ದುಬೈ: ಇರಾನ್‌ನ ಖಾರ್ಗ್ ದ್ವೀಪದ ತೈಲ ಕೇಂದ್ರದ ಮೇಲೆ ಅಮೆರಿಕ ದಾಳಿ ನಡೆಸಿದ ಕೆಲವೇ ಗಂಟೆಗಳ ನಂತರ, ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ಕರಾವಳಿ ನಗರ ಫುಜೈರಾ ಇಂಧನ ಸ್ಥಾವರದ ದಿಕ್ಕಿನಿಂದ ಶನಿವಾರ ಕಪ್ಪು ಹೊಗೆ ಏರುತ್ತಿರುವುದು ಕಂಡುಬಂದಿದೆ.

ಈ ಬಂದರು ಈ ಪ್ರದೇಶದ ತೈಲ ವ್ಯಾಪಾರದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಮತ್ತು ಪ್ರಮುಖ ತೈಲ ರಫ್ತು ಟರ್ಮಿನಲ್ ಒಳಗೊಂಡಿದೆ. ಆದರೆ, ನಗರದತ್ತ ತೂರಿ ಬಂದ ಡ್ರೋನ್ ಅನ್ನು ಯಶಸ್ವಿಯಾಗಿ ತಡೆದ ನಂತರ ಅವಶೇಷ ಬಿದ್ದಿದ್ದು, ಅದರಿಂದ ಬೆಂಕಿ ಕಾಣಿಸಿಕೊಂಡಿದೆ. ತೈಲ ಸ್ಥಾವರಕ್ಕೆ ಧಕ್ಕೆ ಆಗಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

==

ಸ್ಥಳಾಂತರ, ಬಂಕರ್‌ಗೆ ನಿರಾಕರಿಸಿದ್ದ ಖಮೇನಿ

ನವದೆಹಲಿ: ಇರಾನ್‌ನ ಮೃತ ಪರಮೋಚ್ಚ ನಾಯಕ ಅಯತೋಲ್ಲಾ ಅಲಿ ಖಮೇನಿ, ಅಮೆರಿಕ ದಾಳಿ ಸನ್ನಿಹಿತ ಆಗಿದ್ದರೂ ಬಂಕರ್‌ನಲ್ಲಿ ಏಕೆ ಅವಿತುಕೊಳ್ಳಲಿಲ್ಲ? ಟೆಹ್ರಾನ್‌ ಬಿಟ್ಟು ಬೇರೆ ಕಡೆ ಏಕೆ ಸಾಗಲಿಲ್ಲ ಎಂಬ ಬಗ್ಗೆ ಇರಾನ್‌ನ ಸರ್ವೋಚ್ಚ ನಾಯಕನ ಪ್ರತಿನಿಧಿ ಅಬ್ದುಲ್ ಮಜೀದ್ ಹಕೀಮ್ ಇಲಾಹಿ ವಿವರ ನೀಡಿದ್ದಾರೆ.‘ನನ್ನನ್ನು ಬಂಕರ್‌ಗೆ ಸಾಗಿಸಬೇಕು ಎಂದರೆ ದೇಶದ 9 ಕೋಟಿ ಜನರಿಗೂ ಬಂಕರ್‌ ನಿರ್ಮಿಸಿ. ನಾನು ಸ್ಥಳಾಂತರ ಆಗಬೇಕೆಂದರೆ ದೇಶದ 9 ಕೋಟಿ ಜನರನ್ನೂ ಸ್ಥಳಾಂತರಿಸಿ. ನಾನೊಬ್ಬನೇ ಸ್ಥಳಾಂತರ ಆಗುವುದು, ಅವಿತುಕೊಳ್ಳುವುದು ನಾಯಕನ ಲಕ್ಷಣ ಅಲ್ಲ’ ಎಂದು ಖಮೇನಿ ಹೇಳಿದ್ದರು ಎಂದು ಇಲಾಹಿ ‘ಇಂಡಿಯಾ ಟುಡೇ’ ಶೃಂಗದಲ್ಲಿ ಹೇಳಿದರು.


==

ಅಂತಾರಾಷ್ಟ್ರೀಯ ಬುಕ್ಕಿಂಗ್‌ಗೆ 1300 ರು.

