ಬೆಟ್ಟಿಂಗ್‌ ಆ್ಯಪ್‌ ಕೇಸ್‌: ನಟಿ ಊರ್ವಶಿ, ಮಿಮಿ ಚಕ್ರವರ್ತಿಗೆ ಇಡಿ ಸಮನ್ಸ್‌

| Published : Sep 15 2025, 01:01 AM IST

ಬೆಟ್ಟಿಂಗ್‌ ಆ್ಯಪ್‌ ಕೇಸ್‌: ನಟಿ ಊರ್ವಶಿ, ಮಿಮಿ ಚಕ್ರವರ್ತಿಗೆ ಇಡಿ ಸಮನ್ಸ್‌
Share this Article
  • FB
  • TW
  • Linkdin
  • Email

ಸಾರಾಂಶ

1xಬೆಟ್‌ ಹೆಸರಿನ ಆನ್‌ಲೈನ್‌ ಬೆಟ್ಟಿಂಗ್‌ ಆ್ಯಪ್‌ ವಿರುದ್ಧ ನಡೆಯುತ್ತಿರುವ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಟಿ ಊರ್ವಶಿ ರೌಟೇಲಾ ಮತ್ತು ಕಾಂಗ್ರೆಸ್‌ನ ಮಾಜಿ ಸಂಸದೆ ನಟಿ ಮಿಮಿ ಚಕ್ರವರ್ತಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದೆ.

ನವದೆಹಲಿ: 1xಬೆಟ್‌ ಹೆಸರಿನ ಆನ್‌ಲೈನ್‌ ಬೆಟ್ಟಿಂಗ್‌ ಆ್ಯಪ್‌ ವಿರುದ್ಧ ನಡೆಯುತ್ತಿರುವ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಟಿ ಊರ್ವಶಿ ರೌಟೇಲಾ ಮತ್ತು ಕಾಂಗ್ರೆಸ್‌ನ ಮಾಜಿ ಸಂಸದೆ ನಟಿ ಮಿಮಿ ಚಕ್ರವರ್ತಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದೆ. ಇಬ್ಬರಿಗೂ ಸೆ.19ರಂದು ವಿಚಾರಣೆಗೆ ಬರುವಂತೆ ಇ.ಡಿ. ಹೇಳಿದೆ. ಈ ಅಕ್ರಮ ಬೆಟ್ಟಿಂಗ್‌ ಆ್ಯಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಈಗಾಗಲೇ ಮಾಜಿ ಕ್ರಿಕೆಟಿಗರಾದ ಸುರೇಶ್‌ ರೈನಾ, ಶಿಖರ್‌ ಧವನ್ ಸೇರಿದಂತೆ ಹಲವು ಖ್ಯಾತನಾಮರ ವಿಚಾರಣೆ ನಡೆಸಿದೆ.

==

ತಂಬಾಕಿಗೆ ವರ್ಷಕ್ಕೆ 13.5 ಲಕ್ಷ ಬಲಿ, ಚಿಕಿತ್ಸೆಗೆ 1.77 ಲಕ್ಷ ಕೋಟಿ ರು. ವೆಚ್ಚ

ನವದೆಹಲಿ: ತಂಬಾಕಿನಿಂದಾಗಿ ಪ್ರತಿ ವರ್ಷ ಭಾರತದಲ್ಲಿ 13.5 ಲಕ್ಷ ಜನ ಸಾವನ್ನಪ್ಪುತ್ತಿದ್ದಾರೆ. ತಂಬಾಕು ಸಂಬಂಧಿತ ಕಾಯಿಲೆಗಳಿಗಾಗಿ ಭಾರತೀಯರು 1.77 ಲಕ್ಷ ಕೋಟಿ ರು.ಗೂ ಅಧಿಕ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಆದರೆ ವ್ಯಾಪಕ ಜಾಗೃತಿ ಕಾರ್ಯಕ್ರಮಗಳ ಹೊರತಾಗಿಯೂ ಧೂಮಪಾನ ತ್ಯಜಿಸುವವರ ಪ್ರಮಾಣ ಮಾತ್ರ ತೀರಾ ಕಡಿಮೆಯಿದೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ(ಸಿಡಿಸಿ) ವರದಿ ತಿಳಿಸಿದೆ. ಭಾರತದಲ್ಲಿ ತಂಬಾಕಿನ ಅಪಾಯ ಹೆಚ್ಚಾಗಿದೆ. 10 ಭಾರತೀಯರಲ್ಲಿ ಒಬ್ಬರು ತಂಬಾಕು ಸಂಬಂಧಿತ ಕಾಯಿಲೆಗಳಿಂದ ಅಕಾಲಿಕವಾಗಿ ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿ ಧೂಮಪಾನ ತ್ಯಜಿಸುವ ದರಗಳು ಸಹ ಕಡಿಮೆಯೇ ಉಳಿದಿವೆ. ಕೇವಲ ಶೇ.7ರಷ್ಟು ಧೂಮಪಾನಿಗಳು ಯಶಸ್ವಿಯಾಗಿ ಧೂಮಪಾನ ತ್ಯಜಿಸುತ್ತಾರೆ ಎಂದು ಅದು ತಿಳಿಸಿದೆ.

