತ್ತಾದರೂ ಅವುಗಳ ಪೈಕಿ 4 ಮಸೂದೆಗಳನ್ನು ರಾಷ್ಟ್ರಪತಿಗಳಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ವಕೀಲ ಸಿ.ಕೆ.ಶಶಿ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಆರೋಪಿಸಲಾಗಿದೆ.

ಅರ್ಜಿಯಲ್ಲಿ ಸಿಪಿಎಂ ನೇತೃತ್ವದ ಎಡರಂಗ ಸರ್ಕಾರವು, ಪ್ರಕರಣದಲ್ಲಿ ಕೇಂದ್ರ ಸರ್ಕಾರ, ಭಾರತದ ರಾಷ್ಟ್ರಪತಿಗಳ ಕಾರ್ಯದರ್ಶಿ, ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಅವರ ಹೆಚ್ಚುವರಿ ಕಾರ್ಯದರ್ಶಿಯನ್ನು ಪಕ್ಷಗಾರರನ್ನಾಗಿ ಮಾಡಿದೆ.

ಈ ಹಿಂದೆಯೂ, ವಿಧಾನಸಭೆಯಿಂದ ಅಂಗೀಕರಿಸಲ್ಪಟ್ಟ ಹಲವಾರು ಮಸೂದೆಗಳಿಗೆ ರಾಜ್ಯಪಾಲರು ಒಪ್ಪಿಗೆ ನೀಡಿಲ್ಲ ಎಂದು ಆರೋಪಿಸಿ ಕೇರಳ ಸರ್ಕಾರವು ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿತ್ತು. 

ಆಗ ರಾಜ್ಯಪಾಲರ ಧೋರಣೆಗೆ ಸುಪ್ರೀಂಕೋರ್ಟ್‌ ಕಿಡಿಕಾರಿತ್ತು.ಜೊತೆಗೆ ಬಾಹ್ಯಸಾಲ ಪಡೆಯಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸುತ್ತಿದೆ ಎಂದು ಇತ್ತೀಚೆಗೆ ಕೇರಳ ಸರ್ಕಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. 

ಈ ವೇಳೆ ಉಭಯ ಸರ್ಕಾರಗಳು ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿತ್ತು. ಈ ವಿಷಯವೂ ಉಭಯ ಸರ್ಕಾರಗಳ ನಡುವೆ ಭಾರೀ ಜಟಾಪಟಿಗೆ ಕಾರಣವಾಗಿತ್ತು.

ಇನ್ನು ತಮಿಳುನಾಡಿನ ರಾಜ್ಯಪಾಲರು, ಸರ್ಕಾರ ಶಿಫಾರಸು ಮಾಡಿದ ವ್ಯಕ್ತಿಗಳನ್ನು ಸಚಿವರಾಗಿ ನಿಯೋಜಿಸಲು ರಾಜ್ಯಪಾಲ ಎನ್‌.ರವಿ.ನಿರಾಕರಿಸುತ್ತಿದ್ದಾರೆ ಎಂದು ಇತ್ತೀಚೆಗಷ್ಟೇ ತಮಿಳುನಾಡು ಸರ್ಕಾರ ಕೂಡಾ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. 

ಈ ವಿಷಯದಲ್ಲಿ ಸುಪ್ರೀಂಕೋರ್ಟ್‌ ಎಚ್ಚರಿಕೆ ಬಳಿಕ ಶುಕ್ರವಾರವಷ್ಟೇ ನೂತನ ಸಚಿವರಾಗಿ ಪೊನ್ಮುಡಿ ಅವರನ್ನು ರಾಜ್ಯಪಾಲ ಎನ್‌.ರವಿ ನೇಮಿಸಿದ್ದರು.

ಏನಿದು ವಿವಾದ?

  • ಕೇರಳದ ವಿಧಾನಸಭೆಯಲ್ಲಿ ಅಂಗೀಕಾರವಾದ 4 ಮಸೂದೆಗಳಿಗೆ ರಾಷ್ಟ್ರಪತಿ ತಡೆ
  • ವಿವಿಗಳಿಗೆ ಸಂಬಂಧಿಸಿದ 3 ಮಸೂದೆ, ಸಹಕಾರ ಸಂಘಗಳ ಮಸೂದೆಗೆ ಸಹಿ ಹಾಕದ ರಾಷ್ಟ್ರಪತಿ ದ್ರೌಪದಿ ಮುರ್ಮು
  • ಇನ್ನೂ 3 ಮಸೂದೆಗಳಿಗೆ ಸಹಿ ಹಾಕದೆ ಕೇರಳದ ರಾಜ್ಯಪಾಲರಿಂದ ಅನಿರ್ದಿಷ್ಟ ತಡೆ
  • ಕೇರಳಕ್ಕೆ ಮಾತ್ರ ಸಂಬಂಧಿಸಿದ, ಕೇಂದ್ರ ಪಟ್ಟಿಯಲ್ಲಿ ಇಲ್ಲದ ವಿಷಯದ ಮಸೂದೆಗಳಿವು
  • ಇವುಗಳನ್ನು ಅನಿರ್ದಿಷ್ಟಾವಧಿಗೆ ತಡೆಯುವುದು ಸಂವಿಧಾನಬಾಹಿರ ಎಂದು ಕೇರಳ ವಾದ
  • ಅರ್ಜಿಯಲ್ಲಿ ಕೇಂದ್ರ ಸರ್ಕಾರ, ರಾಷ್ಟ್ರಪತಿಗಳ ಕಾರ್ಯದರ್ಶಿ, ರಾಜ್ಯಪಾಲರನ್ನು ಪಕ್ಷಗಾರರನ್ನಾಗಿ ಮಾಡಿದ ಕೇರಳ
  • ಈ ಹಿಂದೆಯೂ ರಾಜ್ಯಪಾಲರ ವಿರುದ್ಧ ಸುಪ್ರಿಂಕೋರ್ಟ್‌ಗೆ ಹೋಗಿದ್ದ ಕೇರಳ ಸರ್ಕಾರ
  • ಆಗ ರಾಜ್ಯಪಾಲರನ್ನು ತರಾಟೆ ತೆಗೆದುಕೊಂಡು ಮಸೂದೆಗೆ ಸಹಿ ಹಾಕಲು ಸೂಚಿಸಿದ್ದ ಸುಪ್ರೀಂಕೋರ್ಟ್‌

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ತನ್ನದೇ ಸೈನಿಕರ ಸಾಯಲು ಬಿಟ್ಟ ದ್ರೋಹಿ ಪಾಕಿಸ್ತಾನ!
ಶಾಲೇಲಿ ಬ್ಲೇಡಿಂದ ಒಂದೇ ರೀತಿ ಕೈ ಕೊಯ್ದುಕೊಂಡ 35 ಮಕ್ಕಳು!