ನವದೆಹಲಿ: ವೈಮಾನಿಕ ಇಂಧನ ದರ ಹೆಚ್ಚಳದ ಕಾರಣ ಇಂಡಿಗೋ, ಏರಿಂಡಿಯಾ ಸಂಸ್ಥೆಗಳು ಟಿಕೆಟ್‌ ಮೇಲೆ ಇಂಧನ ಸರ್‌ಚಾರ್ಜ್‌ ಹಾಕಿದ ಬೆನ್ನಲ್ಲೇ, ಆಕಾಸಾ ಏರ್‌ಲೈನ್ಸ್‌ ಕೂಡ ಇದೇ ಹಾದಿ ಹಿಡಿದಿದೆ. ಭಾನುವಾರದಿಂದ 199 ರು.ನಿಂದ 1300 ರು. ತನಕ ಸರ್‌ಚಾರ್ಜ್‌ ವಿಧಿಸಲಿದೆ.‘ಮಾ.15ರಿಂದ ಬುಕ್ಕಿಂಗ್‌ ಆಗುವ ದೇಶಿಯ ವಿಮಾನಗಳಲ್ಲಿ 199 ರು., ಅಂತಾರಾಷ್ಟ್ರೀಯ 1300 ರು. ಇಂಧನ ಸರ್‌ಜಾರ್ಚ್‌ ವಿಧಿಸಲಿದ್ದೇವೆ. ವಿಮಾನ ಟರ್ಬೈನ್‌ ಇಂಧನ ಬೆಲೆಯಲ್ಲಿ ಹೆಚ್ಚಳದ ಕಾರಣ ಹಿನ್ನೆಲೆ ವೆಚ್ಚ ಸರಿದೂಗಿಸಲು ಈ ಕ್ರಮ’ ಎಂದು ಅಕಾಸಾ ಹೇಳಿದೆ.

==

ಕೊಚ್ಚಿಯಲ್ಲಿದ್ದ ಇರಾನಿ ನೌಕೆಯ ಹೆಚ್ಚುವರಿ ಸಿಬ್ಬಂದಿ ಸ್ವದೇಶಕ್ಕೆ

ನವದೆಹಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಕೇರಳದ ಕೊಚ್ಚಿಯಲ್ಲಿ ಆಶ್ರಯ ಪಡೆದಿದ್ದ ಇರಾನ್‌ನ ಐಆರ್‌ಐಎಸ್‌ ಲವನ್‌ ಹಡಗಿನಲ್ಲಿದ್ದ ಹೆಚ್ಚುವರಿ ಸಿಬ್ಬಂದಿಯನ್ನು ಸ್ವದೇಶಕ್ಕೆ ವಾಪಸ್‌ ಕಳುಹಿಸಲಾಗಿದೆ.ಐರಿಸ್‌ ಲವನ್‌ ಹಡಗಿನಲ್ಲಿದ್ದ 183 ಸಿಬ್ಬಂದಿಗಳಲ್ಲಿ 50 ಮಂದಿ ನೌಕೆಯಲ್ಲಿಯೇ ಉಳಿದಿದ್ದಾರೆ. ಅಗತ್ಯವಿಲ್ಲದ ಸಿಬ್ಬಂದಿಯನ್ನು ಟರ್ಕಿಶ್‌ ಏರ್‌ಲೈನ್ಸ್ ವಿಮಾನದ ಮೂಲಕ ಭಾರತದಿಂದ ವಾಪಸ್‌ ಕಳುಹಿಸಲಾಗಿದೆ. ಇರಾನ್‌ನಲ್ಲಿ ವಿಮಾನ ಸೇವೆ ವ್ಯತ್ಯಯ ಹಿನ್ನೆಲೆ ನಾವಿಕರು ಅರ್ಮೆನಿಯಾದ ರಾಜಧಾನಿ ಯೆರೆವಾನ್‌ನಿಂದ ರಸ್ತೆ ಮೂಲಕ ಇರಾನ್‌ಗೆ ಪ್ರಯಾಣಿಸಲಿದ್ದಾರೆ. ಐಆರ್‌ಐಎಸ್‌ ಲವನ್‌ಗೆ ಭಾರತ ಇರಾನ್‌ ಕೋರಿಕೆಯ ಮೇರೆಗೆ ಕೊಚ್ಚಿಯಲ್ಲಿಯೇ ಆಶ್ರಯ ನೀಡಿತ್ತು.

