ನವದೆಹಲಿ/ಮುಂಬೈ: ಚುನಾವಣೆಗೆ ಇನ್ನು ಕೇವಲ 20-25 ದಿನಗಳಿರುವಂತೆ ಮುಂಬೈ ಉತ್ತರ ಕೇಂದ್ರ ಕ್ಷೇತ್ರದ ಅಭ್ಯರ್ಥಿಯನ್ನು ಬಿಜೆಪಿ ಬದಲಿಸಿದೆ. ಸತತ 2 ಬಾರಿಯ ಹಾಲಿ ಸಂಸದೆ ಪೂನಂ ಮಹಾಜನ್ ಅವರ ಬದಲಿಗೆ 26/11 ಮುಂಬೈ ದಾಳಿ ರೂವಾರಿ ಕಸಬ್‌ಗೆ ಗಲ್ಲು ಶಿಕ್ಷೆ ಕೊಡಿಸಿದ್ದ ಖ್ಯಾತ ವಕೀಲ ಉಜ್ವಲ್ ನಿಕಂ ಅವರಿಗೆ ಟಿಕೆಟ್ ನೀಡಿದೆ.ಕ್ಷೇತ್ರದಲ್ಲಿ ಹಾಲಿ ಸಂಸದೆ ಪೂನಂ ಮಹಾಜನ್ ಕುರಿತು ಮರುಸ್ಪರ್ಧೆಯ ಕುರಿತು ಅಪಸ್ವರ ವ್ಯಕ್ತವಾದ ಕಾರಣ ಬಿಜೆಪಿ ಅಭ್ಯರ್ಥಿಯನ್ನು ಬದಲಿಸಿದೆ.
ಮುಂಬೈ ಉತ್ತರ ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಯನ್ನು ಪ್ರಕಟಿಸಿದ್ದು, ಧಾರಾವಿ ಶಾಸಕಿ ವರ್ಷಾ ಗಾಯಕವಾಡ್ ಅವರಿಗೆ ಮಣೆ ಹಾಕಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಕ್ಷೇತ್ರದಲ್ಲಿ ಜಿದ್ದಾಜಿದ್ದಿ ಏರ್ಪಡುವ ಸರ್ವಸಾಧ್ಯತೆಗಳು ಕಾಣಿಸಿವೆ. ಮುಂಬೈನಲ್ಲಿ ಮೇ.20ರಂದು ಲೋಕಸಭಾ ಚುನಾವಣೆ ನಡೆಯಲಿದೆ.
ಕಸಬ್‌ಗೆ ಗಲ್ಲು ಕೊಡಿಸಿದ್ದರು:
ಉಜ್ವಲ್ ನಿಕಂ ಅವರು ಬಾಂಬೆ ಹೈಕೋರ್ಟ್‌ನಲ್ಲಿ ಸರ್ಕಾರಿ ಅಭಿಯೋಜಕರಾಗಿ ಹಲವು ಉನ್ನತ ಸ್ತರದ ಪ್ರಕರಣಗಳಲ್ಲಿ ವಕೀಲಿಕೆ ನಡೆಸಿ ವಿಜಯ ಸಾಧಿಸಿದ್ದರು. ಪ್ರಮುಖವಾಗಿ ಮುಂಬೈನಲ್ಲಿ 1993ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣ, 26/11 ಮುಂಬೈ ದಾಳಿ ಪ್ರಕರಣದಲ್ಲಿ ಸಂತ್ರಸ್ತರ ಪರವಾಗಿ ವಾದಿಸಿ ಪಾಕ್ ಉಗ್ರ ಅಜ್ಮಲ್ ಕಸಬ್‌ಗೆ ಗಲ್ಲಿ ಶಿಕ್ಷೆ ಕೊಡಿಸಿದ್ದರು. ಅಲ್ಲದೆ. ಹಾಲಿ ಸಂಸದೆ ಪೂನಂ ತಂದೆಯಾಗಿದ್ದ ಹಿರಿಯ ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ಹತ್ಯೆ ಪ್ರಕರಣ, ಖ್ಯಾತ ಬಾಲಿವುಡ್ ನಟ ಗುಲ್ಶಾನ್ ಕುಮಾರ್ ಹತ್ಯೆ ಪ್ರಕರಣವೂ ಸೇರಿದಂತೆ ನೂರಾರು ಕ್ರಿಮಿನಲ್ ಕೇಸ್‌ಗಳನ್ನು ನಡೆಸಿದ ಅನುಭವ ಹೊಂದಿದ್ದಾರೆ.
ಪೂನಂ ತಂದೆಗೆ ನ್ಯಾಯ ದೊರಕಿಸಿದ್ದ ಉಜ್ವಲ್:ಉಜ್ವಲ್ ನಿಕಂ 2006ರಲ್ಲಿ ಹಾಲಿ ಸಂಸದೆ ಪೂನಂ ಮಹಾಜನ್ ತಂದೆ ಪ್ರಮೋದ್ ಮಹಾಜನ್ ಹತ್ಯೆಯ ಪ್ರಕರಣದಲ್ಲಿ ವಕೀಲಿಕೆ ಮಾಡಿ ಗೆಲುವು ಸಾಧಿಸಿದ್ದರು ಎಂಬುದು ಗಮನಾರ್ಹ. 2007ರಲ್ಲಿ ಅದರ ತೀರ್ಪು ಪ್ರಕಟವಾಗಿ ಹತ್ಯೆಯ ರೂವಾರಿಯಾಗಿದ್ದ ಪ್ರಮೋದ್ ತಮ್ಮ ಪ್ರವೀಣ್ ಮಹಾಜನ್‌ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.