ನವದೆಹಲಿ: ಹಿಂದಿಯ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಕಾಲು ಮುಟ್ಟಿ ನಮಸ್ಕರಿಸಿದ್ದ ಖ್ಯಾತ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್‌ಗೆ ಖಲಿಸ್ತಾನಿ ಪರ ಸಂಘಟನೆ, ಗುರುಪತ್ವಂತ್ ಸಿಂಗ್ ಪನ್ನೂನ್ ನೇತೃತ್ವದ ಸಿಖ್ ಫಾರ್ ಜಸ್ಟೀಸ್ ( ಎಸ್‌ಎಫ್‌ಜೆ) ಸಂಘಟನೆ ಬೆದರಿಕೆ ಹಾಕಿದೆ.
ಜತೆಗೆ ನ.1ರಂದು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಸಂಗೀತ ಕಾರ್ಯಕ್ರಮ ನಿಲ್ಲಿಸುವ ಎಚ್ಚರಿಕೆ ನೀಡಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಪನ್ನೂನ್, ‘1984ರ ನರಮೇಧಕ್ಕೆ ಉತ್ತೇಜನ ನೀಡಿದ ಬಚ್ಚನ್ ಪಾದ ಮುಟ್ಟುವ ಮೂಲಕ ದಿಲ್ಜಿತ್, ಸಿಖ್ ನರಮೇಧದ ಪ್ರತಿಯೊಬ್ಬ ಬಲಿಪಶು, ಪ್ರತಿಯೊಬ್ಬ ವಿಧವೆ ಮತ್ತು ಅನಾಥರನ್ನು ಅವಮಾನಿಸಿದ್ದಾರೆ. ಇದು ಅಜ್ಞಾನವಲ್ಲ, ದ್ರೋಹ’ ಎಂದಿದ್ದಾನೆ.
ನ್ಯೂಯಾರ್ಕ್: ಇತ್ತೀಚೆಗಷ್ಟೇ ಮೊಟ್ಟಮೊದಲ 4 ಟ್ರಿಲಿಯನ್ ಡಾಲರ್ (353 ಲಕ್ಷ ಕೋಟಿ ರು.) ಮೌಲ್ಯದ ಕಂಪನಿ ಎನಿಸಿಕೊಂಡಿದ್ದ ಚಿಪ್ ತಯಾರಕ ಎನ್‌ವಿಡಿಯಾ ಓಟ ಮುಂದುವರೆಸಿದ್ದು, ಬುಧವಾರ ಮೊದಲ 5 ಟ್ರಿಲಿಯನ್ ಡಾಲರ್(441 ಲಕ್ಷ ಕೋಟಿ ರು.) ಕಂಪನಿಯಾಗಿ ಹೊರಹೊಮ್ಮಿದೆ. ಎಲೆಕ್ಟ್ರಿಕ್ ಉಪಕರಣಗಳ ಉತ್ಪಾದನೆಯಲ್ಲಿ ಕಡ್ಡಾಯವಾಗಿರುವ ಚಿಪ್‌ಗಳ ಬೇಡಿಕೆ ಭಾರೀ ಏರಿಕೆಯಾದ ಕಾರಣ, 2023ರಿಂದ ಆರಂಭದಿಂದ ಎನ್‌ವಿಡಿಯಾದ ಷೇರು ಬೆಲೆ ವೇಗವಾಗಿ ಹೆಚ್ಚುತ್ತಿದೆ. ಈ ಟ್ರೆಂಡ್ ಮುಂದುವರೆದಿದ್ದು, ಬುಧವಾರ ಬೆಳಗ್ಗೆಯೇ ಕಂಪನಿಯ ಷೇರುಗಳ ಬೆಲೆ 18352 ರು. ತಲುಪಿದ್ದು, ಕಂಪನಿಯ ಒಟ್ಟು ಮೌಲ್ಯ 441 ಲಕ್ಷ ಕೋಟಿ ರು. ಆಗಿದೆ. ಇದು ಭಾರತ, ಜಪಾನ್, ಬ್ರಿಟನ್‌ನ ಜಿಡಿಪಿಗಿಂತಲೂ ಅಧಿಕ.ಮಂಗಳವಾರವಷ್ಟೇ ಆ್ಯಪಲ್ ಕಂಪನಿಯ ಮೌಲ್ಯ 4 ಲಕ್ಷ ಕೋಟಿ ಡಾಲರ್ ದಾಟಿತ್ತು. ಎನ್‌ವಿಡಿಯಾ ಈ ಮೌಲ್ಯವನ್ನು ಇದೇ ವರ್ಷದ ಜೂ.9ರಂದು ಗಳಿಸಿತ್ತು.
