ಬಾಲಿವುಡ್ಡಲ್ಲೂ ‘ಮೀ ಟೂ’ : ಸಹನಟನಿಂದ ಅನುಭವಿಸಿದ ಕಿರುಕುಳದ ಕುರಿತು ಕಹಿ ನೆನಪು ಹಂಚಿಕೊಂಡ ಖ್ಯಾತ ನಟಿ ಮಲ್ಲಿಕಾ ಶೆರಾವತ್‌

KannadaprabhaNewsNetwork | Updated : Oct 06 2024, 08:44 AM IST

ಸಾರಾಂಶ

ಮಲಯಾಳಂ, ತಮಿಳು, ಬಂಗಾಳ ಚಿತ್ರರಂಗದಲ್ಲಿ ಕೇಳಿಬಂದ ಮಹಿಳಾ ಕಲಾವಿದರು, ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಾಲಿವುಡ್‌ನಲ್ಲೂ ಇದೆ ಎಂದು ಮೊದಲ ಬಾರಿಗೆ ನಟಿಯೊಬ್ಬರು ಮುಕ್ತವಾಗಿ ಮಾತನಾಡಿದ್ದಾರೆ.

ಮುಂಬೈ: ಮಲಯಾಳಂ, ತಮಿಳು, ಬಂಗಾಳ ಚಿತ್ರರಂಗದಲ್ಲಿ ಕೇಳಿಬಂದ ಮಹಿಳಾ ಕಲಾವಿದರು, ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಾಲಿವುಡ್‌ನಲ್ಲೂ ಇದೆ ಎಂದು ಮೊದಲ ಬಾರಿಗೆ ನಟಿಯೊಬ್ಬರು ಮುಕ್ತವಾಗಿ ಮಾತನಾಡಿದ್ದಾರೆ.

ಖ್ಯಾತ ನಟಿ ಮಲ್ಲಿಕಾ ಶೆರಾವತ್‌ ಸಹನಟನಿಂದ ಅನುಭವಿಸಿದ ಕಿರುಕುಳದ ಕುರಿತು ಮಾತನಾಡಿದ್ದಾರೆ.

‘ದುಬೈನಲ್ಲಿ ದೊಡ್ಡ ಸಿನಿಮಾವೊಂದರ ಚಿತ್ರೀಕರಣದ ವೇಳೆ ಮಧ್ಯರಾತ್ರಿಯ ಹೊತ್ತಿಗೆ ಬಹುತಾರಾಗಣದ ಹಾಸ್ಯಚಿತ್ರವೊಂದರ ನಾಯಕ ನಟ ನನ್ನ ಕೋಣೆಯ ಬಳಿ ಬಂದು ಬಾಗಿಲು ಬಡಿಯುತ್ತಿದ್ದ. ನಾನು ಸಹಕರಿಸಲು ನಿರಾಕರಿಸಿದೆ. ಅಂದಿನಿಂದ ಆತ ನನ್ನೊಂದಿಗೆ ಕೆಲಸ ಮಾಡಲಿಲ್ಲ’ ಎಂದು ಶೆರಾವತ್‌ ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಆದರೆ ಆ ನಟನ ಹೆಸರನ್ನು ಬಹಿರಂಗಪಡಿಸಿಲ್ಲ.

ಶಿಮ್ಲಾದ ಅಕ್ರಮ ಮಸೀದಿ ಭಾಗ ತೆರವು: ಕೋರ್ಟ್‌ ಆದೇಶ

ಶಿಮ್ಲಾ: ಮಹತ್ವದ ವಿದ್ಯಮಾನವೊಂದರಲ್ಲಿ ದೇಶಾದ್ಯಂತ ಸಂಚಲನ ಮೂಡಿಸಿದ್ದ ಹಿಮಾಚಲ ಪ್ರದೇಶ ರಾಜಧಾನಿ ಶಿಮ್ಲಾದ ಸಂಜೌಲಿ ಮಸೀದಿಯ 3 ಅಕ್ರಮ ಅಂತಸ್ತುಗಳನ್ನು ಕೆಡವಲು ಮುನಿಸಿಪಲ್‌ ಕಾರ್ಪೋರೆಷನ್‌ ಕೋರ್ಟ್‌ ಆದೇಶಿಸಿದೆ.ಇದರ ನಡುವೆಯೇ ಕೋರ್ಟ್‌ ತೀರ್ಪನ್ನು ಪಾಲಿಸಲು ಮತ್ತು 2 ತಿಂಗಳೊಳಗೆ ಮೇಲಿನ ಮಹಡಿಗಳನ್ನು ಕೆಡವಲು ಮಸೀದಿ ಸಮಿತಿಯು ಒಪ್ಪಿಕೊಂಡಿದೆ. ಇದರಿಂದ ಈ ವಿವಾದಕ್ಕೆ ಸಂಬಂಧಿಸಿದ 15 ವರ್ಷಗಳ ಪ್ರಕರಣ ತಾರ್ಕಿಕ ಅಂತ್ಯ ಕಂಡಂತಾಗಿದೆ.ಮಸೀದಿಯ ಅಕ್ರಮ ನಿರ್ಮಾಣ ಕುರಿತು ಹಲವು ವರ್ಷಗಳಿಂದ ಪರಿಶೀಲನೆ ನಡೆಯುತ್ತಿದೆ. ವಿಳಂಬ ಪ್ರಶ್ನಿಸಿದ್ದ ಸಂಜೌಲಿಯ ಕೆಲವು ಹಿಂದೂಪರ ಸಂಘಟನೆಗಳು ಕಳೆದ ತಿಂಗಳು ಶಿಮ್ಲಾದಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದವು ಹಾಗೂ ಆ ವೇಳೆ ಹಿಂಸಾಚಾರ ನಡೆದಿತ್ತು. ಬಳಿಕ ಮುಸ್ಲಿಂ ಸಂಘಟನೆಗಳು ತಾವೇ ಅಕ್ರಮ ಭಾಗಗಳನ್ನು ತೆರವು ಮಾಡುತ್ತೇವೆ ಎಂದು ಸರ್ಕಾರದ ಅನುಮತಿ ಕೋರಿದ್ದವು.

