ಬೆಂಗಳೂರು: ಗಿನ್ನಿಸ್‌ ದಾಖಲೆ ಪುಟಕ್ಕೆ ಎಂಟಿಆರ್ 123 ಅಡಿ ಉದ್ದದ ದೋಸೆ

KannadaprabhaNewsNetwork | Updated : Mar 17 2024, 07:50 AM IST

ಸಾರಾಂಶ

ಶತಮಾನೋತ್ಸವ ಅಂಗವಾಗಿ ಎಂಟಿಆರ್‌ನಿಂದ ದೋಸೆ ತಯಾರಿಯಾಗಿದ್ದು, ಅತಿ ಉದ್ದದ ದೋಸೆ ಎಂಬುದಾಗಿ ಗಿನ್ನೆಸ್‌ ದಾಖಲೆ ಬರೆದಿದೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಸಂಸ್ಕರಿಸಿದ ಆಹಾರ ಪದಾರ್ಥಗಳ ತಯಾರಿಕಾ ಸಂಸ್ಥೆಯಾದ ಎಂಟಿಆರ್ ಫುಡ್ಸ್ ತನ್ನ ಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ಶನಿವಾರ ಲೋರ್ಮನ್ ಕಿಚನ್ ಸಲಕರಣೆಗಳ ಸಹಭಾಗಿತ್ವದಡಿ ತಯಾರಿಸಿದ 123 ಅಡಿ ಉದ್ದದ ದೋಸೆಯು ಗಿನ್ನಿಸ್ ವರ್ಲ್ಡ್‌ ರೆಕಾರ್ಡ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.

 16.68 ಮೀಟರ್ (54 ಅಡಿ 8.69 ಇಂಚು) ಉದ್ದದ ದೋಸೆಯು ಇಲ್ಲಿಯವರೆಗೆ ದಾಖಲಾಗಿತ್ತು. ನಗರದ ಬೊಮ್ಮಸಂದ್ರದಲ್ಲಿರುವ ಕಂಪನಿಯ ಫ್ಯಾಕ್ಟರಿಯಲ್ಲಿ ಈ ದೋಸೆ ತಯಾರಿಸಲು ತನ್ನದೇ ಸಿಗ್ನೇಚರ್ ರೆಡ್ ಬ್ಯಾಟರ್ ಅನ್ನು ಬಳಸಿಕೊಂಡಿದೆ. 

ಉದ್ದನೆಯ ತವಾದಲ್ಲಿ ಈ ದಾಖಲೆಯ ದೋಸೆ ತಯಾರಿಸಲಾಗಿದೆ. ಎಂಟಿಆರ್‌ ನ ಕ್ಯುಸಿನ್ ಸೆಂಟರ್ ಆಫ್ ಎಕ್ಸಲೆನ್ಸ್ ಮಾರ್ಗದರ್ಶನದಡಿ ಆಹಾರ ತಜ್ಞರು ಮತ್ತು ಪಾಕ ಶಾಲೆಯ ಸಿಬ್ಬಂದಿ ಒಳಗೊಂಡ 75 ಬಾಣಸಿಗರ ತಂಡವು ದೋಸೆ ತಯಾರಿಸಿತು. 

ದಾಖಲೆ ನಿರ್ಮಿಸಿದ ಬಳಿಕ ಎಂಟಿಆರ್ ಉದ್ಯೋಗಿಗಳ ಜತೆಗೆ ಸ್ಥಳೀಯ ಶಾಲೆಗಳ ವಿದ್ಯಾರ್ಥಿಗಳು ಮತ್ತು ಸುತ್ತಮುತ್ತಲಿನ ಪ್ರದೇಶದ ಜನರಿಗೆ ಇದನ್ನು ಹಂಚಲಾಯಿತು.

Share this article