ನವದೆಹಲಿ: ಭ್ರಷ್ಟಾಚಾರ ವಿರೋಧಿ ಸಂಸ್ಥೆ ಲೋಕಪಾಲವು ತಲಾ 70 ಲಕ್ಷ ರು. ಮೌಲ್ಯದ 7 ಬಿಎಂಡಬ್ಲ್ಯು ಕಾರುಗಳನ್ನು ಖರೀದಿಸಲು ಮುಂದಾಗಿದ್ದು, ಅದಕ್ಕೆ ಟೆಂಡರ್ ಆಹ್ವಾನಿಸಿದೆ. ಅಧ್ಯಕ್ಷರು ಮತ್ತು 6 ಸಿಬ್ಬಂದಿಯ ಓಡಾಟಕ್ಕಾಗಿ 5 ಕೋಟಿ ರು. ವ್ಯಯಿಸುತ್ತಿರುವ ಲೋಕಪಾಲದ ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಲೋಕಪಾಲದ ಟೆಂಡರ್‌ನಲ್ಲಿ, ಎಂ ಸ್ಪೋರ್ಟ್ ಮಾಡಲ್‌ನ ಬಿಳಿ ಬಣ್ಣದ ಉದ್ದದ 330ಲಿ ಕಾರುಗಳೇ ಬೇಕು ಎಂದು ಉ್ಲಲೇಖಿಸಲಾಗಿದೆ. ಜತೆಗೆ, ಸುರಕ್ಷಿತ ಹಾಗೂ ಸುಲಭದ ಪ್ರಯಾಣಕ್ಕಾಗಿ ಅದರ ಚಾಲಕರಿಗೂ 1-2 ವಾರಗಳ ತರಬೇತಿ ನೀಡಬೇಕು. ಈ ವೇಳೆ ಕಾರುಗಳನ್ನು ಶುರು ಮಾಡುವುದು, ನಿಲ್ಲಿಸುವುದು, ತುರ್ತು ಸಂದರ್ಭಗಳಲ್ಲಿ ನಿಭಾಯಿಸುವುದು ಸೇರಿದಂತೆ ವಿವಿಧ ಪಾಠಗಳನ್ನು ಹೇಳಿಕೊಡಲಾಗುತ್ತದೆ. ಪ್ರತಿಯೊಬ್ಬ ಡ್ರೈವರ್ ಲೋಕಪಾಲ ಕಚೇರಿಯ ಆವರಣದಲ್ಲಿ ಕನಿಷ್ಠ 50 ಕಿ.ಮೀ. ಅಭ್ಯಾಸ ಮಾಡಬೇಕು ಹಾಗೂ ಇದರ ಎಲ್ಲಾ ಖರ್ಚನ್ನು ಟೆಂಡರ್ ಪಡೆದವರೇ ಭರಿಸಬೇಕು ಎಂದ ಷರತ್ತು ವಿಧಿಸಲಾಗಿದೆ.
ಭಾರೀ ಆಕ್ರೋಶ:
ಸಿಬ್ಬಂದಿಗಾಗಿ ಐಷಾರಾಮಿ ಕಾರುಗಳನ್ನು ಕೊಳ್ಳುವ ಲೋಕಪಾಲದ ನಿರ್ಧಾರಕ್ಕೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ‘ತಮ್ಮ ಕೆಲಸಕ್ಕಿಂತ ಹೆಚ್ಚಾಗಿ ಸೌಕರ್ಯಗಳನ್ನು ಬಯಸುವ ಅಧಿಕಾರಿಗಳನ್ನು ಲೋಕಪಾಲಕ್ಕೆ ನೇಮಿಸಿಕೊಳ್ಳುವ ಮೂಲಕ ಸರ್ಕಾರವು ಸಂಸ್ಥೆಯನ್ನು ಹಾಳುಗೆಡವಿದೆ’ ಎಂದುಲೋಕಪಾಲ ಸ್ಥಾಪನೆಗೆ ಹೋರಾಡಿದ್ದ ವಕೀಲ ಪ್ರಶಾಂತ್ ಭೂಷಣ್ ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಕೂಡ ಈ ನಿರ್ಧಾರವನ್ನು ವಿರೋಧಿಸಿದೆ. ಅತ್ತ ಎಕ್ಸ್‌ನಲ್ಲೂ ಅಸಮಾಧಾನ ವ್ಯಕ್ತವಾಗುತ್ತಿದ್ದು, ‘12 ಕೋಟಿ ರು. ಬೆಲೆಯ ರೋಲ್ಸ್‌ರಾಯ್ಸ್ ಬದಲು ಅವರು 70 ಲಕ್ಷ ರು. ಮೌಲ್ಯದ ಕಾರು ಖರೀದಿಸುತ್ತಿದ್ದಾರೆ. ಅವರೆಷ್ಟು ಸರಳಜೀವಿಗಳು ಎನ್ನಲು ಇದೇ ಉದಾಹರಣೆ’ ಎಂದು ಕಾಲೆಳೆದಿದ್ದಾರೆ.