ಮಾಲ್ಡಾ: ಪಶ್ಚಿಮ ಬಂಗಾಳದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬಲಪಡಿಸಲು ಕಾಂಗ್ರೆಸ್, ಸಿಪಿಎಂ ಜೊತೆ ಕೈಜೋಡಿಸುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಈ ಮೂಲಕ ಮತ್ತೊಮ್ಮೆ ಇಂಡಿಯಾ ಮೈತ್ರಿಕೂಟದಲ್ಲಿನ ಬಿರುಕು ಬಹಿರಂಗಗೊಂಡಿದೆ.
ಮಾಲ್ಡಾದಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಮಮತಾ ‘ರಾಜ್ಯದಲ್ಲಿ 2 ಸ್ಥಾನಗಳಲ್ಲಿ ಸ್ಪರ್ಧಿಸುವಂತೆ ನಾವು ನೀಡಿದ ಪ್ರಸ್ತಾಪವನ್ನು ಕಾಂಗ್ರೆಸ್ ನಿರಾಕರಿಸಿದೆ. ಹೀಗಾಗಿ ಚುನಾವಣೆಯಲ್ಲಿ ಟಿಎಂಸಿ ಏಕಾಂಗಿಯಾಗಿಯೇ ಹೋರಾಡಲು ನಿರ್ಧರಿಸಿದೆ’ ಎಂದರು.‘ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ ಒಬ್ಬನೇ ಒಬ್ಬ ಶಾಸಕನೂ ಇಲ್ಲ. ಆದರೆ ನಾನು ಅವರಿಗೆ 2 ಲೋಕಸಭೆ ಸ್ಥಾನಗಳನ್ನು ನೀಡಿದ್ದೆ. ಆದರೆ ಅವರಿಗೆ ಹೆಚ್ಚು ಸ್ಥಾನಗಳು ಬೇಕಿದ್ದವು. ಹೀಗಾಗಿ ಕಾಂಗ್ರೆಸ್ ಜೊತೆ ಒಂದೇ ಒಂದು ಸೀಟು ಹಂಚಿಕೆಯನ್ನೂ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದೇನೆ. ಬಿಜೆಪಿ ಬಲಪಡಿಸಲು ಕಾಂಗ್ರೆಸ್ ಸಿಪಿಎಂ ಜೊತೆಗೆ ಚುನಾವಣೆಯಲ್ಲಿ ಹೋರಾಡಲು ಮುಂದಾಗಿದೆ. ರಾಜ್ಯದಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಟಿಎಂಸಿ ಮಾತ್ರವೇ ಸಮರ್ಥವಾಗಿದೆ’ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ವೇಳೆ ಸಿಪಿಎಂ ವಿರುದ್ಧವೂ ಕಿಡಿಕಾರಿದ ಮಮತಾ ‘ರಾಜ್ಯದಲ್ಲಿ ತನ್ನ 34 ವರ್ಷಗಳ ಆಡಳಿತಾವಧಿಯಲ್ಲಿ ಸಿಪಿಎಂ ಜನರಿಗೆ ಹಿಂಸೆ ನೀಡಿದೆ. ಕಾಂಗ್ರೆಸ್ ಇದನ್ನೆಲ್ಲ ಮರೆತಿದೆಯೇ? ಸಿಪಿಎಂ ಹಾಗೂ ಅದನ್ನು ಬೆಂಬಲಿಸುವವರನ್ನು ನಾನು ಎಂದಿಗೂ ಕ್ಷಮಿಸುವುದಿಲ್ಲ’ ಎಂದಿದ್ದಾರೆ.ಇಂಡಿಯಾ, ರಾಹುಲ್, ತೇಜಸ್ವಿ ವಿರುದ್ಧ ನಿತೀಶ್ ವಾಗ್ದಾಳಿಇಂಡಿಯಾ ಮೈತ್ರಿಕೂಟ ತೊರೆದು ಎನ್‌ಡಿಎ ಸೇರ್ಪಡೆಯಾದ ಬಳಿಕ ಬಿಹಾರದ ಮುಖ್ಯಮಂತ್ರಿ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್ ಬುಧವಾರ ಇಂಡಿಯಾ ಮೈತ್ರಿಕೂಟ, ರಾಹುಲ್ ಗಾಂಧಿ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.‘ನಾನು ಮೈತ್ರಿಕೂಟಕ್ಕೆ ಬೇರೆ ಹೆಸರು ಸೂಚಿಸಿದ್ದೆ. ಆದರೆ ಅವರು ಇಂಡಿಯಾ ಎಂದು ಹೆಸರಿಟ್ಟರು. ಅದರಿಂದ ಈಗ ನನಗೇನಾಗಬೇಕಿದೆ? ಮೈತ್ರಿಕೂಟದ ಯಶಸ್ಸಿಗೆ ನಾನು ಎಷ್ಟೆಲ್ಲಾ ಕೆಲಸ ಮಾಡಿದೆ. ಆದರೆ ಬೇರೆ ಪಕ್ಷಗಳೆಲ್ಲ ಸುಮ್ಮನೆ ಕುಳಿತಿದ್ದವು. ಸೀಟು ಹಂಚಿಕೆ ಮಾಡಿ ಎಂದು ನಾನು ಎಷ್ಟು ಕೇಳಿಕೊಂಡರೂ ಮಾಡಲಿಲ್ಲ. ಆದ್ದರಿಂದಲೇ ಮೈತ್ರಿಕೂಟ ತೊರೆದೆ’ ಎಂದು ಹೇಳಿದ್ದಾರೆ.ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಒಬ್ಬ ಬಚ್ಚಾ. ಬಿಹಾರಕ್ಕಾಗಿ ಜೆಡಿಯು ಏನು ಮಾಡಿದೆ ಎಂಬುದು ಅವನಿಗೆ ಗೊತ್ತಿಲ್ಲ ಎಂದೂ ಕಿಡಿಕಾರಿದ್ದಾರೆ.ಇದೇ ವೇಳೆ, ಬಿಹಾರದಲ್ಲಿ ನಡೆದ ಜಾತಿಗಣತಿಯ ಕ್ರೆಡಿಟ್ ತೆಗೆದುಕೊಳ್ಳಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಯತ್ನಿಸುತ್ತಿದ್ದಾರೆ ಎಂಬ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ‘ಬಿಹಾರದಲ್ಲಿ ಜಾತಿ ಗಣತಿ ನಡೆದಿದ್ದು ಯಾವಾಗ ಎಂಬುದೇ ರಾಹುಲ್‌ಗೆ ಮರೆತುಹೋಗಿದೆ. 2019-20ನೇ ಸಾಲಿನಲ್ಲಿ 9 ರಾಜಕೀಯ ಪಕ್ಷಗಳ ಉಪಸ್ಥಿತಿಯಲ್ಲಿ ನಾನು ಜಾತಿ ಗಣತಿ ನಡೆಸಿದೆ. ಆದರೆ ರಾಹುಲ್ ಗಾಂಧಿ ಸುಳ್ಳು ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ. ಅದಕ್ಕೆ ನಾನೇನು ಮಾಡಲು ಸಾಧ್ಯ? ತೆಗೆದುಕೊಳ್ಳಲಿ ಬಿಡಿ’ ಎಂದು ಹೇಳಿದ್ದಾರೆ.