ದೆಹಲಿಯ ರೋಹಿಣಿ ಉಪನಗರದ ಸಿಆರ್‌ಪಿಎಫ್‌ ಶಾಲೆ ಬಳಿ ಪೌಡರ್‌ ಬಾಂಬ್‌ ಸ್ಫೋಟ : ಬೆಚ್ಚಿದ ರಾಜಧಾನಿ

KannadaprabhaNewsNetwork |  
Published : Oct 21, 2024, 01:30 AM ISTUpdated : Oct 21, 2024, 04:45 AM IST
ಸ್ಫೋಟ ಸ್ಥಳ ಪರಿಶೀಲನೆ | Kannada Prabha

ಸಾರಾಂಶ

ದೆಹಲಿಯ ರೋಹಿಣಿ ಉಪನಗರದ ಪ್ರಶಾಂತ್‌ ವಿಹಾರ್‌ ಪ್ರದೇಶದ ಸಿಆರ್‌ಪಿಎಫ್‌ ಶಾಲೆ ಬಳಿ ಭಾನುವಾರ ಬೆಳಗ್ಗೆ 7.50ರ ವೇಳೆಗೆ ಕಚ್ಚಾ ಬಾಂಬ್‌ ಸ್ಫೋಟ ಸಂಭವಿಸಿದೆ.

ನವದೆಹಲಿ: ದೆಹಲಿಯ ರೋಹಿಣಿ ಉಪನಗರದ ಪ್ರಶಾಂತ್‌ ವಿಹಾರ್‌ ಪ್ರದೇಶದ ಸಿಆರ್‌ಪಿಎಫ್‌ ಶಾಲೆ ಬಳಿ ಭಾನುವಾರ ಬೆಳಗ್ಗೆ 7.50ರ ವೇಳೆಗೆ ಕಚ್ಚಾ ಬಾಂಬ್‌ ಸ್ಫೋಟ ಸಂಭವಿಸಿದೆ. ಅದೃಷ್ಟವಶಾತ್‌ ಭಾನುವಾರ ಆಗಿದ್ದ ಕಾರಣ ಶಾಲೆಯ ಬಳಿ ಯಾವುದೇ ಮಕ್ಕಳು ಇರದ ಕಾರಣ ದೊಡ್ಡ ಅನಾಹುತ ತಪ್ಪಿದೆ.

ಶಾಲೆಯ ಗೋಡೆ ಬಳಸಿ ಸ್ಫೋಟ ನಡೆಸಲಾಗಿದ್ದು, ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ 2 ಕಿ.ಮೀ. ವ್ಯಾಪ್ತಿಯಲ್ಲಿ ಬಾಂಬ್ ಶಬ್ದ ಕೇಳಿಸಿದೆ. ಸ್ಫೋಟದ ಸ್ಥಳದಲ್ಲಿ ಭಾರೀ ಪ್ರಮಾಣದ ಹೊಗೆ ಎದ್ದ ದೃಶ್ಯಗಳು ಸ್ಥಳೀಯರ ಮೊಬೈಲ್‌ಗಳಲ್ಲಿ ಸೆರೆಯಾಗಿವೆ. ಸುತ್ತಲಿನ ಕೆಲ ಕಟ್ಟಡಗಳ ಗೋಡೆ, ವಾಹನಗಳ ಗಾಜು ಒಡೆದಿದೆಯಾದರೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

‘ಪ್ರಾಣಹಾನಿ ಆಗಿಲ್ಲವಾದರೂ ಜನರಲ್ಲಿ ಭಯ ಮೂಡಿಸಲೆಂದೇ ಈ ಕೃತ್ಯ ಎಸಗಿದಂತಿದೆ. ನಿಗೂಢ ಪೌಡರ್‌ ಸ್ಥಳದಲ್ಲಿ ಪತ್ತೆ ಆಗಿದೆ. ಈ ಬಗ್ಗೆ ತನಿಖೆ ನಡೆದಿದೆ ಹಾಗೂ ದಾಳಿಕೋರರ ಪತ್ತೆಗೆ ಕ್ರಮ ಜರುಗಿಸಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

