ಇಂಡಿಯಾ ಕೂಟದಲ್ಲಿ ಬಿರುಕು: ದೀದಿ, ಕಾಂಗ್ರೆಸ್‌ ವಾಕ್ಸಮರ

KannadaprabhaNewsNetwork |  
Published : Jan 24, 2024, 02:06 AM ISTUpdated : Jan 24, 2024, 07:32 AM IST
mamatha banerjee

ಸಾರಾಂಶ

240 ಸೀಟನ್ನು ನಮಗೆ ಕಾಂಗ್ರೆಸ್‌ ಬಿಟ್ಟುಕೊಡಲಿ ಎಂದು ಮಮತಾ ಆಗ್ರಹಿಸಿದ್ದಾರೆ. ಬಿಜೆಪಿ ಗೆಲ್ಲಿಸಲು ದೀದಿ ಹುನ್ನಾರ ಮಾಡಿದ್ದಾರೆ ಎಂದು ಕಾಂಗ್ರಸಿನ ಅಧೀರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧೀರ್‌ ಟೀಕೆಗೆ ಬೆಲೆಯಿಲ್ಲ, ನಮ್ಮ-ದೀದಿ ಸ್ನೇಹ ಚೆನ್ನಾಗಿದೆ ಎಂದು ರಾಹುಲ್‌ ತೇಪೆ ಹಚ್ಚಿದ್ದಾರೆ.

ಕೋಲ್ಕತಾ: ವಿಪಕ್ಷಗಳ ಇಂಡಿಯಾ ಕೂಟದಲ್ಲಿ ಒಡಕು ಮುಂದುವರಿದಿದ್ದು, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಮುಖಂಡ ಅಧೀರ್‌ ರಂಜನ್‌ ಚೌಧರಿ ಹಾಗೂ ಸಿಪಿಎಂ ಮುಖಂಡ ಸುಜನ್‌ ಚಕ್ರವರ್ತಿ ನಡುವೆ ಮಾತಿನ ಸಮರ ಏರ್ಪಟ್ಟಿದೆ. 

ಈ ಸಮರದ ನಡುವೆ ಬಿರುಕಿಗೆ ತೇಪೆ ಹಚ್ಚಲು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಯತ್ನಿಸಿದ್ದಾರೆ.

ಕೋಲ್ಕತಾದಲ್ಲಿ ಮಾತನಾಡಿದ ಮಮತಾ, ‘ಕಾಂಗ್ರೆಸ್‌ ಪಕ್ಷ 300 ಸೀಟಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿ. ಉಳಿದ ಸುಮಾರು 240 ಸ್ಥಾನಗಳನ್ನು ಟಿಎಂಸಿಗೆ ಹಾಗೂ ಇತರ ಪ್ರಾದೇಶಿಕ ಪಕ್ಷಗಳಿಗೆ ಬಿಟ್ಟುಕೊಡಬೇಕು. 

ಸೀಟು ಹಂಚಿಕೆ ವಿಳಂಬ ಸಲ್ಲದು’ ಎಂದು ಆಗ್ರಹಿಸಿದರು. ಅಲ್ಲದೆ, ‘ಇಂಡಿಯಾ ಕೂಟ ನಿಯಂತ್ರಿಸಲು ಸಿಪಿಎಂ ಯತ್ನ ನಡೆಸುತ್ತಿದೆ’ ಎಂದು ದೂರಿದರು ಮತ್ತು ‘ಬಿಜೆಪಿ ರಾಮಮಂದಿರ ಅಜೆಂಡಾ ಹಣಿಯಲು ವಿಪಕ್ಷದವರು (ರಾಹುಲ್‌ ಗಾಂಧಿ) ಕೇವಲ ದೇಗುಲ ದರ್ಶನ ಮಾಡಿದರೆ ಸಾಲದು. 

ನನ್ನ ರೀತಿ ಮಸೀದಿ, ಮಂದಿರ, ಗುರುದ್ವಾರಕ್ಕೂ ಹೋಗಬೇಕು’ ಎಂದರು.ಇದಕ್ಕೆ ಕಾಂಗ್ರೆಸ್ಸಿಗ ಅಧೀರ್‌ ತಿರುಗೇಟು ನೀಡಿ, ‘ಬಿಜೆಪಿಗೆ ಸಹಾಯ ಮಾಡಲು ಮಮತಾ ಇಂಥ ಹೇಳಿಕೆ ನೀಡುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ. 

