ಕಾಶ್ಮೀರ: 7 ಜನರ ಕೊಂದಿದ್ದ ಉಗ್ರನ ಹತ್ಯೆ

KannadaprabhaNewsNetwork |  
Published : Dec 04, 2024, 12:32 AM IST
ಅಹ್ಮದ್‌ | Kannada Prabha

ಸಾರಾಂಶ

ಜಮ್ಮು-ಕಾಶ್ಮೀರದ ಗಂದೇರ್‌ಬಾಲ್‌ನಲ್ಲಿ ಅ.20ರಂದು ಖಾಸಗಿ ಕಂಪನಿಯ ವಸತಿ ಶಿಬಿರದಲ್ಲಿ 6 ಕಾರ್ಮಿಕರು ಮತ್ತು ವೈದ್ಯನ ಹತ್ಯೆಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿವೆ.

ಪಿಟಿಐ ಶ್ರೀನಗರ

ಜಮ್ಮು-ಕಾಶ್ಮೀರದ ಗಂದೇರ್‌ಬಾಲ್‌ನಲ್ಲಿ ಅ.20ರಂದು ಖಾಸಗಿ ಕಂಪನಿಯ ವಸತಿ ಶಿಬಿರದಲ್ಲಿ 6 ಕಾರ್ಮಿಕರು ಮತ್ತು ವೈದ್ಯನ ಹತ್ಯೆಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿವೆ.

‘ಕುಲ್ಗಾಂ ನಿವಾಸಿ ಆಗಿದ್ದ ಜುನೈದ್ ಅಹ್ಮದ್ ಭಟ್ ಎಂಬ ಭಯೋತ್ಪಾದಕ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದವನು. ಈತ ಅವರು ಗಗಾಂಗೀರ್, ಗಂದೇರ್‌ಬಾಲ್‌ ಮತ್ತು ಇತರ ಸ್ಥಳಗಳಲ್ಲಿ ನಡೆದ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದ. ಎ ದರ್ಜೆ ಉಗ್ರ ಈತನಾಗಿದ್ದ. ಇವನ ಹತ್ಯೆಯಿಂದ ಭದ್ರತಾ ಪಡೆಗಳಿಗೆ ಮಹತ್ವದ ಯಶಸ್ಸು ಸಿಕ್ಕಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗಂದೇರ್ಬಾಲ್ ದಾಳಿಯ ಸಮಯದಲ್ಲಿ ಎಕೆ ರೈಫಲ್ ಅನ್ನು ಹೊತ್ತೊಯ್ಯುವ ವೇಳೆ ಸಿಸಿಟಿವಿಯಲ್ಲಿ ಭಟ್‌ ಕಾಣಿಸಿಕೊಂಡಿದ್ದ.

ಕಾಶ್ಮೀರದ ದಚಿಗಂ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಗುಪ್ತಚರ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಈತನ ಶೋಧ ಕಾರ್ಯ ನಡೆಸಿದ್ದವು. ಈ ವೇಳೆ ಸೈನಿಕರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಭದ್ರತಾ ಪಡೆ ನಡೆಸಿದ ಪ್ರತಿದಾಳಿಯಲ್ಲಿ ಭಟ್‌ ಹತನಾಗಿದ್ದಾನೆ ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ.

