ಚುನಾವಣೆ ಎಫೆಕ್ಟ್‌: ಬಾಡಿಗೆ ವಿಮಾನ, ಕಾಪ್ಟರ್‌ಗೆ ಭಾರಿ ಬೇಡಿಕೆ

KannadaprabhaNewsNetwork | Updated : Apr 15 2024, 05:45 AM IST

ಸಾರಾಂಶ

ದೇಶದಲ್ಲಿ ಲೋಕಸಮರದ ಕಾವು ಜೋರಾಗಿಯೇ ಇದೆ. ಅಭ್ಯರ್ಥಿಗಳಂತೂ ಎಲೆಕ್ಷನ್ ಅಖಾಡದಲ್ಲಿ ಮತದಾರರ ಮನ ಸೆಳೆಯುವುದಕ್ಕೆ ಭರ್ಜರಿ ರಣತಂತ್ರ ಹೂಡುತ್ತಿದ್ದಾರೆ.

ನವದೆಹಲಿ: ದೇಶದಲ್ಲಿ ಲೋಕಸಮರದ ಕಾವು ಜೋರಾಗಿಯೇ ಇದೆ. ಅಭ್ಯರ್ಥಿಗಳಂತೂ ಎಲೆಕ್ಷನ್ ಅಖಾಡದಲ್ಲಿ ಮತದಾರರ ಮನ ಸೆಳೆಯುವುದಕ್ಕೆ ಭರ್ಜರಿ ರಣತಂತ್ರ ಹೂಡುತ್ತಿದ್ದಾರೆ. ನಾಯಕರ ಬಿರುಸಿನ ಪ್ರಚಾರದ ಬಿಸಿ ಖಾಸಗಿ ವಿಮಾನ ಹಾಗೂ ಹೆಲಿಕಾಪ್ಟರ್‌ಗಳಿಗೂ ತಟ್ಟಿದ್ದು, ಈ ವಲಯದಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದೆ.

ಸಾಮಾನ್ಯ ಅವಧಿಗೆ ಹೋಲಿಸಿದರೆ ಎಲೆಕ್ಷನ್ ಹೊತ್ತಲ್ಲಿ ಶೇ. 25ರಷ್ಟು ಡಿಮ್ಯಾಂಡ್ ಹೆಚ್ಚಳವಾಗಿದೆ. ಬಾಡಿಗೆ ದರವೂ ದುಪ್ಪಟ್ಟಾಗಿದೆ. ಚಾರ್ಟರ್ಡ್ ವಿಮಾನಗಳಿಗೆ ಗಂಟೆಗೆ 4.5 ಲಕ್ಷ ರು.ನಿಂದ 5.25 ಲಕ್ಷ ರು. ಹಾಗೂ ಹೆಲಿಕಾಪ್ಟರ್‌ಗೆ 1.5 ಲಕ್ಷ ರು.ನಿಂದ 3.5 ಲಕ್ಷ ರು. ಬಾಡಿಗೆ ದರ ನಿಗದಿಯಾಗಿದೆ.

ಖಾಸಗಿ ಜೆಟ್‌ ಗಳಿಗೆ ಡಿಮ್ಯಾಂಡ್:ಲೋಕಸಭೆ ಚುನಾವಣಾ ಪ್ರಚಾರಕ್ಕೆ ಸ್ಟಾರ್ ಕ್ಯಾಂಪೇನರ್ ಗಳು ಹಾಗೂ ರಾಜಕೀಯ ಪಕ್ಷದ ನೇತಾರರು, ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕೆ ಪದೇ ಪದೇ ದೇಶದಾದ್ಯಂತ ಸಂಚರಿಸುವ ಅವಶ್ಯಕತೆಯಿರುತ್ತದೆ. ಹೀಗಾಗಿ ರಾಜಕೀಯ ಪಕ್ಷಗಳು ಚುನಾವಣಾ ಸಂದರ್ಭದಲ್ಲಿ ಖಾಸಗಿ ಜೆಟ್ ಗಳ ಮೊರೆ ಹೋಗುವುದು ಸರ್ವೇ ಸಾಮಾನ್ಯ. ಈ ಕಾರಣಕ್ಕಾಗಿ ಖಾಸಗಿ ಜೆಟ್ ವಿಮಾನಗಳ ಬೇಡಿಕೆಯು ಹಿಂದಿನ ಎಲೆಕ್ಷನ್ ಗಳಿಗಿಂತ ಈ ಬಾರಿ ಶೇ. 30 ರಿಂದ 40ರಷ್ಟು ಹೆಚ್ಚಳವಾಗಿದೆ. ಬೇಡಿಕೆ ಹೆಚ್ಚಿದ್ದು , ಪೂರೈಕೆ ಕಡಿಮೆಯಿದೆ ಎನ್ನುವುದು ಮೂಲಗಳ ಮಾಹಿತಿ. ಅಲ್ಲದೇ ತಜ್ಞರ ಪ್ರಕಾರ ಈ ಬಾರಿ ಶೇ.15ರಿಂದ 20 ರಷ್ಟು ಖಾಸಗಿ ಜೆಟ್ ಸಂಸ್ಥೆಗಳ ಮಾಲೀಕರು ಲಾಭವನ್ನು ಗಳಿಸಬಹುದು ಅಂತಲೂ ಊಹಿಸಲಾಗಿದೆ.