ಇನ್ನು ಸಿಪಿಎಂನ ಚಕ್ರವರ್ತಿ ಮಾತನಾಡಿ, ‘ಇಂಡಿಯಾ ಕೂಟವನ್ನು ಸಿಪಿಎಂ ನಿಯಂತ್ರಿಸುತ್ತಿದೆ ಎಂಬುದು ಸುಳ್ಳು’ ಎಂದಿದ್ದಾರೆ.

ರಾಹುಲ್‌ ತೇಪೆ: ಇನ್ನು ಅಸ್ಸಾಂನಲ್ಲಿ ರಾಹುಲ್ ಗಾಂಧಿ ಮಾತನಾಡಿ, ‘ನಮಗೂ ಮಮತಾ ಬ್ಯಾನರ್ಜಿಗೂ ಉತ್ತಮ ಸ್ನೇಹವಿದೆ. ಮಮತಾ ಬಗ್ಗೆ ನಮ್ಮ ಅಧೀರ್‌ ಹೇಳಿಕೆಗಳು ಲೆಕ್ಕಕ್ಕೆ ಬರುವುದಿಲ್ಲ’ ಎಂದರು.

ದೇಶಾದ್ಯಂತ ಕಾಂಗ್ರೆಸ್‌ ರಾಜ್ಯಮಟ್ಟದ ಕಾರ್ಯಕರ್ತರ ಸಮಾವೇಶ: 2024ರ ಸಾರ್ವತ್ರಿಕ ಚುನಾವಣಾ ಸಮರಕ್ಕೆ ಸಿದ್ಧವಾಗುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಕಾರ್ಯಕರ್ತರ ಸಮಾವೇಶಗಳನ್ನು ದೇಶಾದ್ಯಂತ ಕೈಗೊಳ್ಳಲು ಕಾಂಗ್ರೆಸ್‌ ನಿರ್ಧರಿಸಿದೆ. 

ಈ ಸಮಾವೇಶಗಳಿಗೆ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರೇ ಅಧ್ಯಕ್ಷತೆ ವಹಿಸಲಿದ್ದಾರೆ. ಇಂತಹ ಮೊದಲ ಸಭೆ ಗುರುವಾರದಿಂದಲೇ ಆರಂಭವಾಗಲಿದ್ದು, ತೆಲಂಗಾಣದಲ್ಲಿ ಮೊದಲ ರಾಜ್ಯ ಮಟ್ಟದ ಕಾಂಗ್ರೆಸ್‌ ಸಮಾವೇಶ ಆಯೋಜನೆಯಾಗಿದೆ.

ಸಂಘಟನಾ ಕಾರ್ಯಕರ್ತರಿಗೆ ಶಕ್ತಿ ತುಂಬುವ ಉದ್ದೇಶದಿಂದ ಸಮಾವೇಶಗಳನ್ನು ಆಯೋಜಿಸಲಾಗುತ್ತಿದೆ ಎಂದು ಪಕ್ಷ ಹೇಳಿದೆ.

ಗುರುವಾರ ತೆಲಂಗಾಣದಲ್ಲಿ, ಜ.28ರಂದು ಉತ್ತರಾಖಂಡದಲ್ಲಿ, ಜ.29ರಂದು ಒಡಿಶಾದಲ್ಲಿ, ಫೆ.3 ರಂದು ದೆಹಲಿಯಲ್ಲಿ, ಫೆ.4 ರಂದು ಕೇರಳದಲ್ಲಿ, ಫೆ.10 ರಂದು ಹಿಮಾಚಲ ಪ್ರದೇಶದಲ್ಲಿ, ಫೆ.11 ರಂದು ಪಂಜಾಬ್‌ನಲ್ಲಿ ರಾಜ್ಯ ಮಟ್ಟದ ಕಾರ್ಯಕರ್ತರ ಸಮಾವೇಶ ನಡೆಸಲಾಗುತ್ತದೆ. 

ಫೆ.13 ರಂದು ತಮಿಳುನಾಡು ಮತ್ತು ಫೆ.15 ರಂದು ಜಾರ್ಖಂಡ್‌ನಲ್ಲಿ ರ್‍ಯಾಲಿಗಳು ನಡೆಯಲಿವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಮಂಗಳವಾರ ಹೇಳಿದ್ದಾರೆ.

ಈ ಎಲ್ಲ ಸಭೆಗಳ ಅಧ್ಯಕ್ಷತೆಯನ್ನು ಖರ್ಗೆ ಅವರೇ ವಹಿಸಲಿದ್ದಾರೆ. ಈ ವೇಳೆ ಕಾರ್ಯಕರ್ತರನ್ನು ಚುನಾವಣೆಗೆ ಅಣಿಯಾಗಲು ಹುರಿದುಂಬಿಸಲಿದ್ದಾರೆ ಎಂದರು.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