‘ಈ ಯಶಸ್ವಿ ಕಾರ್ಯಾಚರಣೆಗೆ ಚಿನಾರ್‌ ವಾರಿಯರ್ಸ್‌, ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಲೆಫ್ಟಿನೆಂಟ್‌ ಜನರಲ್‌ ಸುಚಿಂದ್ರ ಕುಮಾರ್‌ ಅಭಿನಂದಿಸಿದ್ದಾರೆ’ ಎಂದು ಉತ್ತರ ಸೇನಾ ಕಮಾಂಡ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ಮಾಜಿ ಪ್ರಿಯಕರ ಸೇರಿ ಇಬ್ಬರ ಕೊಂದ ನಟಿ ನರ್ಗೀಸ್‌ ಫಕ್ರಿ ಸೋದರಿ ಬಂಧನನ್ಯೂಯಾರ್ಕ್‌: ಮಾಜಿ ಪ್ರಿಯಕರ ಸೇರಿ ಇಬ್ಬರನ್ನು ಬೆಂಕಿ ಹಚ್ಚಿ ಹತ್ಯೆ ಮಾಡಿದ ಆರೋಪದ ಮೇರೆಗೆ ಖ್ಯಾತ ಬಾಲಿವುಡ್‌ ನಟಿ ನರ್ಗೀಸ್‌ ಫಕ್ರೀ ಸಹೋದರಿ ಅಲಿಯಾ ಅವರನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ.ನ್ಯೂಯಾರ್ಕ್‌ನ ಕ್ವೀನ್ಸ್‌ ಸಮೀಪದ ಜಮೈಕಾದಲ್ಲಿರುವ ಗ್ಯಾರೇಜ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಅಲಿಯಾಳ ಮಾಜಿ ಪ್ರಿಯಕರ ಎಡ್ವರ್ಡ್‌ ಜಾಕೊಬ್ಸ್‌(35) ಮತ್ತು ಆತನ ಗೆಳತಿ ಅನಸ್ತಾಶಿಯಾ(33) ಮೃತಪಟ್ಟಿದ್ದಾರೆ. ನ.23ರಂದು ಈ ಘಟನೆ ನಡೆದಿದ್ದು, ಅಲಿಯಾಳ ಜತೆಗಿನ ಪ್ರೇಮ ಸಂಬಂಧ ಮುರಿದುಬಿದ್ದ ಬಳಿಕ ಜಾಕೋಬ್ಸ್ ಗ್ಯಾರೇಜ್‌ಗೆ ಬೆಂಕಿ ಹಚ್ಚಿ ಈ ಕೃತ್ಯ ಎಸಗಿದ್ದಾಳೆ ಎಂದು ಪ್ರಾಸಿಕ್ಯೂಟರ್‌ ಆರೋಪಿಸಿದ್ದಾರೆ.

ಅಗ್ನಿ ದುರಂತ ಸಂಭವಿಸುವ ಮೊದಲು ಜಾಕೋಬ್ಸ್‌ ಜತೆಗೆ ಆಲಿಯಾ ಗಲಾಟೆ ಮಾಡಿದ್ದಳು, ನೀವೆಲ್ಲ ಒಂದು ದಿನ ಸಾಯ್ತೀರಿ ಎಂದು ಧಮಕಿ ಕೂಡ ಹಾಕಿದ್ದಳು ಎಂದು ಹೇಳಲಾಗಿದೆ. ಜಾಕೋಬ್ಸ್ ಮತ್ತು ಆಲಿಯಾ ಸಂಬಂಧ ವರ್ಷದ ಹಿಂದೆ ಮುರಿದುಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಆಕೆ ಖಿನ್ನತೆಗೆ ಜಾರಿದ್ದಳು ಎನ್ನಲಾಗಿದೆ.

ನಾನು ನಿವೃತ್ತಿ ಆಗುತ್ತಿಲ್ಲ, ಬ್ರೇಕ್ ಅಷ್ಟೆ: ವಿಕ್ರಾಂತ್‌ ಮೈಸಿ ಸ್ಪಷ್ಟನೆ

ನವದೆಹಲಿ: ನಟ ವಿಕ್ರಾಂತ್‌ ಮೈಸಿ ಅವರು, ‘ನಾನು ನಿವೃತ್ತಿ ಆಗುತ್ತಿಲ್ಲ. ಇದರ ಬದಲು ಚಿತ್ರರಂಗದಿಂದ ಬ್ರೇಕ್‌ ಪಡೆಯುತ್ತಿದ್ದೇನಷ್ಟೇ. ನನ್ನ ಸಂದೇಶವನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.ಸೋಮವಾರ ಹೇಳಿಕೆ ನೀಡಿದ್ದ ಅವರು, ‘ಮನೆಗೆ ಹಿಂದಿರುಗಲು ಇದು ಸೂಕ್ತ ಸಮಯ. 2025ರಲ್ಲಿ ಕೊನೆಯದಾಗಿ ಪರಸ್ಪರ ಭೇಟಿಯಾಗೋಣ. ಎರಡು ಸಿನಿಮಾಗಳು ಮತ್ತು ಹಲವು ವರ್ಷಗಳ ನೆನಪುಗಳು ನನ್ನೊಂದಿಗೆ ಇವೆ. ಎಲ್ಲರಿಗೂ ಧನ್ಯವಾದ’ ಎಂದಿದ್ದರು. ಆಗ 2025ರಲ್ಲಿ ಬಿಡುಗಡೆ ಆಗುವ ಚಿತ್ರವೇ ಕೊನೆಯ ಸಿನಿಮಾ ಎಂದು ವಿಶ್ಲೇಷಿಸಲಾಗಿತ್ತು.

