ಇಂದು ಪವಿತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮಕರ ಜ್ಯೋತಿ : 1.5 ಲಕ್ಷಭಕ್ತರ ಆಗಮನ ನಿರೀಕ್ಷೆ

KannadaprabhaNewsNetwork | Updated : Jan 14 2025, 04:18 AM IST

ಸಾರಾಂಶ

ಪವಿತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮಂಗಳವಾರ ಮಕರಜ್ಯೋತಿ ಪೂಜಾ ಕೈಂಕರ್ಯ ನಡೆಯಲಿದ್ದು, ದೇಶಾದ್ಯಂತ ಸುಮಾರು 1.5 ಲಕ್ಷ ಜನರು ಭೇಟಿ ನೀಡುವ ನಿರೀಕ್ಷೆ ಇದೆ.

ಶಬರಿಮಲೆ: ಪವಿತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮಂಗಳವಾರ ಮಕರಜ್ಯೋತಿ ಪೂಜಾ ಕೈಂಕರ್ಯ ನಡೆಯಲಿದ್ದು, ದೇಶಾದ್ಯಂತ ಸುಮಾರು 1.5 ಲಕ್ಷ ಜನರು ಭೇಟಿ ನೀಡುವ ನಿರೀಕ್ಷೆ ಇದೆ. ಸಂಜೆ 6 ಗಂಟೆಯಿಂದ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶುರುವಾಗಲಿದೆ. ಸಂಜೆ 6 ಗಂಟೆ ವೇಳೆಗೆ ಪೊನ್ನಂಬಾಲಮೇಡು ಬೆಟ್ಟದಲ್ಲಿ ಮಕರಜ್ಯೋತಿ ಕಾಣಿಸಲಿದೆ.

ಧಾರ್ಮಿಕ ಸ್ಥಳಗಳಲ್ಲಿ ಮದ್ಯ ಮಾರಾಟ ನಿಷೇಧ ಜಾರಿಗೆ ಚಿಂತನೆ: ಮಧ್ಯಪ್ರದೇಶ ಸಿಎಂ

ಭೋಪಾಲ್‌: ‘ಧಾರ್ಮಿಕ ಸ್ಥಳಗಳಲ್ಲಿ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ಅಂತಹ ಸ್ಥಳಗಳಲ್ಲಿ ಮದ್ಯ ಮಾರಾಟ ನಿಷೇಧಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ’ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, ‘ಧಾರ್ಮಿಕ ನಗರಗಳಲ್ಲಿ ಮದ್ಯ ಮಾರಾಟ ಮತ್ತು ಸೇವನೆಯಿಂದಾಗಿ ಪರಿಸರದ ಮೇಲೆ ಬೀರುವ ಪರಿಣಾಮದ ಬಗ್ಗೆ ದೂರುಗಳಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತನ್ನ ನೀತಿಯನ್ನು ಸುಧಾರಿಸುವ ಮೂಲಕ ಧಾರ್ಮಿಕ ನಗರಗಳಲ್ಲಿ ಮದ್ಯಪಾನ ನಿಷೇಧವನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಸಂತರು ನೀಡುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಸರ್ಕಾರ ಸೂಕ್ತ ಕ್ರಮಕೈಗೊಳ್ಳಲಿದೆ’ ಎಂದರು.

ನ್ಯಾ.ವಿನೋದ್‌ ಚಂದ್ರನ್‌ ಸುಪ್ರೀಂಗೆ ಹೊಸ ಜಡ್ಜ್‌ನವದೆಹಲಿ: ಪಟನಾ ಹೈಕೋರ್ಟ್‌ನ ಮುಖ್ಯ ನಾಯಧೀಶರಾಗಿದ್ದ ಕೆ.ವಿನೋದ್‌ ಚಂದ್ರನ್ ಅವರನ್ನು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಿಸಲಾಗಿದೆ. ಇವರ ಆಯ್ಕೆಯೊಂದಿಗೆ ಸುಪ್ರೀಂಕೋರ್ಟ್‌ಗೆ ಮಂಜೂರಾಗಿರುವ ಎಲ್ಲಾ 34 ಜಡ್ಜ್‌ ಹುದ್ದೆಗಳು ಭರ್ತಿಯಾದಂತೆ ಆಗಿದೆ.

