ನವದೆಹಲಿ : ಮಾದಕ ವಸ್ತು ಬಳಕೆಗೆ ಕಡಿವಾಣ ಹಾಕಲು ಸರ್ಕಾರಗಳ ನಿರಂತರ ಪ್ರಯತ್ನಗಳ ನಡುವೆಯೇ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 11 ವರ್ಷದೊಳಗಿನ ಮಕ್ಕಳು ಕೂಡಾ ಮಾದಕ ವಸ್ತು ವ್ಯಸನಿಗಳಾಗಿದ್ದಾರೆ. ಇದು ಈ ಹಿಂದೆ ಅಂದುಕೊಂಡಿದ್ದಕ್ಕಿಂತ ಕಡಿಮೆ ವಯೋಮಾನದಲ್ಲೇ ಮಕ್ಕಳು ಮಾದಕ ವಸ್ತು ಸೇವನೆ ಮಾಡುತ್ತಿದ್ದಾರೆ ಎಂಬ ವಿಷಯವನ್ನು ಎಂದು ಸಂಶೋಧನಾ ವರದಿಯೊಂದು ಬಹಿರಂಗಪಡಿಸಿದೆ.
ಬೆಂಗಳೂರು, ದೆಹಲಿ, ಮುಂಬೈ, ಲಖನೌ, ಚಂಡೀಗಢ, ಹೈದರಾಬಾದ್, ಇಂಫಾಲ, ಜಮ್ಮು, ದಿಬ್ರುಗಢ, ರಾಂಚಿಯಲ್ಲಿ 14.7 ವರ್ಷದೊಳಗಿನ 5920 ವಿದ್ಯಾರ್ಥಿಗಳನ್ನು ಇತ್ತೀಚೆಗೆ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಪ್ರತಿ 7 ವಿದ್ಯಾರ್ಥಿಗಳಲ್ಲಿ ಓರ್ವ ತಂಬಾಕು, ಮದ್ಯ, ಗಾಂಜಾ ಸೇರಿದಂತೆ ಕನಿಷ್ಠ ಯಾವುದಾದರೂ ಒಂದು ಮಾದಕ ದ್ರವ್ಯ ಸೇವಿಸುತ್ತಿರುವುದು ಕಂಡುಬಂದಿದೆ ಎಂದು ನ್ಯಾಷನಲ್ ಮೆಡಿಕಲ್ ಜರ್ನಲ್ ಆಫ್ ಇಂಡಿಯಾದಲ್ಲಿ ವರದಿ ಹೇಳಿದೆ.
ದೆಹಲಿ ಏಮ್ಸ್‌ನ ಡಾ. ಅಂಜು ಧವನ್ ನೇತೃತ್ವದ ತಂಡ ಬೆಂಗಳೂರು ಸೇರಿ 10 ನಗರಗಳ ವೈದ್ಯಕೀಯ ಕಾಲೇಜುಗಳ ಸಹಕಾರದೊಂದಿಗೆ ಈ ಸಮೀಕ್ಷೆ ನಡೆಸಿತ್ತು.
ಬಳಕೆ ಅವಧಿ?ಸಮೀಕ್ಷೆಗೆ ಒಳಪಟ್ಟ ವಿದ್ಯಾರ್ಥಿಗಳ ಪೈಕಿ ಶೇ.15.1ರಷ್ಟು ವಿದ್ಯಾರ್ಥಿಗಳು ತಮ್ಮ ಜೀವಮಾನದಲ್ಲಿ ಕನಿಷ್ಠ ಒಮ್ಮೆ, ಶೇ.10.3ರಷ್ಟು ಜನರು ಕಳೆದ ಒಂದು ವರ್ಷದ ಅವಧಿಯಲ್ಲಿ, ಶೇ.7.2ರಷ್ಟು ಜನರು ಕಳೆದ ಒಂದು ತಿಂಗಳ ಅವಧಿಯಲ್ಲಿ ಯಾವುದಾದರು ಒಂದು ಮಾದಕ ವಸ್ತು ಸೇವಿಸಿದ್ದಾಗಿ ಹೇಳಿದ್ದಾರೆ.ಯಾವುದರ ಪಾಲು ಎಷ್ಟು?:ಶೇ.4ರಷ್ಟು ವಿದ್ಯಾರ್ಥಿಗಳು ತಂಬಾಕು, ಶೇ.3.8 ಮದ್ಯ, ಶೇ.2.8 ನೋವು ನಿವಾರಕ ಔಷಧ, ಶೇ.2 ಗಾಂಜಾ ಮತ್ತು ಶೇ.1.9ರಷ್ಟು ವಿದ್ಯಾರ್ಥಿಗಳು ಮೂಗಿನಿಂದ ಸೇವಿಸುವ ವಸ್ತುಗಳ ಬಳಕೆ ಮಾಡುತ್ತಿರುವುದಾಗಿ ಹೇಳಿದ್ದಾರೆ.
ವಿದ್ಯಾರ್ಥಿಗಳು ಕಡಿಮೆ ವಯಸ್ಸಿನಲ್ಲಿಯೇ ಮಾದಕ ವ್ಯಸನ ಸೇವನೆಯತ್ತ ಮುಖ ಮಾಡುತ್ತಿರುವುದಕ್ಕೆ ಗೆಳೆಯರ ಮತ್ತು ಕುಟುಂಬದ ಪ್ರಭಾವವೂ ಕಾರಣ ಎನ್ನಲಾಗಿದೆ. ಶೇ.40ರಷ್ಟು ಮಕ್ಕಳು ತಮ್ಮ ಮನೆ ಮಂದಿಯ ತಂಬಾಕು, ಮದ್ಯಪಾನ ಸೇವನೆ ತಾವು ಅಭ್ಯಾಸ ಮಾಡಿದ್ದಾಗಿ ಸಮೀಕ್ಷಾ ವರದಿ ಹೇಳಿದೆ.
- ಸಂಶೋಧನಾ ಸಂಸ್ಥೆಯಿಂದ 14.7 ವರ್ಷದೊಳಗಿನ 5920 ವಿದ್ಯಾರ್ಥಿಗಳ ಸಮೀಕ್ಷೆ
- ಬೆಂಗಳೂರು ಸೇರಿದಂತೆ ದೇಶದ 10 ನಗರಗಳಲ್ಲಿ ಗಹನ ಡ್ರಗ್ಸ್ ಬಗ್ಗೆ ಅಧ್ಯಯನ
- ಶೇ.15.1ರಷ್ಟು ವಿದ್ಯಾರ್ಥಿಗಳಿಂದ ಜೀವಮಾನದಲ್ಲಿ ಒಮ್ಮೆಯಾದ್ರೂ ಡ್ರಗ್ಸ್ ಸೇವನೆ
- ಶೇ.7.2ರಷ್ಟು ವಿದ್ಯಾರ್ಥಿಗಳಿಂದ ಕಳೆದ 1 ತಿಂಗಳಲ್ಲಿ ಕನಿಷ್ಠ ಒಮ್ಮೆ ಟ್ರಗ್ಸ್ ಚಟ
- ಶೇ.10.3ರಷ್ಟು ವಿದ್ಯಾರ್ಥಿಗಳಿಂದ ಕಳೆದ 1 ವರ್ಷದ ಅವಧಿ ಒಮ್ಮೆ ಸೇವನೆ