ಆದರೆ ಇದಕ್ಕ ಮಂಗಳವಾರ ಸವರು ಸ್ಪಷ್ಟನೆ ನೀಡಿ, ‘ಸದ್ಯಕ್ಕೆ ನಾನು ಸುಸ್ತಾಗಿದ್ದೇನಷ್ಟೇ. ಬ್ರೇಕ್‌ ಪಡೆಯುತ್ತಿದ್ದೇನೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಮಹೀಂದ್ರಾಗೆ ಇಂಡಿಗೋ ಏರ್‌ಲೈನ್ಸ್‌ ಟ್ರೇಡ್‌ಮಾರ್ಕ್‌ ಉಲ್ಲಂಘನೆ ನೋಟಿಸ್‌

ನವದೆಹಲಿ: ದೇಶದ ದೊಡ್ಡ ವಿಮಾನಯಾನ ಕಂಪನಿ ಇಂಡಿಗೋ ತನ್ನ ಕೋಡ್‌ ‘6ಇ’ ವಿಚಾರವಾಗಿ ವಾಹನ ತಯಾರಿಕಾ ಕಂಪನಿ ಮಹೀಂದ್ರಾಗೆ ಲೀಗಲ್‌ ನೋಟಿಸ್‌ ನೀಡಿದೆ.ಮಹೀಂದ್ರಾ ಕಂಪನಿಯು ಫೆಬ್ರವರಿಯಲ್ಲಿ ಹೊಸ ಎಲೆಕ್ಟ್ರಿಕ್‌ ಕಾರು ‘ಬಿಇ 6ಇ’ ಲಾಂಚ್‌ ಮಾಡಲು ಸಿದ್ಧವಾಗಿದ್ದು, ಇದರಲ್ಲಿ ‘6ಇ’ ಬಳಕೆಯಾಗಿದೆ. ‘6ಇ’ಯನ್ನು ಇಂಡಿಗೋ ವಿಮಾನ ಬಳಸುತ್ತಿರುವ ಕಾರಣ ಮಹೀಂದ್ರಾ ಕಂಪನಿ ಟ್ರೇಡ್‌ಮಾರ್ಕ್‌ ಉಲ್ಲಂಘಿಸಿದೆ ಎಂದು ವಿಮಾನಯಾನ ಕಂಪನಿ ದೆಹಲಿ ಹೈಕೋರ್ಟ್‌ಗೆ ದಾವೆ ಹೂಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಹೀಂದ್ರಾ, ಇಂಡಿಗೋದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ‘6ಇ’ ಜತೆ ‘ಬಿಇ’ ಸೇರಿರುವ ಕಾರಣ ನಮ್ಮ ಕಾರಿನ ಹೆಸರಿನಿಂದ ಇಂಡಿಗೋ ಟ್ರೇಡ್‌ ಮಾರ್ಕ್‌ ಉಲ್ಲಂಘನೆಯಾಗುವುದಿಲ್ಲ ಎಂದು ಹೇಳಿದೆ.

ಈ ಮೊದಲೂ ಸಹ ಇಂಡಿಗೋ ಟಾಟಾ ಕಂಪನಿಯ ‘ಇಂಡಿಗೋ’ ಕಾರು ವಿಚಾರವಾಗಿ ಕೋರ್ಟ್‌ ಮೆಟ್ಟಿಲೇರಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಭಾರತಕ್ಕೀಗ ಮೆಕ್ಸಿಕೋ ಶೇ.50 ತೆರಿಗೆ ಹೊಡೆತ
ಮೋದಿ-ಪುಟಿನ್‌ ಸೆಲ್ಫಿ ತೋರಿಸಿ ಟ್ರಂಪ್‌ ವಿರುದ್ಧ ಸಂಸದೆಯ ಕಿಡಿ