ನವದೆಹಲಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 370 ಸ್ಥಾನಗಳನ್ನು ಗೆಲ್ಲಲು ಬಿಜೆಪಿ ‘ಮಿಷನ್ 370’ ಗುರಿಯನ್ನು ಹಾಕಿಕೊಂಡಿದೆ. ಇದು ಸಾಧ್ಯವಿಲ್ಲದ ಮಾತು ಎಂದು ಪ್ರತಿಪಕ್ಷಗಳು ಹೇಳುತ್ತಿದ್ದರೂ, ಅದನ್ನು ಸಾಕಾರಗೊಳಿಸಲು ಬಿಜೆಪಿ ಕಳೆದ ಎರಡು ವರ್ಷಗಳಿಂದಲೇ ರಣತಂತ್ರ ಹೆಣೆದಿರುವ ಕುತೂಹಲಕರ ಮಾಹಿತಿ ಬಯಲಾಗಿದೆ.
2019ರಲ್ಲಿ ಗೆದ್ದಿದ್ದಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲೇಬೇಕು ಎಂಬ ಪಣ ತೊಟ್ಟ ಬಿಜೆಪಿ 2022ರಲ್ಲಿ ಕಾರ್ಯತಂತ್ರ ರೂಪಿಸಿತು. 2019ರ ಲೋಕಸಭೆ ಚುನಾವಣೆಯಲ್ಲಿ ತಾನು ಪರಾಜಿತವಾದ ಅಥವಾ ಸ್ಪರ್ಧೆಯೇ ಮಾಡಿಲ್ಲದ 144 ಕ್ಷೇತ್ರಗಳನ್ನು ಪಟ್ಟಿ ಮಾಡಿಕೊಂಡಿತು. ಬಳಿಕ ಆ ಕ್ಷೇತ್ರಗಳ ಸಂಖ್ಯೆಯನ್ನು 160ಕ್ಕೇರಿಸಿತು. ಮಿಷನ್ 370 ಸಾಕಾರಕ್ಕೆ ಈ ಕ್ಷೇತ್ರಗಳೇ ಸದ್ಯ ಬಿಜೆಪಿಗೆ ಬೆನ್ನೆಲುಬು.
ಈ ಕ್ಷೇತ್ರಗಳಲ್ಲಿ ಪಕ್ಷದ ಬಲವರ್ಧನೆಗೆ ಹಲವಾರು ಕ್ರಮಗಳನ್ನು ಬಿಜೆಪಿ ಕೈಗೊಂಡಿತು. ಪ್ರಮುಖ ನಾಯಕರು ಹಾಗೂ ಸಚಿವರ ಪ್ರವಾಸವನ್ನು ಆಯೋಜನೆ ಮಾಡಿ ಸಂಚಲನ ಮೂಡಿಸಿತು. ಇದೀಗ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಹಾಗೂ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ನೇತೃತ್ವದಲ್ಲಿ ರ್‍ಯಾಲಿ ಆಯೋಜನೆಗೆ ಮುಂದಾಗಿದೆ. ಈ ಮೂಲಕ 160 ಕ್ಷೇತ್ರಗಳ ಪೈಕಿ ಅರ್ಧ ಕ್ಷೇತ್ರಗಳಲ್ಲಿಯಾದರೂ ಗೆಲ್ಲುವ ಗುರಿಯನ್ನು ಹಾಕಿಕೊಂಡಿದೆ. 2019ರ ಕ್ಷೇತ್ರವನ್ನೂ ಉಳಿಸಿಕೊಂಡು, ಹೊಸದಾಗಿ 80 ಕ್ಷೇತ್ರ ಗೆದ್ದರೆ ಸುಲಭವಾಗಿ 370ರ ಗುರಿ ದಾಟಬಹುದು ಎಂಬ ಲೆಕ್ಕಾಚಾರದಲ್ಲಿದೆ.
ಕಾಂಗ್ರೆಸ್ ದಾಖಲೆ ಭಗ್ನಕ್ಕೆ ಯತ್ನ:
2014ರಲ್ಲಿ 282, 2019ರಲ್ಲಿ 303 (21 ಸೀಟು ಹೆಚ್ಚು) ಗೆದ್ದಿದ್ದ ಬಿಜೆಪಿ, ಈ ಬಾರಿ 2019ರಲ್ಲಿ ಶೇ.50ಕ್ಕಿಂತ ಅಧಿಕ ಮತ ಪಡೆದು ಗೆಲುವು ಸಾಧಿಸಿದ ಕ್ಷೇತ್ರಗಳ ಬಗ್ಗೆ ಕಣ್ಣಾಡಿಸಿತು. ಅಂತಹ 224 ಕ್ಷೇತ್ರಗಳು ಸಿಕ್ಕವು. 2014ರಲ್ಲಿ 136 ಕ್ಷೇತ್ರಗಳಲ್ಲಷ್ಟೇ ಶೇ.50ಕ್ಕಿಂತ ಹೆಚ್ಚು ಮತಗಳು ಬಂದಿದ್ದವು. 1984ರಲ್ಲಿ ಇಂದಿರಾ ಗಾಂಧಿ ಹತ್ಯೆ ಬಳಿಕ ಸೃಷ್ಟಿಯಾದ ಅನುಕಂಪದ ಅಲೆಯಲ್ಲಿ ತೇಲಿದ ಕಾಂಗ್ರೆಸ್ 293 ಕ್ಷೇತ್ರಗಳಲ್ಲಿ ಶೇ.50ಕ್ಕಿಂತ ಹೆಚ್ಚಿನ ಮತ ಪಡೆದು ಆಯ್ಕೆಯಾಗಿತ್ತು. ಅದು ಬಿಟ್ಟರೆ ರಾಜಕೀಯ ಪಕ್ಷವೊಂದು ಅಷ್ಟು ಮತ ಪಡೆದು 224 ಕ್ಷೇತ್ರ ಗಳಿಸಿದ ಎರಡನೇ ನಿದರ್ಶನ ಇದಾಗಿತ್ತು. ಈ ಬಾರಿ ಕಾಂಗ್ರೆಸ್ಸಿನ ಆ ದಾಖಲೆಯನ್ನೂ ಮುರಿಯುವ ಉದ್ದೇಶವನ್ನು ಬಿಜೆಪಿ ಹೊಂದಿದೆ.