==

ಬಿಹಾರದಲ್ಲಿ ಎಲ್ಲ ಕ್ಷೇತ್ರದಲ್ಲಿ ಸ್ಪರ್ಧೆ: ಜ್ಯೋತಿರ್ಮಠದ ಶಂಕರಾಚಾರ್ಯ ಘೋಷಣೆ

ಪಟನಾ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ 243 ಕ್ಷೇತ್ರಗಳಲ್ಲಿ ಗೋಹತ್ಯೆಯನ್ನು ವಿರೋಧಿಸುವ ಸ್ವತಂತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದು ಉತ್ತರಾಖಂಡದ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರ ಸರಸ್ವತಿ ಘೋಷಿಸಿದ್ದಾರೆ. ಗೋರಕ್ಷಾ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತಮಾಡಿದ ಅವರು, ‘ಬಿಹಾರ ಚುನಾವಣೆಯಲ್ಲಿ ನಾವು ಗೋವು ಮತ್ತು ಸನಾತನ ಧರ್ಮ ರಕ್ಷಕರಿಗೆ ಮತ ಹಾಕುತ್ತೇವೆ. 78-79 ವರ್ಷಗಳಾದರೂ, ಹಲವು ಭರವಸೆಗಳನ್ನು ನೀಡಿದರೂ ಯಾವುದೇ ಪಕ್ಷ ಗೋವಧೆಯ ವಿರುದ್ಧ ಬದ್ಧತೆ ತೋರಿಲ್ಲ. ಮುಂಬರುವ ಚುನಾವಣೆಯಲ್ಲಿ ನಾವು ಎಲ್ಲಾ 243 ಸ್ಥಾನಗಳಿಂದ ಅಭ್ಯರ್ಥಿ ಕಣಕ್ಕಿಳಿಸುತ್ತೇವೆ. ಈಗ ಅವರ ಹೆಸರು ಬಹಿರಂಗಪಡಿಸಲ್ಲ’ ಎಂದಿದ್ದಾರೆ.

==

ಸಿಂದೂರದಲ್ಲಿ ಧ್ವಂಸ ಆದ ಉಗ್ರ ನೆಲೆ ನಿರ್ಮಾಣಕ್ಕೆ ಪ್ರವಾಹ ಪರಿಹಾರ ಹಣ

ಇಸ್ಲಾಮಾಬಾದ್‌: ಭಾರತ ಆಪರೇಷನ್‌ ಸಿಂದೂರದಲ್ಲಿ ಧ್ವಂಸವಾಗಿದ್ದ ಮುರೀದ್ಕೆಯಲ್ಲಿರುವ ಲಷ್ಕರ್‌-ಎ- ತೊಯ್ಬಾದ ಪ್ರಧಾನ ಕಚೇರಿ ಮರ್ಕಜ್ ತೈಬಾದ ಮರು ನಿರ್ಮಾಣಕ್ಕೆ ಪಾಕ್‌ ಸರ್ಕಾರ ಮುಂದಾಗಿದೆ. ಇದಕ್ಕೆ ಅದು ಪ್ರವಾಹ ಪರಿಹಾರ ನಿಧಿಯ 4 ಕೋಟಿ ರು. ಹಣ ನೀಡಿದೆ. ಗುಪ್ತಚರ ಮೂಲಗಳ ಮಾಹಿತಿ ಪ್ರಕಾರ, ಮುರೀದ್ಕೆ ಮರು ನಿರ್ಮಾಣಕ್ಕೆ ಸುಮಾರು 15 ಕೋಟಿ ರು. ಅಗತ್ಯವಿದೆ. ಆದರೆ ಆರ್ಥಿಕವಾಗಿ ಪಾತಾಳಕ್ಕೆ ಇಳಿದಿರುವ ಪಾಕಿಸ್ತಾನ ಇದಕ್ಕೆಂದು, ಪ್ರವಾಹ ಪರಿಹಾರದ ಹಣದಿಂದ 4 ಕೋಟಿ ರು. ಬಿಡುಗಡೆ ಮಾಡಿದೆ. ಪಾಕಿಸ್ತಾನದಲ್ಲಿ ಈ ವರ್ಷ ಭಾರೀ ಮಳೆಗೆ ಸುಮಾರು 800ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

==

ಅಮೆರಿಕದಲ್ಲಿ ಭಾರತೀಯ ವೃದ್ಧೆ ಬಂಧನ: ಆಕ್ರೋಶ

ವಾಷಿಂಗ್ಟನ್‌: ಕಳೆದ 33 ವರ್ಷಗಳಿಂದ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದ ಪಂಜಾಬ್‌ ಮೂಲದ ಹರ್ಜಿತ್‌ ಕೌರ್‌ (73) ಎಂಬ ವೃದ್ಧೆಯನ್ನು ಅಮೆರಿಕದ ವಲಸೆ ಮತ್ತು ಸುಂಕ ಅಧಿಕಾರಿಗಳು ಬಂಧಿಸಿದ್ದಾರೆ. 1990ರಲ್ಲಿ ಅಮೆರಿಕಕ್ಕೆ ಬಂದಾಗಿನಿಂದಲೂ ತೆರಿಗೆ ಪಾವತಿಸುತ್ತಿರುವ ಹರ್ಜಿತ್‌, ಕಳೆದ 13 ವರ್ಷಗಳಿಂದ ಪ್ರತಿ 6 ತಿಂಗಳಿಗೆ ಒಮ್ಮೆಯಂತೆ ವಲಸೆ ಅಧಿಕಾರಿಗಳ ಬಳಿ ತೆರಳಿ ವಲಸೆ ತಪಾಸಣೆಗೆ ಒಳಗಾಗುತ್ತಿದ್ದರು. ಶನಿವಾರವೂ ಇಂಥ ತಪಾಸಣೆಗೆ ತೆರಳಿದ್ದ ವೇಳೆ ಯಾವುದೇ ಮಾಹಿತಿ ನೀಡದೇ ಅವರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಇದರ ವಿರುದ್ಧ ಭಾರತೀಯ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.