ಹೈದರಾಬಾದ್: ತೆಲಂಗಾಣದ ಸಿಎಂ ರೇವಂತ ರೆಡ್ಡಿ ಅವರ ಸಂಪುಟಕ್ಕೆ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ. ಅಜರುದ್ದೀನ್ ಅವರು ಪ್ರಸ್ತುತ ವಿಧಾನಪರಿಷತ್ ಸದಸ್ಯರಾಗಿದ್ದು, ಸಚಿವಸ್ಥಾನದ ಆಕ್ಷಾಂಕ್ಷಿಯೂ ಆಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಬೊಮ್ಮ ಮಹೇಶ್ ಕುಮಾರ್ ಗೌಡ್, ‘ಅಜರುದ್ದೀನ್ ಸಚಿವರಾಗಲೂ ಬಹುದು. ಆದರೆ ನಾನು ಇದನ್ನು ಖಾತ್ರಿಪಡಿಸಲೂ ಆಗುವುದಿಲ್ಲ, ತಳ್ಳಿ ಹಾಕಲೂ ಆಗುವುದಿಲ್ಲ’ ಎಂದು ಉತ್ತರಿಸಿದ್ದಾರೆ. ಒಂದು ವೇಳೆ ಅಜರುದ್ದೀನ್ ಅವರಿಗೆ ಸಚಿವಸ್ಥಾನ ಲಭಿಸಿದರೆ, ಅವರು ಪ್ರಸ್ತುತ ಸರ್ಕಾರದ ಏಕಮಾತ್ರ ಅಲ್ಪಸಂಖ್ಯಾತ ಸಚಿವರಾಗಲಿದ್ದಾರೆ.
ಧನಕರ್ ಮೌನಕ್ಕೆ 100 ದಿನ, ಇನ್ನೂ ವಿದಾಯ ಕಾರ್ಯಕ್ರಮವಿಲ್ಲ: ಕೈ
ನವದೆಹಲಿ: ‘ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಜಗದೀಪ್ ಧನಕರ್ ಮೌನಕ್ಕೆ ಜಾರಿ 100 ದಿನ ಕಳೆದಿದೆ. ಆದರೂ ಅವರಿಗೆ ಬಿಜೆಪಿ ಕನಿಷ್ಠ ವಿದಾಯ ಕಾರ್ಯಕ್ರಮವನ್ನೂ ಕೇಂದ್ರ ಮಾಡಿಲ್ಲ’ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ ಜು.21 ತಡರಾತ್ರಿ ಜಗದೀಪ್ ಧನಕರ್ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ 100 ದಿನಗಳು ಕಳೆಯಿತು. ಪ್ರತಿದಿನ ಸುದ್ದಿಯಲ್ಲಿ ಇರುತ್ತಿದ್ದ ಮಾಜಿ ಉಪರಾಷ್ಟ್ರಪತಿ ಸಂಪೂರ್ಣ ಮೌನಕ್ಕೆ ಜಾರಿದ್ದಾರೆ. ಹೀಗಿದ್ದರೂ ಪ್ರಜಾಪ್ರಭುತ್ವದ ಸಂಪ್ರದಾಯದ ಪ್ರಕಾರ ಅವರಿಗೆ ಕನಿಷ್ಠ ಬಿಳ್ಕೋಡುಗೆ ಸಮಾರಂಭವನ್ನಾದರೂ ಕೇಂದ್ರ ಮಾಡಬೇಕಿತ್ತು. ಆದರೆ ಅವರು ಅದನ್ನೂ ಮಾಡಿಲ್ಲ’ ಎಂದು ಕಿಡಿ ಕಾರಿದ್ದಾರೆ.
ಭಾರತದಲ್ಲಿ ಮುಕ್ತವಾಗಿದ್ದೇನೆ, ಹಾಲಿ ಸ್ಥಿತಿಯಲ್ಲಿ ಬಾಂಗ್ಲಾಕ್ಕೆ ಮರಳಲ್ಲ: ಶೇಖ್ ಹಸೀನಾ
ನವದೆಹಲಿ: ಪ್ರಸಕ್ತ ನಾನು ಭಾರತದಲ್ಲಿ ಮುಕ್ತವಾಗಿದ್ದೇನೆ. ಪ್ರಸಕ್ತ ಬಾಂಗ್ಲಾದೇಶದಲ್ಲಿ ಇರುವ ಸ್ಥಿತಿಯಲ್ಲಿ ನಾನು ಅಲ್ಲಿಗೆ ಮರಳುವುದಿಲ್ಲ ಎಂದು ಬಾಮಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ. ಪ್ರಧಾನಿ ಸ್ಥಾನದಿಂದ ಪದಚ್ಯುತಗೊಂಡ ಬಳಿಕ ಭಾರತಕ್ಕೆ ಪಲಾಯನ ಮಾಡಿದ್ದ ಹಸೀನಾ ಇದೇ ಮೊದಲ ಬಾರಿಗೆ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ್ದಾರೆ. ಅದರಲ್ಲಿ, ಬಾಂಗ್ಲಾದಲ್ಲಿ ಕಾನೂನು ಬದ್ಧ ಸರ್ಕಾರ ರಚನೆಯಾದ ಬಳಿಕವಷ್ಟೇ ನಾನು ಅಲ್ಲಿಗೆ ಮರಳುತ್ತೇನೆ. ನಮ್ಮ ಪಕ್ಷವನ್ನು ನಿಷೇಧಿಸಿ ನಡೆಸಿದ ಚುನಾವಣೆಯಲ್ಲಿ ಆಯ್ಕೆಯಾಗುವ ಯಾವುದೇ ಸರ್ಕಾರದ ಅಡಿಯಲ್ಲೂ ನಾನು ಅಲ್ಲಿಗೆ ಮರಳುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ನಮ್ಮ ಪಕ್ಷದ ಲಕ್ಷಾಂತರ ಕಾರ್ಯಕರ್ತರು ಮುಂಬರುವ ಚುನಾವಣೆ ಬಹಿಷ್ಕರಿಸಲಿದ್ದಾರೆ ಎಂದು ಹೇಳಿದ್ದಾರೆ.