ಎಲ್‌ಐಸಿ ನೌಕರರ ವೇತನ ಶೇ.17 ಹೆಚ್ಚಳ: ಎನ್‌ಪಿಎಸ್‌ ಪಾವತಿ ಪ್ರಮಾಣವೂ ಏರಿಕೆ

KannadaprabhaNewsNetwork | Updated : Mar 16 2024, 11:27 AM IST

ಸಾರಾಂಶ

ಆಗಸ್ಟ್‌ 2022ರಿಂದ ಪೂರ್ವಾನ್ವಯವಾಗುವಂತೆ ವೇತನ ಹೆಚ್ಚಳವನ್ನು ಜಾರಿ ಮಾಡಲು ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ.

ನವದೆಹಲಿ: ಲೋಕಸಭಾ ಚುನಾವಣೆಗೆ ಕೆಲವೇ ದಿನಗಳಿರುವಂತೆ ಭಾರತೀಯ ಜೀವವಿಮಾ ನಿಗಮದ ನೌಕರರ ವೇತನ ಶೇ.17ರಷ್ಟು ಹೆಚ್ಚಳವಾಗಿದೆ. 

ಈ ವೇತನ ಹೆಚ್ಚಳವನ್ನು ಆಗಸ್ಟ್‌ 2022ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ.ಈ ವೇತನ ಪರಿಷ್ಕರಣೆಯಿಂದ ಎಲ್‌ಐಸಿಯಲ್ಲಿ ಕೆಲಸ ಮಾಡುತ್ತಿರುವ 1.1 ಲಕ್ಷ ನೌಕರರಿಗೆ ಲಾಭವಾಗಲಿದೆ. 

ಇದರಿಂದ ಸಂಸ್ಥೆಗೆ ವಾರ್ಷಿಕ 4000 ಕೋಟಿ ರು. ಹೆಚ್ಚುವರಿ ಹೊರೆ ಬೀಳಲಿದೆ. ಇದರ ಜೊತೆಗೆ 2010, ಏ.1ರ ಬಳಿಕ ಕೆಲಸಕ್ಕೆ ಸೇರಿ ಹೊಸ ಪಿಂಚಣಿ ಪದ್ಧತಿಯಡಿಯಲ್ಲಿ ಬರುವ 24 ಸಾವಿರ ಸಿಬ್ಬಂದಿಯ ಸ್ವಯಂ ಕೊಡುಗೆಯ ಮಿತಿಯನ್ನು ಶೇ.10ರಿಂದ ಶೇ.14ಕ್ಕೆ ಹೆಚ್ಚಳ ಮಾಡಲಾಗಿದೆ. 

ಇದರ ಜೊತೆಗೆ 30 ಸಾವಿರ ಪಿಂಚಣಿದಾರರಿಗೆ ಮತ್ತು ಪಿಂಚಣಿದಾರರ ಕುಟುಂಬಸ್ಥರಿಗೆ ಒಂದು ಬಾರಿಯ ಎಕ್ಸ್‌ ಗ್ರೇಷಿಯಾ ಹಣವನ್ನು ಸಂದಾಯ ಮಾಡಲು ಕೇಂದ್ರ ಸರ್ಕಾರ ಸಮ್ಮತಿಸಿದೆ.ಇದಕ್ಕೂ ಮೊದಲು ಬ್ಯಾಂಕ್‌ ನೌಕರರ ವೇತನವನ್ನು ಶೇ.17ರಷ್ಟು ಏರಿಕೆ ಮಾಡಲು ಬ್ಯಾಂಕ್‌ಗಳ ಒಕ್ಕೂಟ ಸಮ್ಮತಿಸಿತ್ತು.

Share this article