ನಾಳೆಯ ಯುಜಿಸಿ ನೆಟ್‌ ಪರೀಕ್ಷೆ ಮುಂದೂಡಿಕೆನವದೆಹಲಿ: ಜ.15ರಂದು ನಿಗದಿಯಾಗಿದ್ದ ಯುಜಿಸಿ ನೆಟ್‌ ಪರೀಕ್ಷೆಯನ್ನು ಮಕರ ಸಂಕ್ರಾಂತಿ ಹಬ್ಬದ ಕಾರಣ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ರದ್ದುಗೊಳಿಸಿದೆ. ಮುಂದಿನ ದಿನಾಂಕವನ್ನು ಘೋಷಿಸುವುದಾಗಿ ಹೇಳಿದೆ. ಪಿಎಚ್‌.ಡಿ ಮತ್ತು ಜಾಯಿಂಟ್‌ ರಿಸರ್ಚ್‌ ಫೆಲೋಶಿಪ್‌ (ಜೆಆರ್‌ಎಫ್‌)ಗಾಗಿ ಪ್ರವೇಶಕ್ಕೆ ನಡೆಸುವ ಪರೀಕ್ಷೆಯಾಗಿರುವ ನೆಟ್‌ನಲ್ಲಿ ಜ.15ಕ್ಕೆ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ ಸೇರಿ 17 ವಿಷಯಗಳಿಗೆ ಪರೀಕ್ಷೆ ನಿಗದಿಯಾಗಿತ್ತು. ಜ.16ರ ಪರೀಕ್ಷೆಗಳು ಎಂದಿನಂತೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮಾತುಕತೆ ನಿಂತರೆ ಯಾವ ಮೈತ್ರಿಕೂಟವೂ ಫಲಿಸದು: ಕಾಂಗ್ರೆಸ್‌ ಬಗ್ಗೆ ರಾವುತ್‌ ಕಿಡಿ

ಮುಂಬೈ: ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಶಿವಸೇನೆ ಯುಬಿಟಿ ಬಣ ಘೋಷಿಸಿದ ಬೆನ್ನಲ್ಲೇ ಪಕ್ಷದ ನಾಯಕ ಸಂಜಯ್‌ ರಾವುತ್‌ ಮತ್ತೆ ಇಂಡಿಯಾ ಕೂಟದ ಅತಿದೊಡ್ಡ ಪಕ್ಷ ಕಾಂಗ್ರೆಸ್‌ ಬಗ್ಗೆ ಕಿಡಿಕಾರಿದ್ದು, ‘ ‘ಮಿತ್ರಪಕ್ಷಗಳ ನಡುವೆ ಮಾತುಕತೆ ನಡೆಯದಿದ್ದರೆ ಯಾವುದೇ ಮೈತ್ರಿ ಯಶಸ್ವಿಯಾಗುವುದಿಲ್ಲ’ ಎಂದಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್‌, ‘ಪಾಲುದಾರರ ನಡುವೆ ಸಂವಹನ ಕಾಪಾಡಲು ಜವಾಬ್ದಾರಿಯುತ ನಾಯಕನನ್ನು ನೇಮಿಸಬೇಕು. ಇಂಡಿಯಾ ಕೂಟದಲ್ಲಿ ಅತಿದೊಡ್ಡ ಪಾಲುದಾರ ರಾಷ್ಟ್ರವಾಗಿರುವ ಕಾಂಗ್ರೆಸ್‌ ಈ ಪಾತ್ರವನ್ನು ವಹಿಸಬೇಕು. ಸಮ್ಮಿಶ್ರ ಪಾಲುದಾರರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಅಂತಹ ಸಂದರ್ಭಗಳಲ್ಲಿ ಯಾವುದೇ ಪಕ್ಷವು ತಮ್ಮ ಮಾಜಿ ಅಥವಾ ಭವಿಷ್ಯದ ಸಂಭಾವ್ಯ ಮಿತ್ರರನ್ನು ದೇಶದ್ರೋಹಿಗಳು ಎಂದು ಕರೆಯಬಾರದು’ ಎಂದರು. ಇತ್ತೀಚೆಗೆ ದಿಲ್ಲಿ ಕಾಂಗ್ರೆಸ್‌ ನಾಯಕರು ಆಪ್ ನಾಯಕ ಕೇಜ್ರಿವಾಲ್‌ರನ್ನು ದೇಶದ್ರೋಹಿ ಎಂದು ಕರೆದಿದ್ದರು.

ಪಾಕ್‌ನಲ್ಲಿ ₹80000 ಕೋಟಿ ಮೌಲ್ಯದ ಚಿನ್ನದ ನಿಕ್ಷೇಪ ಪತ್ತೆ

ಇಸ್ಲಾಮಬಾದ್‌: ಆರ್ಥಿಕವಾಗಿ ದಿವಾಳಿ ಅಂಚಿನಲ್ಲಿರುವ ಪಾಕಿಸ್ತಾನದಲ್ಲಿ ಬರೋಬ್ಬರಿ 80 ಸಾವಿರ ಕೋಟಿ ಪಾಕಿಸ್ತಾನಿ ಮೌಲ್ಯದ 28 ಲಕ್ಷ ತೊಲಾ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಇದು ನೆರೆ ರಾಷ್ಟ್ರದ ಆರ್ಥಿಕ ಪ್ರಗತಿಗೆ ಮೈಲಿಗಲ್ಲಾಗಬಹುದು ಎಂದು ಬಣ್ಣಿಸಲಾಗುತ್ತಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಅಟ್ಟೋಕ್‌ ಎಂಬ ನಗರದ ಕಡೆಯಿಂದ ಹಾದು ಹೋಗುವ ಮಾರ್ಗದಲ್ಲಿ ನಿಕ್ಷೇಪ ಪತ್ತೆಯಾಗಿದೆ.

Share this article