ನವದೆಹಲಿ: ಸಂಸತ್ ಅಧಿವೇಶನದ 2ನೇ ಚರಣ ಆರಂಭವಾದ ಮೊದಲ ದಿನವೇ ತಮಿಳುನಾಡು ಹಾಗು ಕೇಂದ್ರ ಸರ್ಕಾರದ ನಡುವೆ ನಡೆಯುತ್ತಿದ್ದ ‘ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಹೇರಿಕೆ ವಿವಾದ’ ಹಾಗೂ ‘ಹಿಂದಿ ಭಾಷಾ ಹೇರಿಕೆ ವಿವಾದ’ ಲೋಕಸಭೆಯಲ್ಲಿ ಮಾರ್ದನಿಸಿದೆ.
‘ಡಿಎಂಕೆಯವರು ಅಪ್ರಮಾಣಿಕರು. ಅನಾಗರಿಕರು. ಈ ಹಿಂದೆ ಒಪ್ಪಿದ್ದ ಅವರು ಈಗ ಯೂ-ಟರ್ನ್ ಹೊಡೆದು ಕೇವಲ ರಾಜಕೀಯ ಉದ್ದೇಶಕ್ಕೋಸ್ಕರ ಅವರು ತಮಿಳ್ನಾಡಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿ ಮಾಡುತ್ತಿಲ್ಲ ಹಾಗೂ ಕೇಂದ್ರದ ‘ಪಿಎಂ ಶ್ರೀ’ ಶಾಲೆಗಳನ್ನು ಆರಂಭಿಸುತ್ತಿಲ್ಲ’ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸದನದಲ್ಲಿ ಮಾಡಿದ ಆರೋಪವು ಭಾರಿ ವಾಕ್ಸಮರಕ್ಕೆ ನಾಂದಿ ಹಾಡಿದೆ.
ಈ ಹೇಳಿಕೆ ಖಂಡಿಸಿ ಡಿಎಂಕೆ ಸಂಸದರು ಪ್ರತಿಭಟನೆ ಆರಂಭಿಸಿದ ಕಾರಣ ಲೋಕಸಭೆ ಕಲಾಪ ಪದೇ ಪದೇ ಮುಂದೂಡಿಕೆ ಆಗಿದೆ.ಸೋಮವಾರ ಸದನದಲ್ಲಿ ಪಿಎಂ ಶ್ರೀ ಶಾಲೆಗಳ ಬಗ್ಗೆ ಮಾತನಾಡಿದ ಪ್ರಧಾನ್, ‘ಈ ಮುನ್ನ ಡಿಎಂಕೆಯವರು ಪಿಎಂ ಶ್ರೀ ಯೋಜನೆಯನ್ನು ಜಾರಿ ಮಾಡುವುದಾಗಿ ಹೇಳಿದ್ದರು. ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಜತೆಗೂಡಿ ಯೋಜನೆಗೆ ಸಹಿ ಹಾಕುವುದಾಗಿ ಹೇಳಿದ್ದರು.
ಸಿಎಂ ಸ್ಟಾಲಿನ್ ಕೂಡ ಮೊದಲು ಒಪ್ಪಿದ್ದರು. ಆದರೆ ನಂತರ ‘ಸೂಪರ್ ಸಿಎಂ’ (ಬಹುಶಃ ಸ್ಟಾಲಿನ್ ಪುತ್ರ, ಡಿಸಿಎಂ ಉದಯನಿಧಿ ಮಾರನ್) ಪ್ರವೇಶದ ಬಳಿಕ ಯೂ ಟರ್ನ್ (ಉಲ್ಟಾ) ಹೊಡೆದರು’ ಎಂದು ಆರೋಪಿಸಿದರು.‘ಅವರು (ಡಿಎಂಕೆ) ಅಪ್ರಾಮಾಣಿಕರಾಗಿದ್ದಾರೆ. ಅನಾಗರಿಕರಂತೆ ವರ್ತಿಸುತ್ತಿದ್ದಾರೆ. ಅವರು ತಮಿಳುನಾಡು ವಿದ್ಯಾರ್ಥಿಗಳ ಬಗ್ಗೆ ಬದ್ಧರಾಗಿಲ್ಲ. ಅವರು ತಮಿಳುನಾಡು ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ. ಅವರ ಏಕೈಕ ಕೆಲಸ ಭಾಷಾ ಅಡೆತಡೆಗಳನ್ನು ಹುಟ್ಟುಹಾಕುವುದು. ಅವರು ರಾಜಕೀಯ ಮಾಡುತ್ತಿದ್ದಾರೆ..
ಕಿಡಿಗೇಡಿತನ ಮಾಡುತ್ತಿದ್ದಾರೆ. ಅವರು ಪ್ರಜಾಪ್ರಭುತ್ವ ವಿರೋಧಿಗಳು’ ಎಂದು ಪ್ರಧಾನ್ ಆಕ್ರೋಶ ವ್ಯಕ್ತಪಡಿಸಿದರು.ಇದೇ ವೇಳೆ, ‘ಪಿಎಂ ಶ್ರೀಗೆ ಸಹಿ ಹಾಕಲು ಇನ್ನು 20 ದಿನ ಮಾತ್ರ ಬಾಕಿ ಉಳಿದಿವೆ’ ಎಂದು ಅವರು ತಮಿಳುನಾಡು ಸರ್ಕಾರವನ್ನು ಎಚ್ಚರಿಸಿದರು. ತಮಿಳುನಾಡು ಕೇಂದ್ರದ ಶೈಕ್ಷಣಿಕ ನಿಧಿ ಪಡೆಯಲು ಎನ್‌ಇಪಿ, ಪಿಎಂ ಶ್ರೀ ಸೇರಿ ವಿವಿಧ ಯೋಜನೆಗಳಿಗೆ ಸಹಿ ಹಾಕುವುದು ಕಡ್ಡಾಯ ಎಂಬುದು ಇಲ್ಲಿ ಗಮನಾರ್ಹ.
