ಉಕ್ರೇನ್‌ ಯುದ್ಧದಲ್ಲಿ ರಷ್ಯಾಪರ ಹೋರಾಡುತ್ತಿದ್ದ ಕೇರಳ ವ್ಯಕ್ತಿ ಬಿನಿಲ್ ಟಿಬಿ ಗಾಯಗೊಂಡು ಸಾವು

KannadaprabhaNewsNetwork |  
Published : Jan 14, 2025, 01:00 AM ISTUpdated : Jan 14, 2025, 04:22 AM IST
ಬಿನಿಲ್‌ | Kannada Prabha

ಸಾರಾಂಶ

 ಕಳೆದ ವರ್ಷದ ಜೂನ್ ತಿಂಗಳಿನಿಂದ ರಷ್ಯಾದ ಖಾಸಗಿ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ತ್ರಿಶೂರ್‌ ಮೂಲದ 32 ವರ್ಷದ ಯುವಕ ಬಿನಿಲ್ ಟಿಬಿ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಗಾಯಗೊಂಡು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ತ್ರಿಶೂರ್‌: ಕಳೆದ ವರ್ಷದ ಜೂನ್ ತಿಂಗಳಿನಿಂದ ರಷ್ಯಾದ ಖಾಸಗಿ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ತ್ರಿಶೂರ್‌ ಮೂಲದ 32 ವರ್ಷದ ಯುವಕ ಬಿನಿಲ್ ಟಿಬಿ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಗಾಯಗೊಂಡು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ತ್ರಿಶೂರ್‌ನ ಕುಟ್ಟನೆಲ್ಲೂರು ನಿವಾಸಿಯಾಗಿದ್ದ ಬಿನಿಲ್‌ ರಷ್ಯಾದ ಖಾಸಗಿ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಉಕ್ರೇನ್ ವಿರುದ್ಧದ ಯುದ್ಧದ ವೇಳೆ ಗಾಯಗೊಂಡಿದ್ದ ಬಿನಿಲ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು, ಈ ಬಗ್ಗೆ ಭಾರತೀಯ ರಾಯಭಾರಿ ಕಚೇರಿಯು ಬಿನಿಲ್ ಕುಟುಂಬಕ್ಕೆ ಅಧಿಕೃತವಾಗಿ ತಿಳಿಸಿದೆ. ಕೇರಳದ ಮತ್ತೊಬ್ಬ ಯುವಕ ಜೈನ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಬಿನಿಲ್ ಹಾಗೂ ಕೇರಳದ ಇತರ ಕೆಲ ಯುವಕರು ಮಧ್ಯವರ್ತಿಗಳ ಮೂಲಕ ರಷ್ಯಾಗೆ ಕೆಲಸಕ್ಕೆಂದು ಹೋಗಿದ್ದರು. ಅಲ್ಲಿ ಅವರನ್ನು ಕ್ಯಾಂಟೀನ್ ಕೆಲಸಕ್ಕೆ ನೇಮಿಸಿಕೊಳ್ಳಲಾಗಿತ್ತು. ಆದರೆ ಉಕ್ರೇನ್ ವಿರುದ್ಧದ ಯುದ್ಧದ ಸಂದರ್ಭದಲ್ಲಿ ಖಾಸಗಿ ಸೇನೆಗೆ ಸೇರಿಸಿಕೊಳ್ಳಲಾಗಿತ್ತು. ಬಳಿಕ ಯುವಕರು ತಮ್ಮನ್ನು ತಾಯ್ನಾಡಿಗೆ ಮರಳಿ ಕರೆಸಿಕೊಳ್ಳುವಂತೆ ವಿಡಿಯೋ ಮುಖೇನ ಮನವಿ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ.

ರಷ್ಯಾ ಪರ ಸೆಣಸುತ್ತಿದ್ದ ಕೊರಿಯಾದ 300 ಯೋಧರು  ಆತ್ಮಹತ್ಯೆಗೆ ಶರಣು? 

ಸಿಯೋಲ್‌: ಉಕ್ರೇನ್‌ ಜತೆಗಿನ ಯುದ್ಧದಲ್ಲಿ ರಷ್ಯಾಪರ ಕಾದಾಡುತ್ತಿರುವ ಉತ್ತರ ಕೊರಿಯಾದ 300ಕ್ಕೂ ಹೆಚ್ಚು ಯೋಧರು ಈವರೆಗೆ ಸಾವಿಗೀಡಾಗಿದ್ದು, 2700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಒಂದು ವೇಳೆ ಉಕ್ರೇನ್‌ ಮಿಲಿಟರಿಗೆ ಸೆರೆಸಿಕ್ಕುವ ಪರಿಸ್ಥಿತಿಯೇನಾದರೂ ಬಂದರೆ ಆತ್ಮಹತ್ಯೆಗೆ ಶರಣವಾಗುವಂತೆಯೂ ಅವರಿಗೆ ಸ್ಪಷ್ಟ ನಿರ್ದೇಶನ ನೀಡಿಯೇ ಯುದ್ಧಭೂಮಿಗೆ ಕಳುಹಿಸಿಕೊಟ್ಟಿದ್ಡ ಹಿನ್ನೆಲೆಯಲ್ಲಿ ಸಾವನ್ನಪ್ಪಿದವರೆಲ್ಲಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಉಕ್ರೇನ್‌ ಮಿಲಿಟರಿ ಕೈಗೆ ಸಿಕ್ಕಿಹಾಕಿಕೊಳ್ಳುವ ಪರಿಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಸ್ಪಷ್ಟ ನಿರ್ದೇಶನವಿರುವ ಸೂಚನಾ ಪತ್ರವು ಮೃತ ಉತ್ತರ ಕೊರಿಯಾದ ಯೋಧರ ಬಳಿ ಪತ್ತೆಯಾಗಿದೆ. ಇನ್ನೇನು ಉಕ್ರೇನ್‌ ಯೋಧರ ಕೈಗೆ ಸಿಕ್ಕಿಹಾಕಿಕೊಳ್ಳಬೇಕು ಎಂಬ ಪರಿಸ್ಥಿತಿಯಲ್ಲಿ ಉತ್ತರ ಕೊರಿಯಾದ ಯೋಧನೊಬ್ಬ ತಮ್ಮ ಅಧ್ಯಕ್ಷ ಜನರಲ್‌ ಕಿಮ್‌ ಜಾಂಗ್‌ ಉನ್‌ ಹೆಸರು ಹೇಳಿ ಹ್ಯಾಂಡ್‌ ಗ್ರೆನೇಡ್‌ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದ. ಅದಕ್ಕೂ ಮೊದಲೇ ಆತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು ಎಂದು ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆ ಹೇಳಿದೆ.

1950-53ರ ಕೊರಿಯನ್‌ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಉತ್ತರ ಕೊರಿಯಾದ ಸೈನಿಕರು ದೊಡ್ಡ ಸಂಖ್ಯೆಯಲ್ಲಿ ಯುದ್ಧಭೂಮಿಗೆ ಇಳಿದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