ಅಮಲು ಬರುವ ಆಹಾರ ನೀಡಿ ಬಳಿಕ ಅವರ ಕತ್ತು ಕೊಯ್ದು ನಾಲ್ವರು ಸೋದರಿಯರು, ತಾಯಿ ಹತ್ಯೆಗೈದವನ ಸೆರೆ

KannadaprabhaNewsNetwork | Updated : Jan 02 2025, 04:33 AM IST

ಸಾರಾಂಶ

ಯುವಕನೊಬ್ಬ ತನ್ನ ನಾಲ್ವರು ಸೋದರಿಯರು ಮತ್ತು ತಾಯಿಗೆ ಅಮಲು ಬರುವ ಆಹಾರ ನೀಡಿ ಬಳಿಕ ಅವರ ಕತ್ತು ಕೊಯ್ದು ಹತ್ಯೆ ಮಾಡಿರುವ ಭೀಕರ ಘಟನೆ ಉತ್ತರಪ್ರದೇಶ ರಾಜಧಾನಿ ಲಖನೌದ ಹೋಟೆಲ್‌ನಲ್ಲಿ ನಡೆದಿದೆ. ಘಟನೆ ಸಂಬಂಧ ಅರ್ಷದ್‌ (24) ಎಂಬಾತನನ್ನು ಬಂಧಿಸಲಾಗಿದೆ.

ಲಖನೌ: ಯುವಕನೊಬ್ಬ ತನ್ನ ನಾಲ್ವರು ಸೋದರಿಯರು ಮತ್ತು ತಾಯಿಗೆ ಅಮಲು ಬರುವ ಆಹಾರ ನೀಡಿ ಬಳಿಕ ಅವರ ಕತ್ತು ಕೊಯ್ದು ಹತ್ಯೆ ಮಾಡಿರುವ ಭೀಕರ ಘಟನೆ ಉತ್ತರಪ್ರದೇಶ ರಾಜಧಾನಿ ಲಖನೌದ ಹೋಟೆಲ್‌ನಲ್ಲಿ ನಡೆದಿದೆ. ಘಟನೆ ಸಂಬಂಧ ಅರ್ಷದ್‌ (24) ಎಂಬಾತನನ್ನು ಬಂಧಿಸಲಾಗಿದೆ.

ನನ್ನ ನೆರೆಹೊರೆಯವರ ಕಿರುಕುಳ ಮತ್ತು ಸ್ಥಳೀಯ ಮುಸ್ಲಿಮರ ಕಾಟ ತಡೆಯಲಾರದೇ ನಾನು ಈ ಕೃತ್ಯ ಎಸಗಿದ್ದೇನೆ ಎಂದು ಹತ್ಯೆ ಬಳಿಕ ಅರ್ಷದ್‌ ವಿಡಿಯೋವೊಂದನ್ನು ಚಿತ್ರೀಕರಿಸಿ ಅದನ್ನು ಜಾಲತಾಣದಲ್ಲಿ ಹಾಕಿದ್ದಾನೆ. ಈ ನಡುವೆ ಕೌಟುಂಬಿಕ ಕಲಹದಿಂದ ಹತಾಶನಾಗಿ ಈ ಕಗ್ಗೊಲೆ ನಡೆಸಿದ್ದಾಗಿ ಅರ್ಷದ್‌ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅರ್ಷದ್‌ನ ತಂದೆ ಬದರ್‌ ಕೂಡ ಈ ಪ್ರಕರಣದ ಆರೋಪಿ ಎಂದು ಪರಿಗಣಿಸಲಾಗಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಏನಿದು ಘಟನೆ?:

ಆಗ್ರಾ ನಿವಾಸಿಯಾಗಿರುವ ಅರ್ಷದ್‌ ಪರಿವಾರದ ಸಮಸ್ಯೆಗಳಿಂದ ಬೇಸತ್ತಿದ್ದ. ಇದೇ ಕಾರಣಕ್ಕೆ, ತಾಯಿ ಹಾಗೂ ತಂಗಿಯರಿಗೆ ಮದ್ಯೆ ಕುಡಿಸಿ, ಅಮಲು ಬರಿಸುವ ಆಹಾರ ತಿನ್ನಿಸಿದ್ದಾನೆ. ನಂತರ ಕೆಲವರ ಕತ್ತು ಹಿಸುಕಿ ಹಾಗೂ ಬ್ಲೇಡ್‌ನಿಂದ ಹೊಟೆಲ್‌ನ ಕೋಣೆಯಲ್ಲಿ ಮಲಗಿದ್ದ ತನ್ನ ತಾಯಿ ಆಸ್ಮಾ ಹಾಗೂ ಸಹೋದರಿಯರಾದ ಆಲಿಯಾ (9), ಅಲಿಶಾ (19), ಅಕ್ಸಾ (16), ರಹಮೀನ್‌ (18)ರನ್ನು ಕೊಂದಿದ್ದಾನೆ.

ಕೃತ್ಯದ ಬಳಿಕ ವಿಡಿಯೋ ರೆಕಾರ್ಡ್‌ ಮಾಡಿರುವ ಅರ್ಷದ್‌, ‘ಆಗ್ರಾದಲ್ಲಿರುವ ತಮ್ಮ ಆಸ್ತಿಯ ಮೇಲೆ ನೆರೆಹೊರೆಯವರು ಕಣ್ಣಿಟ್ಟಿದ್ದು, ತಂಗಿಯರನ್ನು ಹೈದರಾಬಾದ್‌ಗೆ ಮಾರಲು ಸಂಚು ರೂಪಿಸಿದ್ದರು. ಇದರಿಂದ ನೊಂದು ಅವರನ್ನೆಲ್ಲಾ ಕೊಂದೆ’ ಎಂದು ಹೇಳಿದ್ದಾನೆ. ನನ್ನ ಜಮೀನು ಕಬಳಿಸಲು ಹಲವರು ಸಂಚು ರೂಪಿಸಿದ್ದರು. ಹೀಗಾಗಿ ನಾವು ಹಿಂದೂ ಧರ್ಮಕ್ಕೆ ಮತಾಂತರವಾಗಿ, ಮನೆ ಜಾಗದಲ್ಲಿ ದೇಗುಲ ನಿರ್ಮಿಸಲು ಉದ್ದೇಶಿಸಿದ್ದೆವು ಎಂದು ಅರ್ಷದ್‌ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

Share this article