;Resize=(412,232))
ಕಾಸರಗೋಡು : ಪಾಲಕ್ಕಾಡ್ ರೈಲ್ವೆ ವಿಭಾಗವನ್ನು ವಿಭಜಿಸಿ, ಮಂಗಳೂರು ಸೇರಿದಂತೆ ಕೆಲ ರೈಲು ನಿಲ್ದಾಣಗಳನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಕೇರಳದ ಸಂಸದರು ಓಣಂ ಹಬ್ಬದ ದಿನದಂದು (ಆ.26ರಂದು) ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.
ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿಥಾನ್ ಮತ್ತು ಪಾಲಕ್ಕಾಡ್ ಸಂಸದ ವಿ.ಕೆ. ಶ್ರೀಕಂಠನ್ ಈ ಕುರಿತು ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
‘ಓಣಂ ಹಬ್ಬವು ಕೇರಳದ ಜನರಿಗೆ ವಿಶೇಷ. ಅಂದು ತಮ್ಮ ಆಸ್ತಿ ಮಾರಿಯಾದರೂ ಓಣಂ ಹಬ್ಬ ಆಚರಿಸಿ ಭೋಜನ ಸವಿಯಬೇಕು ಎಂಬುದು ಸಂಪ್ರದಾಯ. ಆದರೆ ಆ ದಿನದಂದು ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಪಾಲಕ್ಕಾಡ್ ರೈಲ್ವೆ ವಿಭಾಗೀಯ ವಾಣಿಜ್ಯ ಸೂಪರಿಂಟೆಂಡೆಂಟ್ ಕಚೇರಿಯ ಮುಂಭಾಗದಲ್ಲಿ ನಾವು ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ. ಮಲಬಾರ್ (ಉತ್ತರ ಕೇರಳ), ಕಾಸರಗೋಡು ಹಾಗೂ ಇಡೀ ಕೇರಳ ರಾಜ್ಯಕ್ಕೆ ಕೇಂದ್ರ ಮಾಡುತ್ತಿರುವ ಅನ್ಯಾಯದ ವಿರುದ್ಧ ಇದು ಮೊದಲ ಹಂತದ ಪ್ರತಿಭಟನೆಯಾಗಿದೆ’ ಎಂದು ಅವರು ತಿಳಿಸಿದರು.
‘ಈ ವಿಭಜನೆಯಿಂದಾಗಿ ಕಾಸರಗೋಡಿನ ಜನರು ತೀವ್ರ ತೊಂದರೆಗೆ ಒಳಗಾಗಲಿದ್ದಾರೆ. 2007ರಲ್ಲಿ ಸೇಲಂ ವಿಭಾಗವನ್ನು ರಚಿಸಿದಾಗಲೇ ಪಾಲಕ್ಕಾಡ್ ವಿಭಾಗದ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿತ್ತು. ನಂತರ ಮಂಗಳೂರು ಬಂದರಿನ ಮೂಲಕ ನಡೆಯುತ್ತಿದ್ದ ತೈಲ, ಕಲ್ಲಿದ್ದಲು ಮತ್ತು ರಾಸಾಯನಿಕ ರಸಗೊಬ್ಬರಗಳ ಸಾಗಣೆಯಿಂದ ಬರುವ ಸುಮಾರು 600 ಕೋಟಿ ರು. ಆದಾಯವೇ ಪಾಲಕ್ಕಾಡ್ ವಿಭಾಗಕ್ಕೆ ಮುಖ್ಯ ಆಧಾರವಾಗಿತ್ತು. ಈಗ ಮಂಗಳೂರನ್ನು ಮೈಸೂರು ವಿಭಾಗಕ್ಕೆ ಸೇರಿಸಿದರೆ ಈ ಆದಾಯ ಸಂಪೂರ್ಣವಾಗಿ ಕೈತಪ್ಪಿ ಹೋಗಲಿದೆ’ ಎಂದು ಸಂಸದರು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಈ ನಿರ್ಧಾರವನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ದೆಹಲಿಗೆ ತೆರಳಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸಂಸದರು ಎಚ್ಚರಿಸಿದರು.
ಮೈಸೂರು ವಿಭಾಗ ಅಮೆರಿಕದಲ್ಲಿದೆಯೇ?: ಬಿಜೆಪಿಗ ತಿರುಗೇಟು
ತಿರುವನಂತಪುರಂ: ಮಂಗಳೂರು ನಿಲ್ದಾಣವನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿರುವ ರೈಲ್ವೆ ಮಂಡಳಿಯ ನಿರ್ಧಾರವನ್ನು ಬಿಜೆಪಿ ಹಿರಿಯ ನಾಯಕ ಪಿ.ಕೆ. ಕೃಷ್ಣದಾಸ್ ಸಮರ್ಥಿಸಿಕೊಂಡಿದ್ದಾರೆ. ‘ಮೈಸೂರು ವಿಭಾಗವೇನು ಅಮೆರಿಕದಲ್ಲಿದೆಯೇ? ಅದೂ ಕೂಡ ಭಾರತೀಯ ರೈಲ್ವೆಯ ಭಾಗವೇ ಅಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.