ಹೈದರಾಬಾದ್: ತೆಲಂಗಾಣದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದಂತೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಆರಂಭಿಸಿರುವುದು ಹೈದರಾಬಾದ್ ಮೆಟ್ರೋ ರೈಲು ಯೋಜನೆಗೆ ಭರ್ಜರಿ ಹೊಡೆತ ಕೊಟ್ಟಿದೆ. ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತವಾಗಿರುವ ಹಿನ್ನೆಲೆಯಲ್ಲಿ ಬಂಡವಾಳ ತೊಡಗಿಸಿರುವ ಎಲ್ ಅಂಡ್ ಟಿ ಸಂಸ್ಥೆ ಯೋಜನೆಯಿಂದಲೇ ನಿರ್ಗಮಿಸಲು ಮುಂದಾಗಿದೆ.
2023ರ ನವೆಂಬರ್‌ನಲ್ಲಿ ಹೈದರಾಬಾದ್ ಮೆಟ್ರೋ ರೈಲಿನಲ್ಲಿ 5.50 ಲಕ್ಷ ಜನರು ಪ್ರಯಾಣ ಮಾಡಿದ್ದರು. ಅದು ಗರಿಷ್ಠ ಪ್ರಮಾಣವಾಗಿತ್ತು. ಆದರೆ ಡಿಸೆಂಬರ್‌ನಲ್ಲಿ ಉಚಿತ ಬಸ್ ಪ್ರಯಾಣ ಯೋಜನೆ ಆರಂಭವಾದ ಬಳಿಕ ಈಗ ಪ್ರಯಾಣಿಕರ ಸಂಖ್ಯೆ 4.80 ಲಕ್ಷಕ್ಕೆ ಕುಸಿದಿದೆ. ಹೀಗಾಗಿ ಮೆಟ್ರೋದಲ್ಲಿನ ಪಾಲು ಮಾರಾಟ ಮಾಡಲು ಯೋಜನೆ ಮಾಡಲಾಗುತ್ತಿದೆ ಎಂದು ಎಲ್ ಅಂಡ್ ಟಿ ಕಂಪನಿಯ ಪೂರ್ಣಾವಧಿ ನಿರ್ದೇಶಕ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಆರ್. ಶಂಕರ ರಾಮನ್ ತಿಳಿಸಿದ್ದಾರೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಆರಂಭಿಸಿದ ಬಳಿಕ ಮೆಟ್ರೋದಿಂದ ಮಹಿಳೆಯರು ದೂರವಾಗಿದ್ದಾರೆ. ಈ ನಡುವೆ, ಪುರುಷರು ಮೆಟ್ರೋದತ್ತ ಬರುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.