ಮಹಾ ಸರ್ಕಾರದ ಮೊದಲ ವಿಕೆಟ್‌ ಪತನ

KannadaprabhaNewsNetwork | Published : Mar 5, 2025 12:32 AM

ಸಾರಾಂಶ

ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಹಾರಾಷ್ಟ್ರದ ಬೀಡ್‌ ಜಿಲ್ಲೆಯಲ್ಲಿ ನಡೆದ ಸರ್‌ಪಂಚ್‌ ಒಬ್ಬರ ಹತ್ಯೆ ಪ್ರಕರಣ ಸಂಬಂಧ ಮಹಾರಾಷ್ಟ್ರದ ಆಹಾರ ಖಾತೆ ಸಚಿವ ಧನಂಜಯ್‌ ಮುಂಡೆ ರಾಜೀನಾಮೆ ನೀಡಿದ್ದಾರೆ. ಹತ್ಯೆ ಪ್ರಕರಣದಲ್ಲಿ ಮುಂಡೆ ಅವರ ಆಪ್ತ ವಾಲ್ಮೀಕಿ ಕರಾಡ್‌ ಪ್ರಮುಖ ಆರೋಪಿ ಎಂದು ಪೊಲೀಸರು ತನಿಖಾ ವರದಿಯಲ್ಲಿ ಹೇಳಿದ ಬೆನ್ನಲ್ಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮುಂಬೈ: ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಹಾರಾಷ್ಟ್ರದ ಬೀಡ್‌ ಜಿಲ್ಲೆಯಲ್ಲಿ ನಡೆದ ಸರ್‌ಪಂಚ್‌ ಒಬ್ಬರ ಹತ್ಯೆ ಪ್ರಕರಣ ಸಂಬಂಧ ಮಹಾರಾಷ್ಟ್ರದ ಆಹಾರ ಖಾತೆ ಸಚಿವ ಧನಂಜಯ್‌ ಮುಂಡೆ ರಾಜೀನಾಮೆ ನೀಡಿದ್ದಾರೆ. ಹತ್ಯೆ ಪ್ರಕರಣದಲ್ಲಿ ಮುಂಡೆ ಅವರ ಆಪ್ತ ವಾಲ್ಮೀಕಿ ಕರಾಡ್‌ ಪ್ರಮುಖ ಆರೋಪಿ ಎಂದು ಪೊಲೀಸರು ತನಿಖಾ ವರದಿಯಲ್ಲಿ ಹೇಳಿದ ಬೆನ್ನಲ್ಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇದರೊಂದಿಗೆ ಮಹಾರಾಷ್ಟ್ರದ ಬಿಜೆಪಿ- ಶಿವಸೇನೆ- ಎನ್‌ಸಿಪಿ ಸರ್ಕಾರದ ಮೊದಲ ವಿಕೆಟ್‌ ಪತನವಾದಂತಾಗಿದೆ. ಮುಂಡೆ ಅಜಿತ್‌ ಪವಾರ್‌ ಬಣದ ಎನ್‌ಸಿಪಿಯ ಶಾಸಕರಾಗಿದ್ದಾರೆ. ಮುಂಡೆ ರಾಜೀನಾಮೆಗೆ ವಿಪಕ್ಷಗಳು ಹಲವು ದಿನಗಳಿಂದಳು ಆಗ್ರಹ ಮಾಡಿದ್ದವಾದರೂ, ಹತ್ಯೆ ವೇಳೆ ಆರೋಪಿಗಳು ನಡೆಸಿದ ಭೀಭತೃ ಕೃತ್ಯದ ಫೋಟೋ ವೈರಲ್‌ ಅದ ಬೆನ್ನಲ್ಲೇ ಒತ್ತಡ ಹೆಚ್ಚಾಗಿ ಮುಂಡೆ ಅವರ ರಾಜೀನಾಮೆಯನ್ನು ಮಹಾಯುತಿ ಮೈತ್ರಿಕೂಟದ ನಾಯಕರು ಪಡೆದಿದ್ದಾರೆ.

ಕಾರಣ ಏನು?: ಮಹಾರಾಷ್ಟ್ರದ ಬೀಡ್‌ ಜಿಲ್ಲೆಯ ಮಸ್ಸಜೋಗ್ ಗ್ರಾಮದ ಸರಪಂಚ್‌ ಸಂತೋಷ್‌ ದೇಶ್‌ಮುಖ್‌ನನ್ನು ಡಿ.9ರಂದು ಅಪಹರಿಸಿ, ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಹೂಡಿಕೆ ಮಾಡಿದ್ದ ಅವಾದ್‌ ಎನರ್ಜಿ ಕಂಪನಿಯಿಂದ 2 ಕೋಟಿ ರು. ಹಫ್ತಾ ವಸೂಲಿಗೆ ಸಚಿವರ ಆಪ್ತ ವಾಲ್ಮೀಕಿ ಕರಾಡ್‌ನ ತಂಡ ಮುಂದಾಗಿತ್ತು. ಇದಕ್ಕೆ ಸಂತೋಷ್‌ ಅಡ್ಡಿಯಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಹತ್ಯೆ ಮಾಡಲಾಗಿತ್ತು. ಪ್ರಕರಣದ ಬೆನ್ನಲ್ಲೇ ತನಿಖೆ ನಡೆಸಿದ ಸಿಐಡಿ ಎಸ್‌ಐಟಿ ತಂಡ 8 ಮಂದಿಯನ್ನು ಬಂಧಿಸಿ, 1200 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿತ್ತು.

ಚಾರ್ಜ್‌ಶೀಟ್‌ನಲ್ಲೇನಿದೆ?: ಗ್ಯಾಸ್‌ ಪೈಪ್‌, ಕಬ್ಬಿಣದ ರಾಡ್‌, ಕೋಲುಗಳು ಹಾಗೂ ಹರಿತ ಆಯುಧಗಳಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ವೇಳೆ ರಕ್ತಸ್ರಾವಕ್ಕೊಳಗಾಗಿದ್ದ ದೇಶ್‌ಮುಖ್‌ ಮೇಲೆ ಆರೋಪಿಗಳು ಮೂತ್ರವಿಸರ್ಜನೆ ಕೂಡ ಮಾಡಿದ್ದರು. ಹಲ್ಲೆಯ 15 ವಿಡಿಯೋ, 8 ಫೋಟೋಗಳು ಸಿಕ್ಕಿದ್ದು, ಅದನ್ನು ಆರೋಪಿಗಳೇ ತೆಗೆದಿದ್ದರು.

Share this article