ತಮಿಳುನಾಡು ದೇಗುಲಗಳಲ್ಲಿ ಹಿಂದುಗಳಿಗೆ ಮಾತ್ರ ಪ್ರವೇಶ

KannadaprabhaNewsNetwork |  
Published : Feb 01, 2024, 02:03 AM ISTUpdated : Feb 01, 2024, 08:03 AM IST
TamilNadu

ಸಾರಾಂಶ

ತಮಿಳುನಾಡು ದೇಗುಲಗಳಲ್ಲಿ ಹಿಂದುಯೇತರರಿಗೆ ಪ್ರವೇಶ ನಿರ್ಬಂಧಿಸಿ ಹೈಕೋರ್ಟ್‌ ಆದೇಶ ಮಾಡಿದೆ. ದೇಗುಲ ಎಂಬುದು ಪಿಕ್ನಿಕ್‌, ಟೂರಿಸ್ಟ್‌ ಸ್ಪಾಟ್‌ ಅಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ನ ಮದುರೈ ಪೀಠ ಸೂಚನೆ ನೀಡಿದೆ.

ಮದುರೈ: ‘ತಮಿಳುನಾಡಿನ ದೇಗುಲಗಳಲ್ಲಿ ಹಿಂದೂಗಳಿಗೆ ಮಾತ್ರ ಪ್ರವೇಶ ನೀಡಬೇಕು. ದೇಗುಲದ ಹೊರಗಿನ ಧ್ವಜಸ್ತಂಭಗಳ ಬಳಿ ‘ಹಿಂದೂಯೇತರರಿಗೆ ಪ್ರವೇಶ ಇಲ್ಲ’ ಎಂಬ ಸೂಚನಾ ಫಲಕ ಅಳವಡಿಸಬೇಕು’ ಎಂದು ಮದ್ರಾಸ್‌ ಹೈಕೋರ್ಟು, ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

‘ಆಗಮ ಶಾಸ್ತ್ರದಂತೆ ಪಳನಿ ದಂಡಾಯುಧಪಾಣಿ ದೇಗುಲದಲ್ಲಿ ಹಿಂದುಯೇತರರಿಗೆ ಪ್ರವೇಶ ಕೊಡಬಾರದು’ ಎಂದು ಡಿ. ಸೆಂಥಿಲ್‌ಕುಮಾರ್‌ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಎಸ್‌. ಶ್ರೀಮತಿ ಅವರಿದ್ದ ಹೈಕೋರ್ಟ್‌ನ ಮದುರೈ ಪೀಠ,‘ಇದು ಗಂಭೀರ ವಿಷಯವಾಗಿದೆ. ಹಿಂದೂಗಳ ಆಚರಣೆ ಹಾಗೂ ಮೂಲಭೂತ ಹಕ್ಕು ಇದರಲ್ಲಿದೆ. 

ಹೀಗಾಗಿ ಹಿಂದೂಗಳ ಧಾರ್ಮಿಕ ಭಾವನೆ ಪಾಲನೆ ಹಿತದೃಷ್ಟಿಯಿಂದ ಧಾರ್ಮಿಕ ದತ್ತಿ ಇಲಾಖೆ ದೇಗುಲಗಳ ಧ್ವಜಸ್ತಂಭದ ಮುಂದೆ ‘ಹಿಂದೂಯೇತರರಿಗೆ ಪ್ರವೇಶ ಇಲ್ಲ’ ಎಂಬ ಸೂಚನಾ ಫಲಕವನ್ನು ಅಳವಡಿಸಬೇಕು. ಇದನ್ನು ದೇಗುಲ ಆಡಳಿತ ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಸೂಚನೆ ನೀಡಿತು.

ಒಂದು ವೇಳೆ ಹಿಂದೂಯೇತರರು ಒಳಗೆ ಪ್ರವೇಶಿಸಬೇಕೆಂದರೆ ಅವರು ‘ನಾನು ದೇಗುಲದ ನಿಯಮ ಹಾಗೂ ಆಚರಣೆಗಳಿಗೆ ಬದ್ಧನಾಗಿರುತ್ತೇನೆ’ ಎಂಬ ಮುಚ್ಚಳಿಕೆ ಬರೆದು ನಂತರ ಒಳಗೆ ಪ್ರವೇಶಿಸುವಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿತು.

ಇದೇ ವೇಳೆ, ಸುಖಾಸುಮ್ಮನೇ ದೇಗುಲಕ್ಕೆ ಬರುವವರಿಗೆ ಚಾಟಿ ಬೀಸಿದ ಕೋರ್ಟ್‌, ‘ಜನರು ತಮ್ಮ ತಮ್ಮ ಧರ್ಮವನ್ನು ತಮ್ಮ ಪೂಜಾ ಸ್ಥಳದಲ್ಲಿ ಪಾಲಿಸಲಿ.

ಆದರೆ ಇತರ ಧರ್ಮೀಯರ ವಿಚಾರದಲ್ಲಿ ಮೂಗು ತೂರಿಸಬಾರದು. ದೇಗುಲಗಳು ಪಿಕ್‌ನಿಕ್‌ ಅಥವಾ ಟೂರಿಸ್ಟ್‌ ತಾಣಗಳಲ್ಲ’ ಎಂದು ಚಾಟಿ ಬೀಸಿತು.

ಇದಲ್ಲದೆ, ‘ದೇಗುಲದಲ್ಲಿ ಪ್ರತಿ ನಿತ್ಯವೂ ಸರಿಯಾದ ನೇಮ ನಿಷ್ಠೆ, ಆಚರಣೆಗಳನ್ನು ಪಾಲಿಸುವಂತೆ ನೋಡಿಕೊಳ್ಳಬೇಕು’ ಎಂದು ನ್ಯಾಯಪೀಠ ತಮಿಳುನಾಡು ಸರ್ಕಾರಕ್ಕೆ ಸೂಚನೆ ನೀಡಿತು.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ಕೇರಳದ 2 ರು. ಡಾಕ್ಟರ್ ನಿಧನ