ಕೋಲ್ಕತಾ ಕಿರಿಯ ವೈದ್ಯರ ಅನಿದಿಷ್ಟಾವಧಿ ಉಪವಾಸ

ಕೋಲ್ಕತಾ: ಆರ್‌ಜಿ ಕರ್‌ ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಳಿಕ ಪ್ರತಿಭಟನೆ ನಡೆಸುತ್ತಿರುವ ಕಿರಿಯ ವೈದ್ಯರು ತಾವು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೇಳಿದ್ದಾರೆ. ಸೆ.16ರಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಜೊತೆಗೆ ಸಭೆಯಲ್ಲಿ ತೆಗೆದುಕೊಂಡು ಕ್ರಮಗಳನ್ನು ಸರ್ಕಾರ ಜಾರಿಗೊಳಿಸಿಲ್ಲ. ಹೀಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದಾಗಿ ವೈದ್ಯರು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ವೈದ್ಯರೊಬ್ಬರು, ಸಭೆಯ ನಿರ್ಧಾರಗಳನ್ನು ಜಾರಿಗೊಳಿಸಲು ಒಂದು ದಿನದ ಕಾಲಾವಕಾಶವನ್ನು ಸರ್ಕಾರಕ್ಕೆ ನೀಡಿದ್ದೆವು. ಆದರೆ ಸರ್ಕಾರ ವಿಫಲವಾಗಿದೆ. ಹೀಗಾಗಿ ಅನಿರ್ದಿಷ್ಟಾವಧಿಗೆ ಉಪವಾಸ ನಡೆಸುತ್ತೇವೆ. ಇದರಲ್ಲಿ ಪಾರದರ್ಶಕತೆ ಇರಲು ಉಪವಾಸ ಸ್ಥಳದಲ್ಲಿ ಸಿಸಿಟೀವಿ ಕ್ಯಾಮೆರಾ ಅಳವಡಿಸಿದ್ದೇವೆ’ ಎಂದು ಹೇಳಿದರು.

ಪ್ರವಾದಿ ಮೊಹಮ್ಮದ್‌ ಬಗ್ಗೆ ಹೇಳಿಕೆ: ಯತಿ ನರಸಿಂಗಾನಂದ್‌ ವಶಕ್ಕೆ

ಗಾಜಿಯಾಬಾದ್‌: ಪ್ರವಾದಿ ಮೊಹಮ್ಮದ್‌ ಕುರಿತು ಹೇಳಿಕೆ ವಿವಾದದ ಬೆನ್ನಲ್ಲೇ ದಸ್ನಾ ದೇಗುಲದ ಯತಿ ನರಸಿಂಗಾನಂದ್‌ ಅವರನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ. ನರಸಿಂಗಾನಂದ್‌ ಬಂಧನಕ್ಕೆ ಆಗ್ರಹಿಸಿ ಮುಸ್ಲಿಮರು ಭಾರೀ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಸೆ.29ರಂದು ದಸ್ನಾ ದೇಗುಲದಲ್ಲಿ ಭಕ್ತರನ್ನು ಉದ್ಧೇಶಿಸಿ ಮಾತನಾಡುವ ವೇಳೆ, ನೀವು ದಸರಾ ವೇಳೆ ಪ್ರತಿಕೃತಿ ದಹಿಸುವುದಾದರೆ ಪ್ರವಾದಿ ಮೊಹಮ್ಮದ್‌ ಅವರ ಪ್ರತಿಕೃತಿ ದಹಿಸಿ ಎಂದು ಕರೆ ನೀಡಿದ್ದರು. ಈ ಕುರಿತ ವಿಡಿಯೋ ಶನಿವಾರ ವೈರಲ್‌ ಆದ ಬೆನ್ನಲ್ಲೇ ಮುಸ್ಲಿಮರು ಪ್ರತಿಭಟನೆ ನಡೆಸಿದ್ದರು. ಇಂಥದ್ದೇ ಹೇಳಿಕೆ ವಿರುದ್ಧ ಇತ್ತೀಚೆಗೆ ಮಹಾರಾಷ್ಟ್ರದಲ್ಲೂ ನರಸಿಂಗಾನಂದ್‌ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

Share this article