ಕೊಲ್ಹಾಪುರ : ಮಹಾರಾಷ್ಟ್ರದ ಐತಿಹಾಸಿಕ ಕೊಲ್ಹಾಪುರಿ ಚಪ್ಪಲಿಗಳು ಮೊದಲಿಂದಲೂ ಪ್ರಸಿದ್ಧವಾದರೂ, ಇತ್ತೀಚೆಗೆ ಇಟಲಿಯ ಪ್ರಾಡಾ ಕಂಪನಿ ಅದರ ವಿನ್ಯಾಸ ನಕಲಿಸಿ ವಿವಾದ ಸೃಷ್ಟಿಸಿತ್ತು, ಇದರ ಬೆನ್ನಲ್ಲೇ ಕೊಲ್ಹಾಪರಿ ಚಪ್ಪಲಿಗಳಸ್ವಂತಿಕೆಯನ್ನು ಧೃಡಪಡಿಸಲು, ಚಪ್ಪಲಿಗಳ ಮೇಲೆ ಕ್ಯುಆರ್ ಕೋಡ್ ಅಳವಡಿಸಲು ಆರಂಭಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮಹಾರಾಷ್ಟ್ರದ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ (ಲಿಡ್‌ಕಾಂ), ‘ಚಪ್ಪಲಿಯು ಕರಕುಶಲ ಕಲೆಯಾಗಿರುವುದರಿಂದ ಅದನ್ನು ತಯಾರಿಸಿದವರನ್ನು ಗುರುತಿಸಲು, ನಕಲಿ ಚಪ್ಪಲಿಗಳ ಹಾವಳಿಯನ್ನು ತಡೆಯಲು, ಗ್ರಾಹಕರಲ್ಲಿ ನಂಬಿಕೆ ವೃದ್ಧಿಸಲು, ಅವುಗಳ ಮಾಹಿತಿಯನ್ನೊಳಗೊಂಡ ಕ್ಯುಆರ್ ಕೋಡ್‌ಗಳನ್ನು ಪ್ರತಿ ಚಪ್ಪಲಿಯ ಮೇಲೆ ಮುದ್ರಿಸಲಾಗುವುದು’ ಎಂದು ತಿಳಿಸಿದೆ.
ಆ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿದರೆ ಅದನ್ನು ತಯಾರಿಸಿದವರ ಹೆಸರು, ತಯಾರಾದ ಸ್ಥಳ ಮತ್ತು ರೀತಿ, ಬಳಸಲಾದ ಕಚ್ಚಾವಸ್ತು, ಬಾಳಿಕೆ ಹಾಗೂ ಜಿಐ(ಭೌಗೋಳಿಕ ಗುರುತು) ಪ್ರಮಾಣಪತ್ರದ ಮಾಹಿತಿಯನ್ನು ಪಡೆಯಬಹುದು.
ಕೊಲ್ಹಾಪುರಿ ಚಪ್ಪಲಿಗಳನ್ನು ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಕರ್ನಾಟಕದ ಧಾರವಾಡ, ಬೆಳಗಾವಿ , ಬಾಗಲಕೋಟೆ ಮತ್ತು ವಿಜಯಪುರದಲ್ಲಿಯೂ ತಯಾರಿಸಲಾಗುತ್ತದೆ.
ತಿಂಗಳ ಹಿಂದಷ್ಟೇ, ಕೊಲ್ಹಾಪುರಿ ಚಪ್ಪಲಿಯನ್ನು ಹೋಲುವ ಪಾದರಕ್ಷೆಗಳನ್ನು ಪ್ರಾಡಾ ಕಂಪನಿ ತಯಾರಿಸಿತ್ತು ಹಾಗೂ ಅಸಲಿ ವಿನ್ಯಾಸಕ್ಕೆ ಶ್ರೇಯವನ್ನೇ ಕೊಟ್ಟಿರಲಿಲ್ಲ. ಇದು ವ್ಯಾಪಾಕ ಆಕ್ರೋಶಕ್ಕೆ ಗುರಿಯಾಗಿ, ಬಳಿಕ ಕಂಪನಿ ಕ್ಷಮೆ ಯಾಚಿಸಿತ್ತು.
ಕೊಲ್ಹಾಪುರಿ ಚಪ್ಪಲಿ ಇತಿಹಾಸ
ಚರ್ಮದಿಂದ ಕೈಯ್ಯಾರೆ ತಯಾರಿಸಲಾಗುವ ಈ ಚಪ್ಪಲಿಗಳನ್ನು 12ನೇ ಶತಮಾನದಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ, ಸಾಂಗ್ಲಿ, ಸೋಲಾಪುರಗಳಲ್ಲಿ ಹೊಲಿಯಲಾಗುತ್ತಿತ್ತು. ಇವುಗಳನ್ನು ಛತ್ರಪತಿ ಶಿವಾಜಿಯವರ ಸಮಯದಲ್ಲಿ ಸ್ವದೇಶದ ಹೆಮ್ಮೆ ಎಂದೂ ಪರಿಗಣಿಸಲಾಗುತ್ತಿತ್ತು.
ಬಳಿಕ, 1974ರಲ್ಲಿ ಸ್ಥಾಪನೆಯಾದ ಲಿಡ್‌ಕಾಂ, ಈ ಚಪ್ಪಲಿಗಳನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿತ್ತು. ಕೊಲ್ಹಾಪುರದ ಈ ಅಪರೂಪದ ಕಲೆಗೆ ಮಾನ್ಯತೆ ನೀಡಲು, 2019ರಲ್ಲಿ ಮಾಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರ ಜಂಟಿಯಾಗಿ ಜಿಐ ಟ್ಯಾಗ್ ಪಡೆದುಕೊಂಡಿದ್ದವು.