ತ್ರಿಭಾಷೆ ಸಲ್ಲದು- ಡಿಎಂಕೆ ಸಂಸದರ ಆಕ್ರೋಶ:ಪ್ರಧಾನ್ ಅವರ ಈ ಮಾತಿನಿಂದ ಕ್ರುದ್ಧರಾದ ಡಿಎಂಕೆ ಸಂಸದರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ಆರಂಭಿಸಿದರು. ಪ್ರತಿಭಟನೆ ಬೇಡ ಎಂಬ ಸ್ಪೀಕರ್ ಓಂ ಬಿರ್ಲಾ ಕೋರಿಕೆಯನ್ನೂ ಮನ್ನಿಸಲಿಲ್ಲ. ಡಿಎಂಕೆ ಸಂಸದೆ ಕನಿಮೋಳಿ ಮಾತನಾಡಿ, ‘ಪ್ರಧಾನ್ ಬಳಸಿದ ಶಬ್ದಗಳಿಂದ ನಮಗೆ ಘಾಸಿಯಾಗಿದೆ. ನೆಪ ಹೇಳದೇ ರಾಜ್ಯಕ್ಕೆ ನೀಡಬೇಕಾದ ಶೈಕ್ಷಣಿಕ ನಿಧಿಯನ್ನು ಅವರು ಬಿಡುಗಡೆ ಮಾಡಿಸಬೇಕು. ಎನ್‌ಇಪಿಗೆ ಹಾಗೂ ತ್ರಿಭಾಷಾ ಸೂತ್ರಕ್ಕೆ ನಮಗೆ ಒಪ್ಪಿಗೆ ಇಲ್ಲ. ಈ ಬಗ್ಗೆ ಸಿಎಂ ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು’ ಎಂದರು.
ಪದ ಹಿಂಪಡೆವೆ- ಪ್ರಧಾನ್:
ಬಳಿಕ ಮಾತನಾಡಿದ ಪ್ರಧಾನ್, ‘ನಾನು ಬಳಸಿದ ಪದಗಳಿಂದ ನೋವಾಗಿದ್ದರೆ ಹಿಂಪಡೆಯುತ್ತೇನೆ. ಆದರೆ ಈಗಲೂ ತಮಿಳುನಾಡಿನ ಜತೆ ಮಾತುಕತೆಗೆ ಸಿದ್ಧನಿದ್ದೇನೆ. ಈ ಹಿಂದೆ ಡಿಎಂಕೆ ಸಂಸದರು ಕೆಲವು ವಿಷಯಗಳನ್ನು ನನ್ನ ಎದುರಿಗೆ ಒಪ್ಪಿ ಬಳಿಕ ತಮ್ಮ ಮಾತಿಂದ ಹಿಂದೆ ಸರಿದರು’ ಎಂದರು.
ಕರ್ನಾಟಕಕ್ಕಿಲ್ಲದ ಸಮಸ್ಯೆ ತಮಿಳ್ನಾಡಿಗೇಕೆ?:
‘ಆದರೆ ಈ ಸಮಸ್ಯೆ (ಎನ್‌ಇಪಿ, ತ್ರಿಭಾಷಾ ಸೂತ್ರಜಾರಿ ಹಾಗೂ ಪಿಎಂ ಶ್ರೀ ಶಾಲೆ ಸ್ಥಾಪನೆ) ಬಿಜೆಪಿಯೇತರ ರಾಜ್ಯಗಳಾದ ಕರ್ನಾಟಕ, ಹಿಮಾಚಲ ಪ್ರದೇಶ ಹಾಗೂ ಪಂಜಾಬ್ ಜತೆ ಆಗಿಲ್ಲ. ತಮಿಳುನಾಡಿನ ಜತೆ ಮಾತ್ರ ಆಗಿದೆ’ ಎಂದು ಅವರು ಪ್ರಶ್ನಿಸಿದರು. ಬಳಿಕ ಪ್ರಧಾನ್ ಆಡಿದ ಮಾತನ್ನು ಕಡತದಿಂದ ಸ್ಪೀಕರ್ ಬಿರ್ಲಾ ತೆಗೆದು ಹಾಕಿದರು.
ಪ್ರಧಾನ್ ವಿರುದ್ಧ ಹಕ್ಕುಚ್ಯುತಿಗೆ ನಿರ್ಧಾರ
ಈ ನಡುವೆ ತಮಿಳುನಾಡಿನ ಸಂಸದರ ಬಗ್ಗೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅಸಂಸದೀಯ ಪದ ಬಳಸಿದರು ಎಂದು ಆರೋಪಿಸಿ, ಅವರ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡಲು ಡಿಎಂಕೆ ಸಂಸದೆ ಕನಿಮೋಳಿ ನಿರ್ಧರಿಸಿದ್ದಾರೆ.