ಕೋಲ್ಕತ್ತಾ: ಭಾರತ ಹಿಂದೂ ರಾಷ್ಟ್ರ ಅಲ್ಲ ಎನ್ನುವುದನ್ನು ಇತ್ತೀಚಿನ ಲೋಕಸಭಾ ಚುನಾವಣೆಯ ಫಲಿತಾಂಶ ತೋರಿಸಿದೆ. ಬ್ರಿಟಿಷರ ಆಡಳಿತ ಅವಧಿಯಲ್ಲಿ ಜನರನ್ನು ಬಂಧನದಲ್ಲಿ ಇರಿಸಲಾಗುತ್ತಿತ್ತು. ಅದು ಈಗಲೂ ಮುಂದುವರೆದಿದೆ. ಕಾಂಗ್ರೆಸ್‌ಗೆ ಹೋಲಿಸಿದರೆ ಬಿಜೆಪಿ ಸರ್ಕಾರದಲ್ಲಿ ಈ ಪ್ರಮಾಣ ಜಾಸ್ತಿಯಾಗಿದೆ’ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಲ್ಲಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸೇನ್, ‘ಭಾರತ ಹಿಂದೂ ರಾಷ್ಟ್ರವಲ್ಲ ಎನ್ನುವುದು ಲೋಕಸಭೆ ಚುನಾವಣೆ ಫಲಿತಾಂಶದಿಂದ ಪ್ರತಿಫಲಿಸಿದೆ. ಭಾರತ ಜಾತ್ಯತೀತ ದೇಶವಾಗಿರುವಾಗ, ದೇಶವು ಜಾತ್ಯತೀತ ಸಂವಿಧಾನ ಹೊಂದಿರುವಾಗ ದೇಶವನ್ನು ಹಿಂದೂ ರಾಷ್ಟ್ರ ಮಾಡುವ ಪರಿಕಲ್ಪನೆಯನ್ನು ನಾನು ಒಪ್ಪುವುದಿಲ್ಲ. ಮಹಾತ್ಮಾ ಗಾಂಧೀಜಿ, ರವೀಂದ್ರನಾಥ್ ಟ್ಯಾಗೋರ್, ನೇತಾಜಿ ನಾಡಿನಲ್ಲಿ ದೇಶದ ನಿಜವಾದ ಗುರುತನ್ನು ಕಡೆಗಣಿಸುವ ಯತ್ನ ಸರಿಯಲ್ಲ. ಇಂಥ ಮನಸ್ಥಿತಿ ಬದಲಾಗಬೇಕು ಎಂದು ಸೇನ್ ಹೇಳಿದರು.