ಚಿರತೆಗಳ ಸಂಖ್ಯೆ: ದೇಶದಲ್ಲೇ ಕರ್ನಾಟಕ ನಂ.3

KannadaprabhaNewsNetwork |  
Published : Mar 01, 2024, 02:15 AM ISTUpdated : Mar 01, 2024, 08:09 AM IST
Snow leopards number 718 in India here is the list of states bsm

ಸಾರಾಂಶ

ದೇಶಾದ್ಯಂತ 2018-2022ರ 4 ವರ್ಷದ ಅವಧಿಯಲ್ಲಿ 1,022 ಚಿರತೆಗಳು ಹೆಚ್ಚಳವಾಗಿದ್ದು, 2022ರ ಅಂತ್ಯದಲ್ಲಿ ಸುಮಾರು 13,874 ಚಿರತೆಗಳಿವೆ ಎಂದು ‘ಭಾರತದಲ್ಲಿ ಚಿರತೆಗಳ ಸ್ಥಿತಿಗತಿ’ ಎಂಬ ಕೇಂದ್ರ ಪರಿಸರ ಸಚಿವಾಲಯದ ವರದಿ ತಿಳಿಸಿದೆ.

ನವದೆಹಲಿ: ದೇಶಾದ್ಯಂತ 2018-2022ರ 4 ವರ್ಷದ ಅವಧಿಯಲ್ಲಿ 1,022 ಚಿರತೆಗಳು ಹೆಚ್ಚಳವಾಗಿದ್ದು, 2022ರ ಅಂತ್ಯದಲ್ಲಿ ಸುಮಾರು 13,874 ಚಿರತೆಗಳಿವೆ ಎಂದು ‘ಭಾರತದಲ್ಲಿ ಚಿರತೆಗಳ ಸ್ಥಿತಿಗತಿ’ ಎಂಬ ಕೇಂದ್ರ ಪರಿಸರ ಸಚಿವಾಲಯದ ವರದಿ ತಿಳಿಸಿದೆ. 

ಇದೇ ವೇಳೆ, ದೇಶದಲ್ಲಿ ಚಿರತೆಗಳ ಸಂಖ್ಯೆಯಲ್ಲಿ ಕರ್ನಾಟಕ 1,879 ಚಿರತೆಗಳ ಮೂಲಕ 3ನೇ ಸ್ಥಾನ ಪಡೆದಿದ್ದರೆ, ಮಧ್ಯಪ್ರದೇಶ 3,907 ಚಿರತೆ ಮೂಲಕ ನಂ.1 ಹಾಗೂ ಮಹಾರಾಷ್ಟ್ರ 1985 ಚಿರತೆ ಮೂಲಕ ನಂ.2 ಸ್ಥಾನ ಪಡೆದಿವೆ.

ಈ ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್‌, ‘ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ನಮ್ಮ ಸಂರಕ್ಷಣಾ ಕಾರ್ಯಾಚರಣೆಯು ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯ ಎಂಬ ಧ್ಯೇಯದಲ್ಲಿ ಮುಂದೆ ಸಾಗಲಿದೆ. 

ವರದಿಯಲ್ಲಿ ತಿಳಿಸಿರುವಂತೆ ಸಂರಕ್ಷಿತ ಪ್ರದೇಶಗಳಾಚೆಗೂ ಸಹ ಚಿರತೆಗಳನ್ನು ನಾವು ರಕ್ಷಣೆ ಮಾಡಬೇಕಾದ ಅಗತ್ಯವಿದೆ’ ಎಂದು ತಿಳಿಸಿದರು.

ಎಲ್ಲೆಲ್ಲಿ ಎಷ್ಟು ಹೆಚ್ಚಳ?
ಈ ಅವಧಿಯಲ್ಲಿ ರಾಜ್ಯವಾರು ಮಧ್ಯಪ್ರದೇಶದಲ್ಲಿ 4 ವರ್ಷದಲ್ಲಿ (2018-22) 486 ಚಿರತೆಗಳ ಹೆಚ್ಚಳದೊಂದಿಗೆ 3,907 ಚಿರತೆಗಳಿದ್ದು ಮೊದಲ ಸ್ಥಾನದಲ್ಲಿದೆ. 