ಡೇನಾ ಹಡಗು ದುರಂತದ 84 ಶವಗಳು ಹಸ್ತಾಂತರ:ಕಳೆದ ವಾರ ಶ್ರೀಲಂಕಾ ಕರಾವಳಿಯಲ್ಲಿ ಅಮೆರಿಕದ ದಾಳಿಗೆ ತುತ್ತಾಗಿ ಇರಾನ್‌ನ ಡೇನಾ ಹಡಗಿನಲ್ಲಿ ಮೃತರಾಗಿದ್ದ 84 ನಾವಿಕರ ಶವವನ್ನು ಶ್ರೀಲಂಕಾ ಟರ್ಕಿಶ್‌ ವಿಮಾನದ ಮೂಲಕ ಸ್ವದೇಶಕ್ಕೆ ವಾಪಸ್‌ ಕಳುಹಿಸಿದೆ. ಮಾ.4ರಂದು ಇರಾನ್ ನೌಕೆ ಮೇಲೆ ಅಮೆರಿಕ ದಾಳಿ ಮಾಡಿತ್ತು. ಆಗ 84 ನಾವಿಕರು ಸಾವನ್ನಪ್ಪಿದ್ದರು.

==

ನೆದರ್ಲೆಂಡ್‌ ಯಹೂದಿ ಶಾಲೆಯಲ್ಲಿ ಭೀಕರ ಸ್ಫೋಟ

ಆರೋಪಿ ಪತ್ತೆಗೆ ತೀವ್ರ ಶೋಧ

ಯಹೂದಿಗಳ ವಿರುದ್ಧ ಹೇಡಿತನದ ಆಕ್ರಮಣ: ಆಕ್ರೋಶ

ದಾಳಿ ಹಿಂದೆ ಇರಾನ್‌ ಕೈವಾಡದ ಶಂಕೆ

ಆ್ಯಮ್ಸ್ಟರ್ಡ್ಯಾಂ: ಯಹೂದಿ ರಾಷ್ಟ್ರ ಇಸ್ರೇಲ್‌ ವಿರುದ್ಧ ಇರಾನ್‌ ಕದನಕ್ಕಿಳಿದಿರುವ ಹೊತ್ತಿನಲ್ಲೇ, ನೆದರ್ಲೆಂಡ್‌ನ ರಾಜಧಾನಿ ಆ್ಯಮ್ಸ್ಟರ್ಡ್ಯಾಂನ ಯಹೂದಿ ಶಾಲೆಯೊಂದರಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಶುಕ್ರವಾರ ಅಮೆರಿಕದ ಮಿಚಿಗನ್‌ನಲ್ಲಿರುವ ಯಹೂದಿಗಳ ದೇವಾಲಯದ ಮೇಲಿನ ದಾಳಿಯ ಬೆನ್ನಲ್ಲೇ ಈ ಘಟನೆ ನಡೆದಿರುವುದು, ವಿಶ್ವಾದ್ಯಂತವಿರುವ ಯಹೂದಿಗಳನ್ನು ಇರಾನ್‌ ಗುರಿಯಾಗಿಸಿಕೊಂಡಿದೆಯೇ ಎಂದ ಸಂಶಯಕ್ಕೆ ಎಡೆಮಾಡಿದೆ.

ತಡರಾತ್ರಿ ನಡೆದ ಘಟನೆ ಇದಾಗಿರುವುದರಿಂದ ಶಾಲೆಯಲ್ಲಿ ಮಕ್ಕಳಿರದೆ ಪ್ರಾಣಹಾನಿ ತಪ್ಪಿದೆ. ಆದರೆ ಶಾಲೆಯ ಗೋಡೆಗೆ ಹಾನಿಯಾಗಿದೆ. ಈ ದಾಳಿಯನ್ನು, ‘ನಗರದ ಯಹೂದಿ ಸಮುದಾಯದ ವಿರುದ್ಧದ ಹೇಡಿತನದ ಆಕ್ರಮಣ’ ಎಂದು ಅಲ್ಲಿನ ಮೇಯರ್‌ ಕರೆದಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.ವ್ಯಕ್ತಿಯೊಬ್ಬ ಸ್ಫೋಟಕವನ್ನು ಎಸೆಯುತ್ತಿರುವ ದೃಶ್ಯವು ಸೆರೆಯಾಗಿದ್ದು, ಅದರ ಆಧಾರದಲ್ಲಿ ಆತನ ಪತ್ತೆಗೆ ಶೋಧ ಆರಂಭವಾಗಿದೆ.