ನವದೆಹಲಿ: ಜ್ಞಾನ ಮತ್ತು ಪರೀಕ್ಷೆ ಎರಡೂ ಬೇರೆ ಬೇರೆ. ಪರೀಕ್ಷೆಯೇ ಬದುಕು ಅಲ್ಲ. ವಿದ್ಯಾರ್ಥಿಗಳು ತಮಗೆ ತಾವೇ ಸವಾಲು ಹಾಕಿಕೊಳ್ಳಬೇಕು, ಹಿಂದಿನ ಪರೀಕ್ಷೆಗಿಂತ ಮುಂದಿನ ಬಾರಿ ಉತ್ತಮ ಸಾಧನೆಗೆ ಪ್ರಯತ್ನಿಸಬೇಕು. ನಾಯಕನಾದವನ ಕೆಲಸ ಇನ್ನೊಬ್ಬರ ತಪ್ಪನ್ನು ತಿದ್ದುವುದಲ್ಲ, ತನ್ನನ್ನು ತಾನು ಇತರರಿಗೆ ಮಾದರಿಯನ್ನಾಗಿ ಮಾಡುವುದು!
ಸಾಮಾನ್ಯವಾಗಿ ಟೌನ್ ಹಾಲ್‌ನಲ್ಲಿ ನಡೆಯುತ್ತಿದ್ದ ಪರೀಕ್ಷೆ ಪೇ ಚರ್ಚಾ ಕಾರ್ಯಕ್ರಮವನ್ನು ಇದೇ ಮೊದಲ ಬಾರಿಗೆ ಅನೌಪಚಾರಿಕವಾಗಿ ಪ್ರಕೃತಿಯ ನಡುವೆ ನಡೆಸಲಾಯಿತು. ದೆಹಲಿಯ ಸುಂದರ್ ನರ್ಸರಿಯಲ್ಲಿ ಆಹ್ಲಾದಕರ ವಾತಾವರಣದಲ್ಲಿ ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಸುಮಾರು 35 ಮಕ್ಕಳ ಜತೆಗೆ ಮೋದಿ ಚರ್ಚೆ ನಡೆಸಿದ್ದು, ಮಕ್ಕಳ ಪ್ರಶ್ನೆಗಳಿಗೆ ಅರ್ಥವಾಗುವ ರೀತಿಯಲ್ಲಿ ಉತ್ತರಿಸುವ ಪ್ರಯತ್ನ ನಡೆಸಿದರು.
ಒತ್ತಡ ನಿರ್ವಹಣೆ, ಓದಿನಾಚೆಗಿನ ಹವ್ಯಾಸಗಳು, ನಾಯಕತ್ವ ಹೀಗೆ ವಿವಿಧ ವಿಚಾರಗಳ ಕುರಿತು ಮಕ್ಕಳ ಜತೆಗೆ ಮೋದಿ ಅವರು ವಿದ್ಯಾರ್ಥಿಗಳ ಜತೆಗೆ ಹರಟಿದರು.ಸಮಯದ ಸದುಪಯೋಗ ಮತ್ತು ನಿರ್ವಹಣೆ ಕುರಿತು ವಿದ್ಯಾರ್ಥಿಗಳಿಗೆ ತಿಳಿಹೇಳಿದ ಅವರು, ‘ನಿಮ್ಮ ಸಮಯದ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಬದುಕಿನ ಮೇಲೆ ನಿಯಂತ್ರಣ ಸಾಧಿಸಿ, ಈ ಕ್ಷಣದಲ್ಲಿ ಬದುಕಿ, ಧನಾತ್ಮಕತೆಯನ್ನು ಹುಡುಕಿ, ನಿಮ್ಮ ಆರೈಕೆಗೂ ಆದ್ಯತೆ ನೀಡಿ’ ಎಂಬುದು ಸೇರಿ ಹಲವು ವಿಚಾರಗಳ ಕುರಿತು ಮಕ್ಕಳಿಗೆ ಪಾಠ ಮಾಡಿದರು. ಈ ವೇಳೆ ಚಿಣ್ಣರಿಗೆಲ್ಲಾ ಎಳ್ಳುಂಡೆ ಹಂಚುತ್ತಾ, ಪೋಷಕಾಂಶಗಳ ಮಹತ್ವದ ಕುರಿತು ಚರ್ಚಿಸಿದರು.
ನಾಯಕತ್ವದ ಕುರಿತೂ ಮಕ್ಕಳ ಜತೆಗೆ ಮಾತನಾಡಿ ಮೋದಿ, ನಾಯಕತ್ವ ಎಂಬುದು ಹೇರಲ್ಪಡಬಾರದು. ನಿಮ್ಮ ಸುತ್ತಮುತ್ತಲಿನ ಜನ ನಿಮ್ಮನ್ನು ಸ್ವೀಕರಿಸಬೇಕು. ಇದಕ್ಕಾಗಿ ನಿಮ್ಮನ್ನು ನೀವು ಬದಲಾಯಿಸಿಕೊಳ್ಳಬೇಕು. ನಾಯಕರಾಗಲು ಟೀಂ ವರ್ಕ್, ತಾಳ್ಮೆ ಮತ್ತು ನಂಬಿಕೆ ಗಳಿಕೆ ಅತೀ ಮುಖ್ಯ ಎಂದು ತಿಳಿಸಿದರು.
ಇದೇ ಸರಣಿಯ ಮುಂದಿನ ಕಾರ್ಯಕ್ರಮಗಳಲ್ಲಿ ಖ್ಯಾತ ನಟಿ ದೀಪಿಕಾ ಪಡುಕೋಣೆ, ಬಾಕ್ಸರ್ ಎಂ.ಸಿ.ಮೇರಿಕೋಮ್ ಮತ್ತು ಆಧ್ಯಾತ್ಮಿಕ ಗುರು ಸದ್ಗುರು ಅವರೂ ತಮ್ಮ ಜೀವನದ ವಿವಿಧ ಅನುಭವ, ಜ್ಞಾನವನ್ನು ಮಕ್ಕಳ ಜತೆಗೆ ಪರೀಕ್ಷಾ ಪೇ ಚರ್ಚಾ ವೇದಿಕೆಯಲ್ಲಿ ಹಂಚಿಕೊಳ್ಳಲಿದ್ದಾರೆ.