ತಗ್ಗದ ಹುಸಿ ಬಾಂಬ್‌ ಹಾವಳಿ : ಮತ್ತೆ 24 ವಿಮಾನಕ್ಕೆ ಬೆದರಿಕೆ - ಪ್ರತ್ಯೇಕ ಸ್ಥಳದಲ್ಲಿ ಇರಿಸಿ ತಪಾಸಣೆ

Published : Oct 21, 2024, 08:02 AM IST
Flight

ಸಾರಾಂಶ

ವಿಮಾನಗಳಿಗೆ ಬಾಂಬ್‌ ಸ್ಫೋಟದ ಬೆದರಿಕೆ ಹಾಕುವ ಘಟನೆಗಳು ಭಾನುವಾರವೂ ಮುಂದುವರೆದಿದ್ದು, 24 ವಿಮಾನಗಳಿಗೆ ಇಂಥ ಸಂದೇಶ ರವಾನಿಸಲಾಗಿದೆ.

ನವದೆಹಲಿ : ವಿಮಾನಗಳಿಗೆ ಬಾಂಬ್‌ ಸ್ಫೋಟದ ಬೆದರಿಕೆ ಹಾಕುವ ಘಟನೆಗಳು ಭಾನುವಾರವೂ ಮುಂದುವರೆದಿದ್ದು, 24 ವಿಮಾನಗಳಿಗೆ ಇಂಥ ಸಂದೇಶ ರವಾನಿಸಲಾಗಿದೆ. ಶಿಷ್ಟಾಚಾರದ ಅನ್ವಯ ಎಲ್ಲಾ ವಿಮಾನಗಳನ್ನೂ ನಿಲ್ದಾಣಗಳಲ್ಲಿ ಇಳಿದ ಬಳಿಕ ಪ್ರತ್ಯೇಕ ಸ್ಥಳದಲ್ಲಿ ಇರಿಸಿ ತಪಾಸಣೆ ನಡೆಸಲಾಗಿದೆ. ಈ ವೇಳೆ ಎಲ್ಲವೂ ಹುಸಿ ಬೆದರಿಕೆ ಕರೆ ಎಂದು ಖಚಿತಪಟ್ಟಿದೆ.

 ಇದೇ ವೇಳೆ, ಕರ್ನಾಟಕದ ಬೆಳಗಾವಿ ವಿಮಾನ ನಿಲ್ದಾಣಕ್ಕೂ ಶನಿವಾರ ಮತ್ತು ಭಾನುವಾರ ಬೆದರಿಕೆ ಇ-ಮೇಲ್‌ ರವಾನಿಸಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೂಡ ‘6 ಇಂಡಿಗೋ ವಿಮಾನದಲ್ಲಿ 12 ಬಾಂಬರ್‌ ಇದ್ದಾರೆ’ ಎಂಬ ಬೆದರಿಕೆ ಬಂದಿದೆ. ಇದರೊಂದಿಗೆ ವಿವಿಧ ವಿಮಾನಯಾನ ಸಂಸ್ಥೆಗಳಿಗೆ ಕಳೆದ 1 ವಾರದಲ್ಲಿ ರವಾನಿಸಲಾದ ಹುಸಿ ಬಾಂಬ್‌ ಸ್ಫೋಟ ಪ್ರಕರಣಗಳ ಸಂಖ್ಯೆ 90 ದಾಟಿದೆ. ಭಾನುವಾರ ಏರ್‌ ಇಂಡಿಯಾ, ಇಂಡಿಗೋ, ಅಕಾಸ, ವಿಸ್ತಾರ ಸಂಸ್ಥೆಯ ವಿಮಾನಗಳಿಗೆ ಬೆದರಿಕೆ ರವಾನಿಸಲಾಗಿದೆ.

ಈ ವಿಮಾನಗಳು ಜೆಡ್ಡಾ- ಮುಂಬೈ, ದೆಹಲಿ- ಇಸ್ತಾಂಬುಲ್‌, ಕಲ್ಲಿಕೋಟೆ-ದಮ್ಮಮ್‌, ಮುಂಬೈ- ಇಸ್ತಾಂಬುಲ್‌, ಪುಣೆ-ಜೋಧಪುರ, ಗೋವಾ- ಅಹಮದಾಬಾದ್‌, ದೆಹಲಿ- ಫ್ರಾಂಕ್‌ಫರ್ಟ್‌, ಸಿಂಗಾಪುರ-ಮುಂಬೈ, ಬಾಲಿ-ದೆಹಲಿ, ಸಿಂಗಾಪುರ- ದೆಹಲಿ, ಸಿಂಗಾಪುರ-ಪುಣೆ, ಲಖನೌ-ಮುಂಬೈ, ಮುಂಬೈ-ಸಿಂಗಾಪುರ ನಡುವೆ ಸಂಚರಿಸುವ ವಿಮಾನಗಳಾಗಿದ್ದವು. ಕಳೆದೊಂದು ವಾರದಿಂದ ಈ ರೀತಿಯ ಸಂದೇಶಗಳನ್ನು ಜಾಲತಾಣಗಳ ಮೂಲಕ ಹಾಕಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂದೇಶ ರವಾನಿಸಿದ ಜಾಲತಾಣಗಳ ಖಾತೆಗಳನ್ನು ಕೇಂದ್ರ ಸರ್ಕಾರ, ಅಳಿಸಿ ಹಾಕಿದ್ದರೂ, ಹೊಸ ಹೊಸ ಖಾತೆಗಳಿಂದ ಸಂದೇಶಗಳನ್ನು ರವಾನಿಸಲಾಗುತ್ತಿದೆ.

ಟ್ವೀಟರ್ ಸಹಾಯ ಕೇಳಿದ ದಿಲ್ಲಿ ಪೊಲೀಸ್‌: ಶನಿವಾರ ರಾತ್ರಿವರೆಗೆ 6 ದಿನದಲ್ಲಿ 70 ಬೆದರಿಕೆಗಳು ಬಂದಿದ್ದವು. ಈ 70ರ ಪೈಕಿ ಟ್ವೀಟರ್‌ ಮೂಲಕ ಬಂದ ಬೆದರಿಕೆಗಳ ಸಂಖ್ಯೆ 46. ಹೀಗಾಗಿ ಈ ಸಂದೇಶವಾಹಕರ ಮೂಲ ಪತ್ತೆ ಮಾಡಿ ಎಂದು ಎಲಾನ್‌ ಮಸ್ಕ್‌ ಮಾಲೀಕತ್ವದ ಟ್ವೀಟರ್‌ಗೆ ದಿಲ್ಲಿ ಪೊಲೀಸರು ಕೋರಿದ್ದಾರೆ ಹಾಗೂ ಅಂಥ ಸಂದೇಶಗಳನ್ನು ಅಳಿಸಿ ಹಾಕುವಂತೆ ಸೂಚಿಸಿದ್ದಾರೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