ನಂತರದ ಮಹಾರಾಷ್ಟ್ರದಲ್ಲಿ 295 ಚಿರತೆ ಹೆಚ್ಚಳದೊಂದಿಗೆ ಒಟ್ಟಾರೆ ಸಂಖ್ಯೆ 1985ಕ್ಕೆ ಏರಿಕೆಯಾಗಿ 2ನೇ ಸ್ಥಾನ ಗಳಿಸಿದೆ. ಹಾಗೆಯೇ ಕರ್ನಾಟಕದಲ್ಲಿ 96 ಹೆಚ್ಚಳವಾಗಿ ಒಟ್ಟಾರೆ 1879 ಚಿರತೆಗಳೊಂದಿಗೆ 3ನೇ ಸ್ಥಾನ ಮತ್ತು ತಮಿಳುನಾಡಿನಲ್ಲಿ 202 ಹೆಚ್ಚಳದೊಂದಿಗೆ ಒಟ್ಟಾರೆ 1070 ಚಿರತೆಗಳಿದ್ದು, ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿವೆ. 

ಪ್ರದೇಶವಾರು ಲೆಕ್ಕದಲ್ಲಿ ಮಧ್ಯಭಾಗ ಮತ್ತು ಪೂರ್ವವಲಯದಲ್ಲಿ ವಾರ್ಷಿಕ ಶೇ.1.5ರಷ್ಟು (749) ಹೆಚ್ಚಳ ಕಂಡುಬಂದಿದ್ದರೆ, ಶಿವಾಲಿಕ್‌ ಮತ್ತು ಗಂಗಾ ಅಧಿಮುಖಜಭೂಮಿಯಲ್ಲಿ ಚಿರತೆಗಳ ಸಂಖ್ಯೆಯಲ್ಲಿ ಶೇ.3.9ರಷ್ಟು (144) ಇಳಿಕೆಯಾಗಿದೆ ಎಂದು ಪರಿಸರ ಸಚಿವಾಲಯ ತಿಳಿಸಿದೆ.

ರಕ್ಷಿತಾರಣ್ಯಗಳಲ್ಲಿ ಶ್ರೀಶೈಲದ ನಾಗಾರ್ಜುನಸಾಗರ ಹೆಚ್ಚಿನ ಸಂಖ್ಯೆಯಲ್ಲಿ ಚಿರತೆಗಳನ್ನು ಹೊಂದಿದ್ದು, ಮಧ್ಯಪ್ರದೇಶದ ಪನ್ನಾ ಮತ್ತು ಸಾತ್ಪುರ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. 

ಈ ಸಮೀಕ್ಷೆಯನ್ನು 18 ಹುಲಿ ಸಂರಕ್ಷಿತಾರಣ್ಯಗಳ 6 ಲಕ್ಷಕ್ಕೂ ಅಧಿಕ ಕಿ.ಮೀ ಪ್ರದೇಶದಲ್ಲಿ ಮಾಡಲಾಗಿದೆ. ಈ ಅವಧಿಯಲ್ಲಿ 32,803 ಕಡೆ ಕ್ಯಾಮರಾ ಅಳವಡಿಸಿದ್ದು, ಅವುಗಳಿಂದ ಚಿರತೆಗಳ 85,488 ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ. 

ಜೊತೆಗೆ ವರದಿಯಲ್ಲಿನ ಅಂಕಿ ಅಂಶಗಳು ತಿಳಿಸುವಂತೆ ರಕ್ಷಿತಾರಣ್ಯಗಳ ಆಚೆಗೂ ಚಿರತೆಗಳ ಸಂರಕ್ಷಣೆಗೆ ಎಲ್ಲರೂ ಒಟ್ಟಾಗಿ ಕೈ ಜೋಡಿಸಬೇಕಿದೆ ಎಂದು ಸಮೀಕ್ಷೆ ಉಲ್ಲೇಖಿಸಿದೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