ದರ ರಷ್ಟು?: ಸಾಮಾನ್ಯವಾಗಿ ಖಾಸಗಿ ಜೆಟ್ ಗಳ ದರವನ್ನು ಗಂಟೆಯ ಆಧಾರದಲ್ಲಿ ನಿಗದಿ ಪಡಿಸಲಾಗುತ್ತದೆ. ಬೇಡಿಕೆ ಹೆಚ್ಚಳವಾಗುತ್ತಿದ್ದಂತೆ ಖಾಸಗಿ ಜೆಟ್ ಗಳು ಗಂಟೆಗೆ ನಿಗದಿ ಪಡಿಸುವ ದರದಲ್ಲಿಯೂ ಹೆಚ್ಚಳವಾಗಿದೆ. ಸಾಮಾನ್ಯ ದಿನಗಳಲ್ಲಿ ಸಿಂಗಲ್ ಎಂಜಿನ್ ಹೆಲಿಕಾಪ್ಟರ್‌ಗೆ ದರ 80 ರಿಂದ 90 ಸಾವಿರ ರು., ಡಬಲ್ ಇಂಜಿನ್ ಗಳು 1.5 ರಿಂದ 1.7 ಲಕ್ಷ ರು. ತನಕ ಇರುತ್ತಿತ್ತು. ಆದರೆ ಎಲೆಕ್ಷನ್ ಸಂದರ್ಭದಲ್ಲಿ ಸಿಂಗಲ್ ಎಂಜಿನ್‌ ಹೆಲಿಕಾಪ್ಟರ್‌ ದರ 1.5 ಲಕ್ಷ ರು.ತನಕ ಮತ್ತು ಡಬಲ್ ಎಂಜಿನ್ ಗಳ ದರ 3.5 ಲಕ್ಷ ರು. ತನಕ ಹೆಚ್ಚಳವಾಗಿದೆ. ಒಂದು ಚಾರ್ಟರ್ಡ್‌ ವಿಮಾನಕ್ಕೆ 4.5 ರಿಂದ 5.25 ಲಕ್ಷ ರು.ತನಕನಿಗದಿ ಆಗುತ್ತಿದೆ.

ಬೇಡಿಕೆ ಎಲ್ಲಿ ಅಧಿಕ?:

ದೇಶದ ಹಲವು ರಾಜ್ಯಗಳಲ್ಲಿ ಖಾಸಗಿ ಜೆಟ್ ಗಳಿಗೆ ನಾಯಕರಿಂದ ಬೇಡಿಕೆ ಹೆಚ್ಚಾಗಿದೆ. ಅದರಲ್ಲಿಯೂ ವಿಶೇಷವಾಗಿ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಆಂಧ್ರ ಪ್ರದೇಶ ರಾಜ್ಯದಲ್ಲಿ ತುಸು ಹೆಚ್ಚೇ ಡಿಮ್ಯಾಂಡ್ ಸೃಷ್ಟಿಯಾಗಿದೆ.

ಕೇಂದ್ರ ಚುನಾವಣಾ ಅಯೋಗಕ್ಕೆ ಸಲ್ಲಿಕೆಯಾದ ಮಾಹಿತಿಯ ಪ್ರಕಾರ, 2019 -20 ಅವಧಿಯಲ್ಲಿ ಬಿಜೆಪಿ 250 ಕೋಟಿ ರು ಹಣವನ್ನು ಖಾಸಗಿ ಜೆಟ್ ಗಳಿಗೆ ವೆಚ್ಚ ಮಾಡಿತ್ತು. ಕಾಂಗ್ರೆಸ್ 126 ಕೋಟಿ. ರು ಹಣವನ್ನು ಚುನಾವಣಾ ಪ್ರಚಾರದ ಹೊತ್ತಲ್ಲಿ ಖಾಸಗಿ ಜೆಟ್ ಗಳಿಗೆ ಖರ್ಚು ಮಾಡಿತ್ತು.

Share this article