ವಾರಾಣಸಿ: ಅಯೋಧ್ಯೆಯಲ್ಲಿ ಭಕ್ತರು ಬಿಟ್ಟುಹೋದ ಪಾದರಕ್ಷೆಗಳು ದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಿದ ಬೆನ್ನಲ್ಲೇ ಭಕ್ತರಿಂದ ತುಂಬಿ ತುಳುಕುತ್ತಿರುವ ವಾರಾಣಸಿ (ಕಾಶಿ)ಯಲ್ಲೂ ಅದೇ ಸಮಸ್ಯೆಯಾಗಿ ಕಾಡಿದೆ. ನಿತ್ಯವೂ ಕಾಶಿ ವಿಶ್ವನಾಥ ಮಂದಿರದ ಆಸುಪಾಸಿನಿಂದ 2 ಲಾರಿ ಲೋಡ್‌ಗಳಷ್ಟು ಪಾದರಕ್ಷೆಗಳನ್ನು ಕಸದ ಗುಂಡಿಗೆ ಎಸೆಯಲಾಗುತ್ತಿದೆ.
ಕುಂಭಮೇಳ ಆರಂಭದ ಬಳಿಕ ಪ್ರಯಾಗ್‌ರಾಜ್‌ನಿಂದ ಭಕ್ತರು ಅಯೋಧ್ಯೆ ಮತ್ತು ವಾರಾಣಸಿಗೆ ಭೇಟಿ ನೀಡುವುದು ಹೆಚ್ಚಾಗಿದೆ. ಆದರೆ ಕಾಶಿ ದೇಗುಲಕ್ಕೆ ಪ್ರವೇಶ ಹಾದಿಗಳು ಅಷ್ಟೇನು ವಿಶಾಲವಾಗಿ ಇಲ್ಲದ ಕಾರಣ ದೇಗುಲದ ಪ್ರವೇಶ ದ್ವಾರ ಸೇರಿದಂತೆ ರಸ್ತೆಗಳಲ್ಲೇ ಪಾದರಕ್ಷೆ ಬಿಟ್ಟು ಭಕ್ತರು ದೇವರ ದರ್ಶನಕ್ಕೆ ತೆರಳುತ್ತಿದ್ದಾರೆ.
ಆದರೆ ನಿತ್ಯವೂ ಲಕ್ಷಾಂತರ ಜನರ ಆಗಮನ ಹಿನ್ನೆಲೆಯಲ್ಲಿ, ಭಕ್ತರು ದೇವರ ದರ್ಶನ ಪಡೆದು ಹೊರಗೆ ಬರುವ ವೇಳೆ ಅವರ ಪಾದರಕ್ಷೆಗಳು ಒಂದೊಂದು ಒಂದು ಕಡೆ ಚದುರಿ ಹೋಗಿ ಸಮಸ್ಯೆ ಎದುರಾಗುತ್ತಿದೆ. ಇನ್ನು ಕೆಲವು ಸಂದರ್ಭದಲ್ಲಿ ಎಲ್ಲಿ ಬಿಟ್ಟಿದ್ದೀವಿ ಎಂದು ತಿಳಿಯದೇ ಭಕ್ತರು ಚಪ್ಪಲಿ ಹಾಗೆಯೇ ಬಿಟ್ಟು ಹೋಗುತ್ತಿದ್ದಾರೆ.
2 ಲೋಡ್‌ನಷ್ಟು ಚಪ್ಪಲಿ:
ಪರಿಣಾಮ ದೇಗುಲದ ಆಸುಪಾಸಿನಲ್ಲಿ ನಿತ್ಯವೂ ಭಾರೀ ಪ್ರಮಾಣದಲ್ಲಿ ಪಾದರಕ್ಷೆ ಹಾಗೆಯೇ ಉಳಿದುಹೋಗುತ್ತಿದೆ. ಹೀಗಾಗಿ ಪಾಲಿಕೆ ಸಿಬ್ಬಂದಿ ತಡರಾತ್ರಿ 12 ಗಂಟೆಯಿಂದ 2 ಗಂಟೆ ಅವಧಿಯಲ್ಲಿ ಬಂದು ಉಳಿದ ಪಾದರಕ್ಷೆ ಒಟ್ಟುಗೂಡಿಸಿ ಕಸ ಸಂಗ್ರಹ ಪ್ರದೇಶದಲ್ಲಿ ಎಸೆಯುತ್ತಿದ್ದಾರೆ. ಹೀಗೆ ನಿತ್ಯವೂ 2 ಲಾರಿ ಲೋಡ್‌ಗಳಷ್ಟು ಪಾದರಕ್ಷೆ ಸಂಗ್ರಹವಾಗುತ್ತಿದೆ ಎಂದು ಪಾಲಿಕೆ ಸಿಬ್ಬಂದಿ ಹೇಳಿದ್ದಾರೆ.
ಕಾಶಿಯಲ್ಲೇಕೆ ಚಪ್ಪಲಿ ಸಮಸ್ಯೆ
- ಭಕ್ತರು ಚಪ್ಪಲಿ ಬಿಡಲು ವಿಶ್ವನಾಥ ದೇಗುಲ ಹೊರಗೆ ಸೂಕ್ತ ವ್ಯವಸ್ಥೆ ಇಲ್ಲ
- ಎಲ್ಲೆಲ್ಲೋ ಚಪ್ಪಲಿ ಬಿಟ್ಟು ದೇಗುಲ ಪ್ರವೇಶ । ಮರಳಿದಾಗ ಚಪ್ಪಲಿ ಚೆಲ್ಲಾಪಿಲ್ಲಿ
- ವಾಪಸು ಬಂದಾಗ ತಾವು ಬಿಟ್ಟು ಹೋದ ಚಪ್ಪಲಿ ಗುರುತು ಪತ್ತೆಯೇ ಸಮಸ್ಯೆ
- ಹೀಗಾಗಿ ಚಪ್ಪಲಿ ಅಲ್ಲೇ ಬಿಟ್ಟು ತೆರಳುವ ಭಕ್ತರು, ಹೀಗಾಗಿ ರಾಶಿ ಚಪ್ಪಲಿ ಬಾಕಿ