ಸಾರಾಂಶ
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಆನ್‌ಲೈನ್ ಬೆಟ್ಟಿಂಗ್ ಗೇಮ್ಸ್ ನಡೆಸಲು ಸರ್ಕಾರ ಅವಕಾಶ ನೀಡಬಾರದರು. ಬೆಟ್ಟಿಂಗ್ ಆ್ಯಪ್‌ಗಳಿಂದಾಗಿ ಸಾವಿರಾರು ಯುವಕರು ಆರ್ಥಿಕ ನಷ್ಟವಾಗಿ, ಕೊನೆಗೆ ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ಸಾಕಷ್ಟು ನಡೆದಿವೆ.
ಹುಬ್ಬಳ್ಳಿ:
ಯುವ ಜನತೆಗೆ ಮಾರಕವಾಗಿರುವ ಆನ್‌ಲೈನ್ ಬೆಟ್ಟಿಂಗ್ ಗೇಮ್ಸ್ ಹಾಗೂ ಆ್ಯಪ್‌ಗಳನ್ನು ರಾಜ್ಯದಿಂದ ಬ್ಯಾನ್ ಮಾಡುವಂತೆ ನಮ್ಮ ಕರ್ನಾಟಕ ಸೇನೆ ವತಿಯಿಂದ ಬುಧವಾರ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಹಸೀಲ್ದಾರ್ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು.ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಆನ್‌ಲೈನ್ ಬೆಟ್ಟಿಂಗ್ ಗೇಮ್ಸ್ ನಡೆಸಲು ಸರ್ಕಾರ ಅವಕಾಶ ನೀಡಬಾರದರು. ಬೆಟ್ಟಿಂಗ್ ಆ್ಯಪ್‌ಗಳಿಂದಾಗಿ ಸಾವಿರಾರು ಯುವಕರು ಆರ್ಥಿಕ ನಷ್ಟವಾಗಿ, ಕೊನೆಗೆ ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ಸಾಕಷ್ಟು ನಡೆದಿವೆ. ಕೂಡಲೇ ಸರ್ಕಾರ ಬೆಟ್ಟಿಂಗ್ ಆ್ಯಪ್‌ಗಳನ್ನು ರಾಜ್ಯದಿಂದ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ನಮ್ಮ ಕರ್ನಾಟಕ ಸೇನೆಯ ಉತ್ತರ ಕರ್ನಾಟಕ ಅಧ್ಯಕ್ಷ ಅಮೃತ ಇಜಾರಿ ಮಾತನಾಡಿ, ಆನ್‌ಲೈನ್ ಬೆಟ್ಟಿಂಗ್ ಜಾಲಕ್ಕೆ ಯುವ ಸಮುದಾಯ ಬಲಿಯಾಗುತ್ತಿದೆ. ಶಾಲಾ ಮಕ್ಕಳಿಂದ ಹಿಡಿದು ನಿರುದ್ಯೋಗಿ ಯುವಕರು ಈ ಆ್ಯಪ್‌ಗಳ ಮೂಲಕ ಬೆಟ್ಟಿಂಗ್ ಆಡುತ್ತಿದ್ದಾರೆ. ಇದೊಂದು ಮೋಸದ ಜಾಲವಾಗಿದೆ. ಇಂತಹ ಆ್ಯಪ್‌ಗಳನ್ನು ಸರ್ಕಾರ ಬ್ಯಾನ್ ಮಾಡಬೇಕು. ಒಂದು ವೇಳೆ ಬ್ಯಾನ್ ಮಾಡದೇ ಹೋದಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಆನಂತರ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಬಸವರಾಜ ದೇವರಮನಿ, ಮಹೇಶ ಪತ್ತಾರ, ಶೀತಲ ಮಲಗಾವಿ, ಸಿದ್ದು ಸಫಾರೆ, ಮನೋಹರ ಸಫಾರೆ, ಬಸವರಾಜ ಸಾಲಿ, ಹಿತೇಶ ರಾಠೋಡ ಸೇರಿದಂತೆ ವಿವಿಧ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿದ್ದರು.