ನಿಗೂಢ ಪೌಡರ್‌ ಪತ್ತೆ:

ಸ್ಫೋಟದ ಮಾಹಿತಿ ತಿಳಿಯುತ್ತಲೇ, ದೆಹಲಿ ಪೊಲೀಸರು, ಎನ್‌ಎಸ್‌ಜಿ ಮತ್ತು ಎನ್‌ಐಎ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಈ ವೇಳೆ ಬಿಳಿಯ ನಿಗೂಢ ಪೌಡರ್‌ ಪತ್ತೆಯಾಗಿದ್ದು, ಅದನ್ನು ಹೆಚ್ಚಿನ ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆದರೆ ಸಾಮಾನ್ಯವಾಗಿ ಇತರೆ ಸ್ಫೋಟದ ಪ್ರಕರಣದಲ್ಲಿ ಕಂಡುಬರುವ ಎಲೆಕ್ಟ್ರಾನಿಕ್‌ ಉಪಕರಣ, ಕುಕ್ಕರ್‌, ಬಾಲ್‌ ಬೇರಿಂಗ್ಸ್‌ ಅಥವಾ ಲೋಹದ ವಸ್ತುಗಳು ಪತ್ತೆಯಾಗಿಲ್ಲ.ಪ್ರಾಥಮಿಕ ತನಿಖೆ ಅನ್ವಯ ಕಚ್ಚಾಬಾಂಬ್‌ ಎಂದು ಖಚಿತವಾಗಿದೆ. ಸ್ಫೋಟದ ಸಮಯದಲ್ಲಿ ಪ್ರದೇಶದಲ್ಲಿ ಯಾರು ಸಂಚರಿಸಿದ್ದು ಎಂಬ ಮಾಹಿತಿಯನ್ನು ಮೊಬೈಲ್‌ ಟವರ್‌ ಮೂಲಕ ಸಂಗ್ರಹಿಸುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ಅಲ್ಲದೆ ಸುತ್ತಮುತ್ತ ಪ್ರದೇಶದಲ್ಲಿ ಬೇರೆ ಎಲ್ಲಾದರೂ ಬಾಂಬ್‌ ಇಡಲಾಗಿದೆಯೇ ಎಂಬುದರ ಪತ್ತೆಗೆ ಎನ್‌ಎಸ್‌ಜಿ ಕಮಾಂಡೋಗಳು ರೋಬೋಟ್‌ಗಳನ್ನು ಬಳಸಿದ್ದಾರೆ.

‘ಜನತೆಯಲ್ಲಿ ಆತಂಕ ಹುಟ್ಟಿಸುವ ಉದ್ದೇಶದಿಂದಲೇ ಈ ಸ್ಫೋಟ ನಡೆಸಿರಬಹುದು. ಸ್ಫೋಟದ ಬಳಿಕ ಅಕ್ಕಪಕ್ಕದ ಕಟ್ಟಡಗಳ ಗೋಡೆಗೆ ಹಾನಿ, ಕಿಟಕಿ ಗಾಜಿಗೆ ಹಾನಿ, ವಾಹನಗಳ ಗಾಜಿಗೆ ಹಾನಿ ಇಂಥ ಅನುಮಾನಕ್ಕೆ ಕಾರಣವಾಗಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

PREV

Recommended Stories

ಬಂಗಾಳದ ಹಿಂದಿ ವಿರೋಧಿ ಪ್ರತಿಭಟನೆಯಲ್ಲಿ ಕುವೆಂಪು
ಬೆಟ್ಟಿಂಗ್‌ ಆ್ಯಪ್‌ ಕೇಸ್‌ : ನಟಿ ಊರ್ವಶಿ, ಮಿಮಿ ಚಕ್ರವರ್ತಿಗೆ ಇಡಿ ಸಮನ್ಸ್‌