ಇಸ್ಲಾಮಾಬಾದ್: ನೆರೆಮನೆಯವರ ಕಚ್ಚಲು ಇಟ್ಟುಕೊಂಡ ಹಾವು ಸಾಕಿದವರಿಗೇ ಬುಸುಗುಟ್ಟುವಂತೆ, ಪಾಕ್ ಸರ್ಕಾರದ ಕೃಪಾಪೋಷಿತ ಉಗ್ರಸಂಘಟನೆ ಲಷ್ಕರ್-ಎ-ತೊಯ್ಬಾ ಇದೀಗ ತನ್ನ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿದೆ.
ಸಂಘಟನೆಯ ಹಿರಿಯ ಕಮಾಂಡರ್ ಮೊಹಮ್ಮದ್ ಅಶ್ಫಾಕ್ ರಾಣಾ ವೇದಿಕೆಯೊಂದರಲ್ಲಿ ಬಹಿರಂಗವಾಗಿ ಪಾಕ್‌ನಲ್ಲಿನ ದುರಾಡಳಿತ ಟೀಕಿಸಿದ್ದಾನೆ.
ವಿಡಿಯೋದಲ್ಲಿ ರಾಣಾ, ‘ಪಾಕ್‌ನ ಪಂಜಾಬ್ ಪ್ರಾಂತ್ಯವನ್ನು ಬಲೂಚಿಸ್ತಾನದಲ್ಲಿರುವಂತಹ ದುಃಸ್ಥಿತಿಗೆ ದೂಡಲಾಗಿದೆ. ಅಧಿಕಾರದಲ್ಲಿರುವವರು ದೇಶವನ್ನು ಲೂಟಿ ಮಾಡುತ್ತಿದ್ದಾರೆ. ಅದಕ್ಷತೆ ಮತ್ತು ನೈತಿಕ ಕುಸಿತ ತಾಂಡವವಾಡುತ್ತಿದೆ. ನಮ್ಮ ಸರ್ಕಾರ ಸಾಲ ತೆಗೆದುಕೊಳ್ಳದೆ ಇರುವ ದೇಶವೇ ಇಲ್ಲ. ಪಾಕ್‌ನಲ್ಲಿ ಹುಟ್ಟುವ ಪ್ರತಿ ಮಗುವಿನ ತಲೆಯ ಮೇಲೆ ಲಕ್ಷಗಟ್ಟಲೆ ಸಾಲವಿದೆ. ಭ್ರಷ್ಟಾಚಾರ ಇಲ್ಲವೆಂಬ ಸರ್ಕಾರದ ವಾದವನ್ನು ಒಂದೊಮ್ಮೆ ಒಪ್ಪಿದರೂ, ಸಾಲದ ಮೊತ್ತ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಒಂದೊಮ್ಮೆ ಅದನ್ನು ಸರಿಯಾಗಿ ಬಳಸಿಕೊಂಡಿದ್ದರೆ ನಮ್ಮ ದೇಶ ಸೌದಿ, ಬ್ರಟಿನ್ ಅಥವಾ ಸ್ಪೇನ್‌ಗಿಂತ ಸುಂದರ ದೇಶವಾಗಬಹುದಿತ್ತು’ ಎಂದು ರಾಣಾ ಅಸಮಾಧಾನ ವ್ಯಕ್ತಪಡಿಸಿದ್ದಾನೆ.