ತಿರುಪತಿ: ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಕೊನೆಯ ಆಸೆಯಂತೆ ಅವರ ಕುಟುಂಬಸ್ಥರು ತಿರುಪತಿ ತಿರುಮಲ ದೇವಸ್ಥಾನಕ್ಕೆ 10 ಲಕ್ಷ ರು. ದೇಣಿಗೆ ನೀಡಿದ್ದಾರೆ. ‘ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ 10 ಲಕ್ಷ ರು. ದೇಣಿಗೆ ನೀಡಬೇಕೆಂಬುದು ನನ್ನ ಬಯಕೆ’ ಎಂದು ಉಯಿಲಿನಲ್ಲಿ ಲತಾ ಬಯಸಿದ್ದರು. ಇದನ್ನು ಶಿರಸಾ ವಹಿಸಿ ಪಾಲಿಸಿದ ಅವರ ಕುಟುಂಬಸ್ಥರು, 10 ಲಕ್ಷ ರು. ದೇಣಿಗೆಯನ್ನು ಟಿಟಿಡಿಯ ಟ್ರಸ್ಟಿ ಮಿಲಿಂದ್ ಕೇಶವ್ ನಾರ್ವೇಕರ್ ಅವರಿಗೆ ಚೆಕ್ ಕೊಡುವ ಮೂಲಕ ಟಿಟಿಡಿಗೆ ತಲುಪಿಸಿದ್ದಾರೆ. ತಿಮ್ಮಪ್ಪನ ಪರಮ ಭಕ್ತೆಯಾಗಿದ್ದ ಮಂಗೇಷ್ಕರ್, ತಿರುಮಲದ ಆಸ್ಥಾನ ಗಾಯಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಟಿಟಿಡಿ ಹೊರತಂದಿದ್ದ ‘ಅಣ್ಣಮ್ಮಯ್ಯ ಸ್ವರ ಲತಾರ್ಚನ’ ಗಾಯನ ಸಿಡಿಗೆ ತಮ್ಮ ಸುಶ್ರಾವ್ಯ ಧ್ವನಿ ನೀಡಿ ಎಲ್ಲರಲ್ಲಿ ಭಕ್ತಿ ಮೇಳೈಸುವಂತೆ ಮಾಡಿದ್ದರು.